MUDIGERE ; ಇಲ್ಲೊಬ್ಬ ವ್ಯಕ್ತಿ ಪಿತೃ ಪಕ್ಷದ ಬಾಡೂಟಕ್ಕೆ ಮಾವನ ಮನೆಗೆ ಹೋಗಲು ವಾಹನ ವ್ಯವಸ್ಥೆ ಇಲ್ಲ ಎಂದು ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸ್ ವಾಹನವನ್ನೇ ಕರೆಸಿದ ವಿಚಿತ್ರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮದಳ್ಳಿ ನಡೆದಿದೆ.
ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿಯೇ ಪೊಲೀಸರಿಗೆ ಕರೆ ಮಾಡಿ ತನ್ನನ್ನು ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾನೆ.
ಏನಿದು ಘಟನೆ ?
ಪಿತೃಪಕ್ಷದ ಹಿನ್ನೆಲೆಯಲ್ಲಿ ತರುವೆ ಗ್ರಾಮದ ಅಶೋಕ್ ನಿಗೆ ಮಾವನ ಮನೆಯಾದ ಪಲ್ಗುಣಿ ಗ್ರಾಮಕ್ಕೆ ಹೋಗಬೇಕಾಗಿತ್ತು. ಆದರೆ ಅಲ್ಲಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇರಲಿಲ್ಲ ಅಲ್ಲದೆ ಒಂದೆಡೆ ಮಳೆ ಕೂಡ ಬರುತ್ತಿತ್ತು ಆದರೂ ಮಾವನ ಮನೆಗೆ ಹೋಗದೆ ವಿಧಿಯಿಲ್ಲ ಕೊನೆಗೆ ಅಶೋಕ್ ಒಂದು ಪ್ಲಾನ್ ಮಾಡಿ 112 ಗೆ ಫೋನ್ ಕರೆಮಾಡಿ ‘ಸರ್… ಪಲ್ಗುಣಿ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದೆ ಬೇಗ ಬನ್ನಿ’ ಅಂತ ಮನವಿ ಮಾಡಿಕೊಂಡಿದ್ದಾನೆ.
ವ್ಯಕ್ತಿಯ ಮಾತು ಕೇಳಿ ತುರುವೇ ಗ್ರಾಮಕ್ಕೆ ಪೊಲೀಸ್ ಬಂದಿದ್ದಾರೆ ಆದರೆ ಗ್ರಾಮದಲ್ಲಿ ಎಲ್ಲೂ ಗಲಾಟೆ ನಡೆದ ವಿಚಾರ ಗೊತ್ತಾಗಿಲ್ಲ. ಬಳಿಕ ಅಶೋಕ್ ಬಳಿ ವಿಚಾರಿಸಿದಾಗ ‘ಸರ್ ನನ್ನ ಮಾವನ ಮನೆಗೆ ಡ್ರಾಪ್ ಮಾಡಿ ಸರ್ ಅಲ್ಲಿಗೆ ಹೋಗಲು ಮಳೆ ಕೂಡ ಬರುತ್ತಿದೆ, ಗಾಡಿ ಬೇರೆ ಇಲ್ಲ’ ಎಂದು ಪೊಲೀಸರ ಬಳಿ ಅಶೋಕ್ ಕೇಳಿಕೊಂಡಿದ್ದಾನೆ. ಇದರಿಂದ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ… ನಗಬೇಕೋ… ತಿಳಿಯಲಿಲ್ಲ, ಕೊನೆಗೆ ಅಶೋಕ್ ಗೆ ಬುದ್ದಿವಾದ ಹೇಳಿ ಪೊಲೀಸರೇ ರಸ್ತೆಯಲ್ಲಿ ಬರುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿ ಡ್ರಾಪ್ ನೀಡುವಂತೆ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಇದೀಗ ಯಾವ್ಯಾವುದೋ ಕೆಲಸಕ್ಕೆ ಬಳಕೆಯಾಗುವ ಪೊಲೀಸ್ ಜೀಪ್ ಒಳ್ಳೆ ಕೆಲಸಕ್ಕೆ ಉಪಯೋಗವಾಗಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.