ಹೊಸನಗರ ; ಪಟ್ಟಣ ಪಂಚಾಯತಿಯ ಕೆಲವು ಕಾಮಗಾರಿಯನ್ನು ಓರ್ವ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ಆಧಾರದಲ್ಲಿ ಕಾಮಗಾರಿ ನೀಡುತ್ತಿದ್ದು ಇದನ್ನು ಹೊಸನಗರ ತಾಲ್ಲೂಕು ಗುತ್ತಿಗೆದಾರರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್‌ರಿಗೆ ಮನವಿ ಪತ್ರ ಸಲ್ಲಿಸಿ, ಮುಂದಿನ ದಿನದಲ್ಲಿ ತುಂಡು ಗುತ್ತಿಗೆ ನೀಡಿದರೆ ಪಟ್ಟಣ ಪಂಚಾಯತಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಗುತ್ತಿಗೆದಾರರು ಶುಕ್ರವಾರ ಮುಖ್ಯಾಧಿಕಾರಿ ಹರೀಶ್‌ರಿಗೆ ಮನವಿ ಪತ್ರ ಸಲ್ಲಿಸಿ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳನ್ನು ಕರ್ನಾಟಕ ಪಾರದರ್ಶಕ ಕಾಯ್ದೆ ಮುಖಾಂತರ ಟೆಂಡರ್ ಕಾಮಗಾರಿಗಳನ್ನು ಕರೆದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು ಆದರೆ ಈಗ ಕೆಲವು ದಿನಗಳಿಂದ ಕರ್ನಾಟಕ ಪಾರದರ್ಶಕ ಕಾಯ್ದೆ ಮುಖಾಂತರ ಕಾಮಗಾರಿಗಳನ್ನು ಕರೆಯದೇ ಕಛೇರಿಯಲ್ಲಿ ಆಂತರಿಕವಾಗಿ ತಮ್ಮ ವಿವೇಚನೆಯಿಂದ ಕಾಮಗಾರಿಗಳನ್ನು ನೀಡುತ್ತಿದ್ದು ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ನೊಂದಾಯಿತ ಗುತ್ತಿಗೆದಾರರಿದ್ದು ಅವರು ಜೀವನ ನಡೆಸುತ್ತಿರುವುದೇ ಕಷ್ಟಕರವಾಗಿದೆ. ಈಗ ತಮ್ಮ ಕಛೇರಿಯಿಂದ ಆಂತರಿಕವಾಗಿ ಕಾಮಗಾರಿಗಳನ್ನು ನೀಡುತ್ತಿರುವುದರಿಂದ ನೊಂದಾಯಿತ ಗುತ್ತಿಗೆದಾರರಾದ ನಾವುಗಳು ಕಾಮಗಾರಿಗಳಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ ಇದರಿಂದಾಗಿ ನಾವುಗಳು ಆರ್ಥಿಕವಾಗಿ ನಷ್ಟ ಹೊಂದಿದ್ದು ಬಹಳ ಕಷ್ಟಕರವಾಗಿರುತ್ತದೆ. ಈಗಾಗಲೇ ಇಂಥಹ ಹಲವು ಕಾಮಗಾರಿಗಳನ್ನು ತಮ್ಮ ಕಛೇರಿಯಿಂದ ಕರ್ನಾಟಕ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿ ಟೆಂಡರ್ ಕರೆಯದೇ ಆಂತರಿಕವಾಗಿ ಕಾಮಗಾರಿಯನ್ನು ನೀಡುತ್ತಿದ್ದೀರಿ ಹೀಗೆ ಇಲ್ಲಿಯವರೆಗೆ ನೀಡಲಾದ ಕಾಮಗಾರಿಯನ್ನು ತಡೆಹಿಡಿದು ಹೊಸದಾಗಿ ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಂದ ಕಾಮಗಾರಿಯನ್ನು ನಿರ್ವಹಿಸಿ ಗುತ್ತಿಗೆದಾರರನ್ನು ಆರ್ಥಿಕ ನಷ್ಟದಿಂದ ಪಾರು ಮಾಡಿ ಹಾಗೂ ಇಲ್ಲಿಯವರೆಗೆ ತುಂಡು ಕಾಮಗಾರಿ ನೀಡಿರುವ ಬಿಲ್‌ನ್ನು ತಡೆ ಹಿಡಿಯಬೇಕು ಎಂದು ತಿಳಿಸಿದ್ದು ಈಗಾಗಲೇ ಗುತ್ತಿಗೆದಾರರಿಂದ ನಿರ್ವಹಿಸಿದ ಪೂರ್ಣಗೊಂಡ ಕಾಮಗಾರಿಗಳ ಬಿಲ್ ತಡೆ ಹಿಡಿದು ಅಂತಹ ಕಾಮಗಾರಿಗಳನ್ನು ಪುನಃ ಟೆಂಡರ್ ಕರೆದು ಬಿಲ್ಲನ್ನು ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಗುತ್ತಿಗೆದಾರರಾದ ಸದಾಶಿವ ಶ್ರೇಷ್ಠಿ, ಸತ್ಯನಾರಾಯಣ ವಿ, ಮಂಜಪ್ಪಗೌಡ, ಮಹಾಬಲ, ಶಿವಾನಂದ, ಪ್ರಶಾಂತ್, ಮಹೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.