ಹವಾಮಾನಾಧಾರಿತ ಬೆಳೆ ವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ ; ಸಚಿವ ಮಧು ಬಂಗಾರಪ್ಪ

Written by Mahesha Hindlemane

Published on:

ಶಿವಮೊಗ್ಗ ; ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ ಬೆಳೆಗಾರರಿಗೆ ಉಂಟಾಗುವ ಬೆಳೆ ನಷ್ಟಕ್ಕೆ ಆರ್ಥಿಕ ಭದ್ರತೆ ನೀಡುವ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ ವಿವಿಧ ಕಾರಣಗಳಿಂದಾಗಿ ಸಂತ್ರಸ್ಥರಿಗೆ ಪರಿಹಾರ ಧನ ನೀಡುವಲ್ಲಿ ನ್ಯೂನತೆಗಳುಂಟಾಗಿರುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ವರದಿ ಪಡೆದು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಮಳೆಮಾಪಕ ಕೇಂದ್ರಗಳ ಮೂಲಕ ಸಂಗ್ರಹಿಸಿದ ಹವಾಮಾನ ದತ್ತಾಂಶಗಳನ್ನು ಆಧರಿಸಿ ವಿಮಾ ಪರಿಹಾರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿರುವ 280 ಮಳೆ ಮಾಪನ ಕೇಂದ್ರಗಳಲ್ಲಿ ಕೆಲವು ದುರಸ್ತಿಯಲ್ಲಿದ್ದು, ಸರಿಯಾದ ಮಳೆಮಾಪನ ವರದಿ ಹಾಗೂ ದತ್ತಾಂಶ ದೊರೆಯದಿರುವ ಪ್ರದೇಶಗಳಲ್ಲಿನ ರೈತರ ಬೆಳೆಹಾನಿಯ ಪ್ರಮಾಣ ಅಂದಾಜು ಸಿಗದೆ ಪರಿಹಾರ ಕೊಡುವಲ್ಲಿ ವಿಮಾ ಕಂಪನಿಗಳು ಹಿಂದೆ ಸರಿಯುತ್ತಿದ್ದು, ಇದರಿಂದಾಗಿ ರೈತರಿಗೆ ವಿಮಾ ಮೊತ್ತ ದೊರೆಯದೆ ಅತೀವ ನಷ್ಟ ಉಂಟಾಗುತ್ತಿದೆ. ಈ ಸಂಬಂಧ ಮಲೆನಾಡು ವಿಭಾಗದ ರೈತರಿಂದ ಸಾಕಷ್ಟು ದೂರುಗಳು ಬಂದಿವೆ ಎಂದವರು ನುಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ, ಶುಂಠಿ, ಕಾಳುಮೆಣಸು, ಮಾವಿನಂತಹ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಪರಿಗಣಿಸಲಾಗುತ್ತಿದೆ. ವಿಮಾಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ಹವಾಮಾನ ಘಟಕಗಳು ಇಳುವರಿ ನಷ್ಟವನ್ನು ಲೆಕ್ಕಿಸಿ ರೈತರಿಗೆ ಸ್ವಯಂಚಾಲಿತವಾಗಿ ಮತ್ತು ತ್ವರಿತವಾಗಿ ಪರಿಹಾರ ನೀಡುತ್ತವೆ. ಆದರೆ, ಮಳೆಮಾಪನ ಘಟಕಗಳ ನಿಷ್ಕ್ರಿಯತೆ ಮತ್ತು ಸಮರ್ಪಕ ಮಾಹಿತಿ ನೀಡದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದ ಅವರು, ಈ ಸಂಬಂಧ ಅಭಿವೃದ್ದಿ ಆಯುಕ್ತರು ಹಾಗೂ ವಿಮಾ ಕಂಪನಿಗಳ ನಡುವೆ ಸಮಾಲೋಚನೆ ನಡೆಸಿ, ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು, ವಿಮಾ ಕಂಪನಿಗಳ ವ್ಯವಸ್ಥಾಪಕರು ಸ್ಪಂದಿಸದಿದ್ದಲ್ಲಿ ಅನಿವಾರ್ಯವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಲಾಗುವುದು. ಈ ಹಿಂದೆಯೂ ರೈತರು ನ್ಯಾಯಾಲಯಕ್ಕೆ ಹೋಗಿ ಪರಿಹಾರಧನ ಪಡೆದ ಉದಾಹರಣೆಗಳಿವೆ ಎಂದವರು ನುಡಿದರು.

ಮಳೆ ಮಾಪನ ಕೇಂದ್ರಗಳ ಅಸಮರ್ಪಕ ನಿರ್ವಹಣೆ ಮತ್ತು ದತ್ತಾಂಶ ಸಂಗ್ರಹದ ನ್ಯೂನತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದ್ದು, ದುರಸ್ತಿಯಲ್ಲಿರುವ ಘಟಕಗಳಲ್ಲಿ ಆಧುನಿಕ ಯಂತ್ರಗಳನ್ನು ಅಳವಡಿಸಲು ಈಗಾಗಲೇ ಕೃಷಿ ಸಚಿವರು ಸೂಕ್ತ ನಿರ್ಣಯ ಕೈಗೊಂಡಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ನಿಷ್ಕ್ರಿಯವಾಗಿರುವ ಯಂತ್ರಗಳ ಮಾಹಿತಿ ನೀಡಿದಲ್ಲಿ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯಂತೆಯೇ ನೆರೆಯ ಕಾರವಾರ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತಿತರ ಜಿಲ್ಲೆಗಳಲ್ಲಿಯೂ ಮಳೆ ಮಾಪನ ಯಂತ್ರಗಳು ದುರಸ್ತಿಯಲ್ಲಿದ್ದು, ದತ್ತಾಂಶ ಸಂಗ್ರಹದಲ್ಲಿ ವ್ಯತ್ಯಯಗಳಾಗಿರುವುದನ್ನು ಸಂಘಟಿತವಾಗಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಧನ ಒದಗಿಸಲು ಮನವಿ ಮಾಡಿಕೊಳ್ಳಲಾಗುವುದು.
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು. ಶಿವಮೊಗ್ಗ

ವಿಮೆ ಮಾಡಿಸಿದ ಸಂತ್ರಸ್ಥ ರೈತರೆಲ್ಲರಿಗೂ ಪರಿಹಾರ ಧನ ಕೊಡಲೇಬೇಕಾದುದು ಸರ್ಕಾರದ ಅಂತೆಯೇ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ವಹಿಸಲಾಗುವುದಲ್ಲದೇ ವಿಮಾ ಕಂಪನಿಗಳ ಪ್ರತಿನಿಧಿಗಳೊಬ್ಬರು ಸದಾ ಜಿಲ್ಲಾ ಕೇಂದ್ರದಲ್ಲಿರುವಂತೆಯೂ ಸೂಚಿಸಲಾಗುವುದು ಎಂದ ಅವರು, ಸಕಾಲದಲ್ಲಿ ಮಾಹಿತಿ ಒದಗಿಸದಲ್ಲಿ ಶೀಘ್ರದಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಅಲ್ಲದೇ ಕಳೆದ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಡಿಕೆ ಬೆಳೆಗೆ ಕಂಡುಬಂದ ಎಲೆಚುಕ್ಕೆ ರೋಗ ಮತ್ತು ಕೊಳೆರೋಗದಿಂದಾಗಿ ಅತೀವ ಪ್ರಮಾಣ ಬೆಳೆ ಹಾನಿ ಹಾಗೂ ಇಳುವರಿ ಕುಂಠಿತವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಹೆ.ಗೆ ರೂ.42,000/-ಗಳ ಪರಿಹಾರಧನ ನೀಡುವಂತೆ ತೋಟಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ|| ಕಿರಣ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ|| ಸಂಜಯ್ಎ.ಬಿ., ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment