ರಿಪ್ಪನ್ಪೇಟೆ: ಶರನ್ನವರಾತ್ರಿ ಹಬ್ಬದ ಪ್ರಯುಕ್ತ ತ್ಯಾರಂದೂರು ಗ್ರಾಮದ ಶ್ರೀ ಕಲಾನಾಥೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಗ್ರಾಮದ ರೈತ ಕುಟುಂಬಗಳು ತಮ್ಮ ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಇಂದಿನ ಪೀಳಿಗೆಯಲ್ಲೂ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರ ಅಂಗವಾಗಿ ನವರಾತ್ರಿಯ ಸಂದರ್ಭದಲ್ಲಿ ದೇವಿಗೆ ಉಡಿತುಂಬಿ, ಹೊಸ ಸೀರೆ ಉಡಿಸಿ ಹಾಗೂ ಬಗೆಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬಳಿಕ ದೇವಿಗೆ ಮಹಾಮಂಗಳಾರತಿ ಬೆಳಗಿ ಭಕ್ತಿ ಸಮರ್ಪಿಸಲಾಯಿತು.
ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶೀಲಾ, ಸುಧಾ, ಅನ್ನಪೂರ್ಣ, ಜಯಮಾಲ, ಶ್ಯಾಮಲ, ರೂಪ ಸೇರಿದಂತೆ ತ್ಯಾರಂದೂರಿನ ರೈತ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಭಕ್ತರು ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

