ದೇಶದ ಸುವ್ಯವಸ್ಥೆ ಮತ್ತು ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿರುವಾಗ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಯೋಧರ ಸ್ಮರಣಾರ್ಥವಾಗಿ, ಪೊಲೀಸ್ ಹುತಾತ್ಮರ ದಿನಾಚರಣೆ ಮಂಗಳವಾರ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಎನ್ (ಐಎಎಸ್) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ದಿನವನ್ನು ಸ್ಮರಿಸುವ ಹಿನ್ನೆಲೆ 1959ರ ಅಕ್ಟೋಬರ್ 21 ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಡಿ.ಎಸ್.ಪಿ. ಕರಣ್ ಸಿಂಗ್ ನೇತೃತ್ವದ ತಂಡ ಲಡಾಖ್‌ನ ಹಾಟ್ ಸ್ಪ್ರಿಂಗ್ ಪ್ರದೇಶದಲ್ಲಿ ಗಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಚೀನಾ ಸೈನ್ಯದಿಂದ ನಡೆದ ದಾಳಿಯಲ್ಲಿ ಕರಣ್ ಸಿಂಗ್ ಸೇರಿದಂತೆ ಒಂಬತ್ತು ಮಂದಿ ಯೋಧರು ಹುತಾತ್ಮರಾದರು. ಈ ಘಟನೆಯನ್ನು ಸ್ಮರಿಸಿ ಪ್ರತಿ ವರ್ಷ ಅಕ್ಟೋಬರ್ 21ರಂದು ದೇಶಾದ್ಯಂತ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ (ಐಪಿಎಸ್) ಅವರು, ಕರ್ತವ್ಯಪರ ಯೋಧರ ತ್ಯಾಗವನ್ನು ಸ್ಮರಿಸಿ ನಮನ ಸಲ್ಲಿಸಿದರು. 2024ರ ಸೆಪ್ಟೆಂಬರ್ 1ರಿಂದ 2025ರ ಆಗಸ್ಟ್ 31ರವರೆಗೆ ದೇಶದಾದ್ಯಂತ ಒಟ್ಟು 191 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಪ್ರಾಣ ತ್ಯಾಗ ಮಾಡಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯದ 8 ಮಂದಿ ಸೇರಿದ್ದಾರೆ ಎಂದು ಅವರು ತಿಳಿಸಿದರು.
ಹುತಾತ್ಮರ ಹೆಸರುಗಳನ್ನು ವಾಚಿಸಿ, ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಲಾಯಿತು. ರಾಜ್ಯದ ಪೊಲೀಸ್ ಇಲಾಖೆಯ ಶೌರ್ಯ, ಸೇವಾ ಮನೋಭಾವ ಮತ್ತು ತ್ಯಾಗದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ದಿನದ ಮಹತ್ವವನ್ನು ಎಲ್ಲರೂ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ನಾಗರಿಕರು ಪಾಲ್ಗೊಂಡು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650