ಹೊಸನಗರದಲ್ಲಿ ಕೆಡಿಪಿ ಸಭೆ | ಮಳೆಗಾಲ ಎದುರಿಸಲು ಅಧಿಕಾರಿಗಳು ಸಿದ್ಧರಾಗಿ ; ಬೇಳೂರು ಗೋಪಾಲಕೃಷ್ಣ ಸೂಚನೆ

Written by malnadtimes.com

Published on:

Hosanagara | ಮುಂಗಾರು ಪೂರ್ವ ಮಳೆ (Monsoon Rain) ಉತ್ತಮ ರೀತಿಯಲ್ಲಿ ಆಗುತ್ತಿರುವುದು ಕೊಂಚ ಸಮಾಧಾನ ತಂದಿದೆ. ರೈತರು ಹಾಗೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದ ಕಡೆಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಅಧಿಕಾರಿ ವರ್ಗ ಮೈಮರೆಯುವಂತಿಲ್ಲ. ಜನ ಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹೇಳಿದರು.

WhatsApp Group Join Now
Telegram Group Join Now
Instagram Group Join Now

Read More:Dengue | ಡೆಂಗ್ಯೂಗೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ !

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳು, ತುರ್ತಾಗಿ ಆಗಬೇಕಾದ ಕೆಲಸಗಳ ನಿರ್ವಹಣೆಗೆ ಅಧಿಕಾರಿ ವರ್ಗ ತಾತ್ಸಾರ ತೋರುವುದನ್ನು ತಾವು ಸಹಿಸುವುದಿಲ್ಲ. ಕಾರ್ಯ ಸ್ಥಾನದಲ್ಲಿಯೇ ವಾಸವಿರಬೇಕು. ಅನಗತ್ಯ ರಜೆ ಹಾಕಿ ಹೋಗುವಂತಿಲ್ಲ ಎಂದು ಸೂಚನೆ ನೀಡಿದರು.

ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಿ :

ಹಲವು ಶಾಲೆಗಳಲ್ಲಿ ಕಟ್ಟಡ ದುಸ್ಥಿತಿಯಲ್ಲಿವೆ. ಪಾಠ ಪ್ರವಚನಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಆದರೆ ತಮ್ಮಿಂದ ಈವರೆಗೆ ಯಾವುದೇ ಮಾಹಿತಿ ನನಗೆ ಸಲ್ಲಿಕೆಯಾಗಿಲ್ಲ. ಸರ್ಕಾರದ ಅನುದಾನ ಅಗತ್ಯವಿಲ್ಲವೇ? ಕೇವಲ ಉತ್ತಮ ಫಲಿತಾಂಶ ಬಂದ ಮಾತ್ರಕ್ಕೆ ಸಾಲದು. ಮೂಲಸೌಕರ್ಯ ಕೊರತೆ ಸರಿಯಾಗಬೇಕಲ್ಲವೇ ? ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯದ ಶಾಲೆಗಳಲ್ಲಿ ಸುಧಾರಣೆಗೆ ಏನು ಕ್ರಮ ಕೈಗೊಳ್ಳಲಿದ್ದೀರಿ ? ಮಾಹಿತಿ ನೀಡಿ ಎಂದು ಬಿಇಓ ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ 122 ಶಿಕ್ಷಕರ ಕೊರತೆಯಿದೆ. ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಆದರೂ 22 ಶಿಕ್ಷಕರ ಕೊರತೆ ಇದೆ. ದುಸ್ಥಿತಿ ಇರುವ ಶಾಲೆಗಳ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ಸಭೆಗೆ ತಿಳಿಸಿದರು.

Beluru Gopalakrishna

ಬೇಜವಾಬ್ದಾರಿ ಅಧಿಕಾರಿಗಳನ್ನು ತೆಗೆದು ಹಾಕಿ :

ಹರಿದ್ರಾವತಿ, ಕಚ್ಚಿಗೆಬೈಲು ಶಾಲೆ ಕಟ್ಟಡ ದುಸ್ಥಿತಿಯಲ್ಲಿದೆ. ನಾನೇ ಖುದ್ದು ಭೇಟಿ ಮಾಡಿದ್ದೇನೆ. ಅವಶ್ಯ ದುರಸ್ಥಿ ಮಾಡಬೇಕಾದ ಶಾಲೆಗಳ ಮಾಹಿತಿ ನೀಡಬೇಕು. ಇಲ್ಲಿಯವರೆಗೆ ಯಾವ ಮಾಹಿತಿಯೂ ನಮಗೆ ಬರುತ್ತಿಲ್ಲ. ಅಲ್ಲಿನ ಬಿ.ಆರ್.ಸಿ., ಸಿ.ಆರ್.ಪಿ.ಗಳು ಏನು ಮಾಡುತ್ತಿದ್ದಾರೆ. ಅಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ತೆಗೆದು ಹಾಕಿ. ನಿಷ್ಟಾವಂತ ಕೆಲಸ ಮಾಡುವ‌ ಅಧಿಕಾರಿಗಳನ್ನು ನೇಮಿಸಿಕೊಳ್ಳಿ. ಮಳೆಗಾಲದಲ್ಲಿ ಮಕ್ಕಳು ಓಡಾಡಲೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕಾಲು ಸಂಕ ಬೇಕಿದ್ದರೆ ಅವಶ್ಯವಾಗಿ ಮಾಡಿಸೋಣ ಶಾಸಕ ಬೇಳೂರು ತಾಕೀತು ಮಾಡಿದರು.

Read More:ಮನೆ ಮೇಲೆ ಮರ ಬಿದ್ದು ಮಹಿಳೆ ಸ್ಥಿತಿ ಗಂಭೀರ !

ಅರಣ್ಯ ಇಲಾಖೆ ವಿರುದ್ಧ ಆಕ್ಷೇಪ :

ಜಲಜೀವನ್ ಮಿಷನ್ ಅಡಿಯಲ್ಲಿ ಟ್ಯಾಂಕ್ ನಿರ್ಮಾಣ, ಕೊಳವೆಬಾವಿ ಕೊರೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬಂದಾಗ ಶಾಸಕ ಬೇಳೂರು ಮಾತನಾಡಿ, ಮಲೆನಾಡಿನಲ್ಲಿ ಎಲ್ಲವೂ ಅರಣ್ಯ ಪ್ರದೇಶವೇ. ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೂ ತಾವು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರೈತರಿಗೆ ಸುಲಭ ರೀತಿಯಲ್ಲಿ ಸೌಲಭ್ಯ ದೊರೆಯಲು ವ್ಯವಸ್ಥೆ ಕೈಗೊಳ್ಳಿ :

ಕೃಷಿ ಇಲಾಖೆ ಅಧಿಕಾರಿಯಿಂದ ಭತ್ತ, ಜೋಳದ ಬೀಜ ಹಾಗೂ ರಸಗೊಬ್ಬರ ದಾಸ್ತಾನು, ಮಳೆಯ ಪ್ರಮಾಣದ ಮಾಹಿತಿಯನ್ನು ಪಡೆದ ಶಾಸಕರು, ರೈತರಿಗೆ ಎಲ್ಲಾ ಸೌಲಭ್ಯಗಳನ್ನು ಸುಲಭ ರೀತಿಯಲ್ಲಿ ದೊರೆಯುವಂತೆ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು.

ವಾಟ್ಸಾಪ್ ಗ್ರೂಪ್ ರಚಿಸಿ :

ತಾಲೂಕಿಗೆ ಸಂಬಂಧಿಸಿದಂತೆ ಕೆಲ ಮಾಹಿತಿಗಳನ್ನು ಅಧಿಕಾರಿ ವರ್ಗ ತಮ್ಮ ಕಛೇರಿ ಗಮನಕ್ಕೆ ತರುತ್ತಿಲ್ಲ. ಹಾಗಾಗಿ ಎಲ್ಲಾ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ರಚಿಸಿ, ಇಲಾಖೆಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಗ್ರೂಪ್ ಮೂಲಕ ಸಂದೇಶ ಕಳುಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಂಜುನಾಥ್, ತಹಸೀಲ್ದಾರ್ ರಶ್ಮಿ ಹಾಲೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ತಾಲ್ಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಮತ್ತಿತರರು ಇದ್ದರು.

Read More:Karnataka Rain | ಇನ್ನೂ ಮೂರು ದಿನ ಮಳೆ ಮುಂದುವರಿಕೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

Leave a Comment