ಹಸೆಮಣೆ ಏರಿ ಆರು ತಿಂಗಳಲ್ಲೇ ಮಸಣ ಸೇರಿದ ನವ ವಿವಾಹಿತೆ !

Written by Mahesha Hindlemane

Published on:

ಶಿವಮೊಗ್ಗ ; ಪತಿ, ಮತ್ತು ಅತ್ತೆಯ ಕಿರುಕುಳ ತಾಳಲಾರದೆ ನವವಿವಾಹಿತೆಯೊಬ್ಬಳು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕೂರಂಬಳ್ಳಿಯ ಗೂಜಾನುಮಕ್ಕಿ ಎಂಬಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾಲಾಶ್ರೀ (22) ಮೃತ ಮಹಿಳೆ. ಪತಿ ಅಶೋಕ್ ಹಾಗೂ ಅತ್ತೆಯ ಕಿರುಕುಳ ಹಾಗೂ ಹಿಂಸೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಟ್ಟಿನಕಾರು ಗ್ರಾಮದ ಯಡಮನೆ ಮೂಲದ ಮಾಲಾಶ್ರೀ ಅವರನ್ನು ಕುರಂಬಳ್ಳಿಯ ಗಾಜಾನುಮಕ್ಕಿಯ ಅಶೋಕ್ ಎಂಬಾತನಿಗೆ ಕಳೆದ ಏಪ್ರಿಲ್ 23 ರಂದು ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದಾಗಿನಿಂದ ಪತಿ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರು. ತವರಿಗೆ ಮಾಲಾಶ್ರೀ ಹೋಗುವಂತಿರಲಿಲ್ಲ, ತವರು ಮನೆಯವರೊಂದಿಗೆ ಮಾತನಾಡುವಂತಿರಲಿಲ್ಲ, ತವರಿಗೆ ಹೋದರೂ ಪತಿಯ ಜೊತೆಯೇ ಹೋಗಿ ಆತನೊಂದಿಗೆ ವಾಪಸ್ ಆಗಬೇಕು. ಹೀಗೆ ಇನ್ನಿಲ್ಲದ ಕಿರುಕುಳವನ್ನು ನೀಡುತ್ತಿದ್ದರಂತೆ. ಇದರಿಂದ ಮನನೊಂದ ಮಾಲಾಶ್ರೀ ಅ.19ರಂದು ವಿಷ ಸೇವಿಸಿದ್ದಳು. ತೀವ್ರ ಅಸ್ವಸ್ಥಳಾಗಿದ್ದ ಮಾಲಾಶ್ರೀಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ವಿಷಯ ಮುಚ್ಚಿಟ್ಟಿದ್ದ ಪತಿ !

ಮಾಲಾಶ್ರೀ ವಿಷ ಸೇವಿಸಿರುವ ವಿಷಯವನ್ನು ಆಶೋಕ್‌, ಮಾಲಾಶ್ರೀಯ ಕುಟುಂಬಸ್ಥರಿಂದ 3 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಿಟ್ಟಿದ್ದ. ಆಸ್ಪತ್ರೆಗೆ ಸೇರಿಸಿದ್ದರೂ, ವಾಂತಿ-ಬೇಧಿ ಎಂದು ಆಸ್ಪತ್ರೆಗೆ ಸೇರಿಸಿದ್ದಾಗಿ ಆಶೋಕ್ ಹೇಳಿದ್ದ ಎನ್ನಲಾಗಿದೆ. ಅ.22 ರ ಮಧ್ಯಾಹ್ನ ಮಾಲಾಶ್ರೀಯ ತಂದೆ ಕರೆ ಮಾಡಿದಾಗ, ಆಕೆ ಐಸಿಯೂನಲ್ಲಿ ಇದ್ದಾಳೆ ಎಂದು ಅಶೋಕ್ ತಿಳಿಸಿದ್ದ. ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಬಂದ ಮಾಲಾಶ್ರೀ ಅವರ ಕುಟುಂಬಸ್ಥರಿಗೆ, ಮಾಲಾಶ್ರೀ ಮೃತಪಟ್ಟಿರುವುದು ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮಗಳ ಸಾವಿನ ವಿಷಯ ತಿಳಿದು ಪೋಷಕರು ಆಸ್ಪತ್ರೆಗೆ ಬರುತ್ತಿದ್ದಂತೆ, ಪತಿ ಅಶೋಕ್‌ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಮಗಳ ಸಾವಿಗೆ ಪತಿ ಅಶೋಕ್ ಹಾಗೂ ಅತ್ತೆ ಕಾರಣ ಎಂದು ಮಾಲಾಶ್ರೀ ಪೋಷಕರು ದೂರು ದಾಖಲಿಸಿದ್ದು, ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಅಶೋಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment