ಹೊಸನಗರ: ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ತಾಲ್ಲೂಕಿನ ನಗರ ಹೋಬಳಿಯಲ್ಲಿ ಅಕ್ಟೋಬರ್ 17ರ ಶನಿವಾರದಂದು ‘ಪ್ರಜಾಸೇವಾ ಅಭಿಯಾನ’ವನ್ನು ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಭರತ್ರಾಜ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಹಾಗೂ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಈ ಅಭಿಯಾನವು, ಶನಿವಾರ ಬೆಳಿಗ್ಗೆ 10 ಗಂಟೆಗೆ ನಗರ ಹೋಬಳಿಯ ಮೂಡುಗೊಪ್ಪದಲ್ಲಿರುವ ಶ್ರೀ ಅಮೃತಮಯಿ ವಿದ್ಯಾಲಯದ ಸಭಾಭವನದಲ್ಲಿ ಜರುಗಲಿದೆ. ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಗರ ಹೋಬಳಿ ವ್ಯಾಪ್ತಿಯ ನಾಗರಿಕರು ತಮ್ಮ ಸಮಸ್ಯೆಗಳ ಕುರಿತು ಲಿಖಿತ ಅರ್ಜಿಯೊಂದಿಗೆ ಸಭೆಗೆ ಆಗಮಿಸಿ, ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಗ್ರೇಡ್-2 ತಹಶೀಲ್ದಾರ್ ಸುಧೀಂದ್ರಕುಮಾರ್, ಶಿರಸ್ತೇದಾರ್ ಮಂಜುನಾಥ್ ಕಟ್ಟೆ, ಪ್ರಥಮ ದರ್ಜೆ ಗುಮಾಸ್ತ ಚಿರಾಗ್, ಕಂದಾಯ ನಿರೀಕ್ಷಕ (ಆರ್.ಐ) ಆಂಜನೇಯ, ಗ್ರಾಮ ಆಡಳಿತಾಧಿಕಾರಿ ರೇಣುಕಯ್ಯ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.

