ಹೊಸನಗರ ; ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಯಾವುದೇ ಅರ್ಜಿ ವಗೈರೆ ಹಾಗೂ ಛಾಪಾ ಕಾಗದದ ಅಗತ್ಯವಿಲ್ಲ ಎಂದು ಹೊಸನಗರದ ಗ್ರೇಡ್-2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಯೋಜನೆಯಾದ ಸಾಮಾಜಿಕ ಭದ್ರತೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ಭದ್ರತ ಯೋಜನೆ ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸರ್ಕಾರ ಜಾರಿಗೆ ತಂದಿದ್ದು ಇದರ ಜೊತೆಗೆ ವಿಧಾವವೇತನ ಇನ್ನಿತರ ಯೋಜನೆಗಳಿಗೆ ಈ ಹಿಂದೆ ಅರ್ಜಿಯನ್ನು ಜೆರಾಕ್ಸ್ ಅಂಗಡಿಯಲ್ಲಿ ಪಡೆದು ಅರ್ಜಿ ಭರ್ತಿ ಮಾಡಿ ಅದರ ಜೊತೆಗೆ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್‌ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಗಳನ್ನು ಇಟ್ಟು ಗ್ರಾಮ ಆಡಳಿತಾಧಿಕಾರಿಗೆ ನೀಡಬೇಕಿತ್ತು. ಇನ್ನು ಹೊರೆಯಾಗುವಂತೆ ಕಂಪ್ಯೂಟರ್‌ಕರಣದ ವಂಶವೃಕ್ಷವನ್ನು ಇಟ್ಟು ಅರ್ಜಿ ಸಲ್ಲಿಸಬೇಕಿತ್ತು. ವಂಶವೃಕ್ಷ ಪಡೆಯುವಲ್ಲಿ ಫಲಾನುಭವಿಗೆ ಆರ್ಥಿಕ ಹೊರೆಯಾಗುತ್ತಿತ್ತು ಹಾಗೂ ಸರ್ಕಾರದಿಂದ ವಂಶವೃಕ್ಷ ಪಡೆಯಲು ಸುಮಾರು 15 ದಿನ ಕಾಯುವ ಕೆಲಸವಾಗುತ್ತಿತ್ತು. ಫಲಾನುಭವಿಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ ಹಾಗೂ ಫಲಾನುಭವಿಯು ಅಲೆದಾಟ ತಪ್ಪಿಸುವ ಸಲುವಾಗಿ ಭದ್ರತ ಯೋಜನೆಯ ಫಲಾನುಭವಿಗಳಿಗೆ ಅನುಕೂಲಕರವಾಗಲಿ ಎಂಬ ದೃಷ್ಠಿಯಿಂದ ಫಲಾನುಭವಿ ಈ ಯೋಜನೆಗೆ ಒಳಪಟ್ಟರೆ ತಕ್ಷಣ ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳ ಕಛೇರಿಗೆ ಹೋಗಿ ನಿಮ್ಮ ಆಧಾರ್‌ಕಾರ್ಡ್, ರೇಷನ್‌ಕಾರ್ಡ್, ಗುರುತಿನ ಚೀಟಿಯೊಂದಿಗೆ ನಿಮ್ಮ ಖಾತೆಯ ಪಾಸ್‌ಪುಸ್ತಕ ಒರಿಜಿನಲ್ ದಾಖಲೆ ನೀಡಿದರೆ ಅವರು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುತ್ತಾರೆ. ನೀವು ತಾಲ್ಲೂಕು ಕಛೇರಿಗೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಛೇರಿಗೆ ಅಲೆಯುವುದು ತಪ್ಪುತ್ತದೆ. ಫಲಾನುಭವಿಗಳು ಗ್ರಾಮ ಒನ್ ಹಾಗೂ ಅಟಲ್‌ಜೀ ಕೇಂದ್ರಗಳಲ್ಲಿಯೂ ಓರಿಜಿನಲ್ ದಾಖಲೆ ತೋರಿಸಿ ಆನ್‌ಲೈನ್ ಅಪ್‌ಲೋಡ್ ಮಾಡಿಸಿಕೊಳ್ಳಬಹುದು. ಇದರ ಉಪಯೋಗವನ್ನು ಎಲ್ಲ ಫಲಾನುಭವಿಗಳು ಪಡೆದುಕೊಳ್ಳಬೇಕೆಂದು, ಆಕಸ್ಮಾತಾಗಿ ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಯ 4 ಹೋಬಳಿಗಳ ಫಲಾನುಭವಿಗಳಿಗೆ ಯಾವುದೇ ಅಧಿಕಾರಿ ಅಲೆದಾಟಿಸುತ್ತಿರುವುದನ್ನು ತಪ್ಪಿಸುವ ಉದ್ದೇಶ ಇಲಾಖೆಯಾದಾಗಿದ್ದು ಅಧಿಕಾರಿಗಳು ಸ್ಪಂದಿಸದಿದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕೆಂದು ಈ ಮೂಲಕ ಕೇಳಿಕೊಂಡರು.
ಛಾಪಾ ಕಾಗದದ ಅವಶ್ಯತೆಯಿಲ್ಲ :
ಹೊಸನಗರ ತಾಲ್ಲೂಕಿನ ಕೆಲವು ಗ್ರಾಮ ಆಡಳಿತಾಧಿಕಾರಿಗಳು ಸಾಮಾಜಿಕ ಭದ್ರತೆಗೆ ಒಳಪಡುವ ಫಲಾನುಭವಿಗಳಿಗೆ ಕಂಪ್ಯೂಟರ್‌ಕರಣದ ವಂಶವೃಕ್ಷ ಪಡೆಯಬೇಕು. ನೀವು 100 ರೂಪಾಯಿ ಛಾಪಾ ಕಾಗದದ ಮೇಲೆ ವಂಶವೃಕ್ಷವನ್ನು ಪಡೆದ ನಂತರ ಕಂಪ್ಯೂಟರ್ ವಂಶವೃಕ್ಷ ಪಡೆಯಬೇಕು. ಆ ನಂತರ ಫಲಾನುಭವಿಯು ಸಾಮಾಜಿಕ ಭದ್ರತೆ ಯೋಜನೆಗೆ ಒಳಪಡಿಸಲಾಗುವುದು ಎಂದು ಸಾರ್ವಜನಿಕರು ದೂರುಗಳು ನನ್ನ ಬಳಿ ಬಂದಿದ್ದು ಇನ್ನೂ ಮುಂದೆ ಯಾವುದೇ ಸಾಮಾಜಿಕ ಭದ್ರತೆ ಪಡೆಯುವ ಫಲಾನುಭವಿಯು ಛಾಪಾ ಕಾಗದ ಪಡೆದು ವಂಶವೃಕ್ಷ ಪಡೆಯುವ ಅಗತ್ಯವಿಲ್ಲ. ನೀವು ನಿಮ್ಮ ದಾಖಲೆ ಗ್ರಾಮ ಆಡಳಿತಾಧಿಕಾರಿಗಳಿಗೆ ತೋರಿಸಿದರೆ ಅವರೇ ನಿಮ್ಮ ಮನೆ ಬಾಗಿಲಿಗೆ ಬಂದು ದಾಖಲೆ ಪರಿಶೀಲಿಸಲಿದ್ದಾರೆ ಎಂದರು.