RIPPONPETE ; ಶಾಸಕ ಬೇಳೂರು ಗೋಪಾಲಕೃಷ್ಣರವರ ವಿಶೇಷ ಆಸಕ್ತಿಯಿಂದಾಗಿ ಸರ್ಕಾರದಿಂದ ಸುಮಾರು 4.85 ಕೋಟಿ ರೂ. ವೆಚ್ಚದಲ್ಲಿ ಸಾಗರ-ತೀರ್ಥಹಳ್ಳಿ ಸಂಪರ್ಕದ ತಲಾ ಒಂದು ಕಿ.ಮೀ. ರಾಜ್ಯ ಹೆದ್ದಾರಿಯ ಸಾಗರ ರಸ್ತೆಯ ಎಪಿಎಂಸಿ ಯಾರ್ಡ್‌ನಿಂದ ವಿನಾಯಕ ವೃತ್ತದ ಮೂಲಕ ತೀರ್ಥಹಳ್ಳಿ ರಸ್ತೆಯ ಗುಡ್‌ಶಫರ್ಡ್ ಚರ್ಚ್‌ವರೆಗೆ ದ್ವಿಪಥ ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು ಮಳೆಗಾಲದ ಕಾರಣ ಅರ್ಧಕ್ಕೆ ಕಾಮಗಾರಿ ನಿಲುವಂತಾಗಿ ಈಗ ಪುನಃ ಚಾಲನೆ ನೀಡುವುದರೊಂದಿಗೆ ಇನ್ನೂ ಹೆಚ್ಚುವರಿಯಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಕಾಮಗಾರಿಗೆ ಚುರುಕು ಮುಟ್ಟಿಸಿಸುವ ಮೂಲಕ ತೀರ್ಥಹಳ್ಳಿ ರಸ್ತೆಯ ವಿನಾಯಕ ವೃತ್ತದ ಮಾರ್ಗದಲ್ಲಿ ಹಾದು ಹೋಗುವ 11 ಕೆ.ವಿ. ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ರಸ್ತೆಯಂಚಿನಲ್ಲಿರುವ ಅಂಗಡಿ ಮಳಿಗೆದಾರರಿಗೆ ಧ್ವನಿವರ್ಧಕದ ಮೂಲಕ ವಾರದೊಳಗೆ ತೆರವುಗೊಳಿಸುವಂತೆ ಮೆಸ್ಕಾಂ ಇಲಾಖೆ ಸೂಚನೆ ನೀಡಿದೆ.
ಒಂದು ವಾರದೊಳಗೆ ತಾವು ಅಂಗಡಿ ಮಳಿಗೆಯನ್ನು ತೆರವುಗೊಳಿಸಿ ಕಾಮಗಾರಿಗೆ ಮುಕ್ತ ಅವಕಾಶವನ್ನು ಮಾಡಿಕೊಡುವಂತೆ ಮನವಿ ಮಾಡಲಾಗಿದ್ದು ಅದನ್ನು ಮೀರಿ ಮುಂದುವರಿದರೆ ಇಲಾಖೆಯವರೇ ತೆರವು ಕಾರ್ಯಾಚರಣೆಗೆ ಇಳಿಯಬೇಕಾಗುವುದೆಂದು ಸಹ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ದೀಪಾವಳಿ ಹಬ್ಬದಲ್ಲಿ ವ್ಯಾಪಾರ ಮಾಡಿಕೊಂಡು ನೆಮ್ಮದಿಯಿಂದ ಅದ್ದೂರಿಯಾಗಿ ಹಬ್ಬವನ್ನು ಆಚರಿಸುವ ಕನಸು ಕಾಣುತ್ತಿದ್ದವರಿಗೆ ಕರಾಳ ದೀಪಾವಳಿ ಹಬ್ಬ ಆಚರಿಸಬೇಕಾದ ಅನಿರ್ವಾಯತೆ ಎದುರಾಗಿದೆ.
ಸ್ಥಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿನಾಯಕ ವೃತ್ತದಲ್ಲಿ ತೀರ್ಥಹಳ್ಳಿ ಮಾರ್ಗದಲ್ಲಿ ಬಸ್ ನಿಲ್ದಾಣದ ಹೊಂದಿಕೊಂಡಂತೆ ಆಟೋ ಸ್ಟ್ಯಾಂಡ್ ಹೊಂಡ ಗುಂಡಿಯ ರಸ್ತೆ ಮಳೆಬಂತು ಎಂದರೆ ರಸ್ತೆಯ ಕೊಳಚೆ ನೀರು ವಾಹನಗಳ ದಟ್ಟಣೆಯಿಂದಾಗಿ ಪ್ರಯಾಣಿಕರಿಗೆ ಸಿಡಿದು ಸ್ನಾನ ಮಾಡಿಸುತ್ತದೆ. ಇದರಿಂದಾಗಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಮತ್ತು ಕರ್ತವ್ಯಕ್ಕೆ ತೆರಳುವ ನೌಕರವರ್ಗ ಹೀಗೆ ದೂರದೂರಿನಿಂದ ಬರುವ ಪ್ರವಾಸಿಗರು ಕೊಳಚೆ ನೀರಿನ ಮಜ್ಜನ ಮಾಡುವ ಸ್ಥಿತಿ ಎದುರಿಸಬೇಕಾಗಿದೆ.
ಇನ್ನಾದರೂ ಲೋಕೋಪಯೋಗಿ ಇಲಾಖೆಯವರು ಮತ್ತು ಮೆಸ್ಕಾಂ ಇಲಾಖೆಯವರ ದೃಢ ನಿರ್ಧಾರದಿಂದಾಗಿ ತೀರ್ಥಹಳ್ಳಿ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರದ ಕಾಮಗಾರಿಗೆ ಚುರುಕು ಮುಟ್ಟಿಸಿದಂತಾಗುವುದೇ ಕಾದು ನೋಡಬೇಕಾಗಿದೆ. ಈಗಾಗಲೇ ಸಾಗರ ರಸ್ತೆಯಲ್ಲಿ ಖಾಸಗಿ ಅಂಗಡಿ ಮಾಲೀಕರೊಬ್ಬರು ರಸ್ತೆ ಅಭಿವೃದ್ದಿ ಕಾಮಗಾರಿಗೆ ತಡೆಯೊಡ್ಡಿ ನ್ಯಾಯಾಲಯದ ತಡೆಯಾಜ್ಞೆ ಆದೇಶ ತಂದಿದ್ದು ಇದರಿಂದಾಗಿ ದ್ವಿಪಥ ರಸ್ತೆ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ಮಾಧ್ಯಮದವರಲ್ಲಿ ಹಂಚಿಕೊಂಡರು.