ರಿಪ್ಪನ್‌ಪೇಟೆ ; ಸನಾತನ ಸಂಸ್ಕೃತಿಯಲ್ಲಿ ಭಗವಂತನಿಗಿಂತ ಪೂಜ್ಯನೀಯ ಸ್ಥಾನ ಗುರುವಿಗೆ ನೀಡಲಾಗಿದೆ ಎಂದು ಹೊಂಬುಜ ಜೈನಮಠದ ಡಾ.ದೇವೇಂದ್ರಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ಗರ್ತಿಕೆರೆ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೂತನ ರಥ ಮತ್ತು ರಜತ ಕವಚ ಸಮರ್ಪಣೆ ಮತ್ತು ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿಯ ಸನಾತನ ಧರ್ಮದ ಗ್ರಂಥಗಳನ್ನು ವಿದೇಶಿಗರು ಅಧ್ಯಯನ ಮಾಡುವ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದು ಹೆಮ್ಮಯ ಸಂಗತಿಯಾಗಿದೆ. ಆದರೆ ನಮ್ಮ ಭಾರತೀಯರು ಇನ್ನೂ ಜಿಜ್ಞಾಸೆಗಳಲ್ಲಿ ಕಾಲಕಳೆಯುತ್ತಿದ್ದಾರೆ.

ವಿದೇಶಿಗರು ಅತ್ಯಧಿಕ ಸಂಪತ್ತು ಹೊಂದಿ ಐಶಾರಾಮಿ ಜೀವನ ನಡೆಸುತ್ತಿದ್ದರೂ ಕೂಡಾ ಎಲ್ಲವನ್ನು ತೊರೆದು ಭಾರತೀಯ ಸಂಸ್ಕೃತಿ ಸಂಸ್ಕಾರಕ್ಕೆ ಮಾರು ಹೋಗಿ ಭಾರತ ದೇಶದ ಆಶ್ರಮಗಳಲ್ಲಿ ಸೇವೆಯ ಮೂಲಕ ನೆಮ್ಮದಿಯನ್ನು ಕಾಣುತ್ತಿದ್ದಾರೆಂದ ಅವರು 15-16ನೇ ಶತಮಾನದ ಭಕ್ತಿ ಪರಂಪರೆಯ ಕಾಲಘಟ್ಟ ಕನಕದಾಸ ಪುರಂದರದಾಸ ಹಾಗೂ ರಾಘವೇಂದ್ರ ಸ್ವಾಮಿಗಳು ದೈವಾರಾಧನೆಯ ಮೂಲಕ ಜನರಿಗೆ ಒಳಿತನ್ನು ಕಂಡು ಕೊಳ್ಳುವ ಸಂದೇಶ ನೀಡಿ ಕಲಿಯುಗದ ಕಲ್ಪವೃಕ್ಷರಾಗಿದ್ದಾರೆಂದು ಹೇಳಿ ಗುರುರಾಯರಿಗೆ ಜಾತಿ ಧರ್ಮ ಬೇದ ಭಾವನೆಯಿಲ್ಲದೆ ತಮ್ಮನ್ನು ಅರಾಧಿಸುವ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಕಲ್ಪಿಸುವ ಕಾಮದೇನುವಾಗಿದ್ದಾರೆಂದರು.

ಭೀಮನಕಟ್ಟೆ ಭೀಮಸೇತು ಮುನಿವೃಂದದ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಅಶೀರ್ವಚನ ನೀಡಿ ಭಜನೆ ಕೀರ್ತನೆಗಳ ಮೂಲಕ ದೇವರನ್ನು ಭಜಿಸಿ ನೆಮ್ಮದಿಯನ್ನು ಕಾಣುವಂತಾಗಬೇಕು. ಗುರುರಾಘವೇಂದ್ರ ಸ್ವಾಮಿಗಳಂತಹ ಅನೇಕ ದಾರ್ಶನಿಕರು ಭಾರತೀಯ ಸಂಸ್ಕೃತಿಯಲ್ಲಿ ಧರ್ಮಮಾಗದಲ್ಲಿ ನಡೆದುಕೊಳ್ಳುವ ಮೂಲಕ ಇಂದಿನ ಯುವ ಸಮೂಹಕ್ಕೆ ಸನ್ಮಾರ್ಗದೊಂದಿಗೆ ನಮ್ಮ ಪುರಾತನ ಪರಂಪರೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಣುವಂತಾಗಲಿ ಎಂದರು.

ನಿಟ್ಟೂರು ನಾರಾಯಣಗುರು ಮಠಧ ರೇಣುಕಾನಂದ ಸ್ವಾಮೀಜಿ ಧಾರ್ಮಿಕ ಸಮಾರಂಭದಲ್ಲಿ ಉಪಸ್ಥಿತರಿದ್ದು ತಮ್ಮ ಉಪದೇಶಾಮೃತವನ್ನು ನೀಡಿ ಮನುಷ್ಯನ ಬದುಕಿಗೆ ಶಾಂತಿ ನೆಮ್ಮದಿ ಕೊಡುವುದೇ ಧರ್ಮ ಎಂಬುದನ್ನು ಅನೇಕ ಭಾರತೀಯ ಋಷಿಮುನಿಗಳು ಹೇಳಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಪರಿಪೂರ್ಣ ಬದುಕಿ ಆಧ್ಯಾತ್ಮಿಕ ಚಿಂತನೆ ವರ್ತಮಾನದ ಅಗತ್ಯವಾಗಿದೆ. ಹಣ ಮುಖ್ಯವೆಂಬ ಭ್ರಮೆಯಲ್ಲಿರುವುದರಿಂದ ಜನರು ಅರೋಗ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ದುಡಿಮೆಯ ಅಲ್ಪಸ್ವಲ್ಪ ಹಣವನ್ನು ದಾನ ಧರ್ಮದ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದಾಗ ಮಾತ್ರ ಸಾರ್ಥಕ ಬದುಕಿಗೆ ಸಹಕಾರಿಯಾಗುವುದೆಂದರು.

ಭಜನಾ ಮಂಡಳಿಯ ಮಹಿಳೆಯರು ಪ್ರಾರ್ಥಿಸಿದರು. ಜೆ.ಪಿ.ಕಿರಣ್ ಸ್ವಾಗತಿಸಿದರು. ಕಾರ್ಯದರ್ಶಿ ಹೆಚ್.ಎಸ್. ಅನಂತಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಠದ ಕಟ್ಟಡ ಮತ್ತು ರಥ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ ದಾನಿಗಳನ್ನು ಶ್ರೀಗಳವರು ಸನ್ಮಾನಿಸಿ ಆಶೀರ್ವದಿಸಿದರು.
