ಹೊಸನಗರ ; ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳ ಕಲ್ಪಿಸಿ, ಇಲ್ಲವಾದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ – ಚಂದ್ರಶೇಖರ್

Written by Mahesha Hindlemane

Published on:

ಹೊಸನಗರ ; ಸುಮಾರು ಎರಡು ವರ್ಷಗಳ ಹಿಂದೆ ನಾವೆಲ್ಲರೂ ಮುಖ್ಯ ರಸ್ತೆಯ ಬಲ ಭಾಗದಲ್ಲಿ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸಿಕೊಂಡು ನಮ್ಮ ಕುಟುಂಬವನ್ನು ಸಾಕುತ್ತಿದ್ದೇವೆ. ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಅಡ್ಡ ರಸ್ತೆಯಲ್ಲಿ ಬೀಡ ಅಂಗಡಿಗಳನ್ನು ಹಾಕಿಕೊಂಡು ತಾತ್ಕಾಲಿಕ ವ್ಯಾಪಾರ ಮಾಡಿ ನಿಮಗೆ ಸುಸರ್ಜಿತ ಕಟ್ಟಡವನ್ನು ನಮ್ಮ ಪಟ್ಟಣ ಪಂಚಾಯತಿಯಿಂದ ಮಾಡಿಕೊಡುತ್ತೇವೆಂದು ಹೇಳಿ ಎರಡು ವರ್ಷವಾದರೂ ಇಲ್ಲಿಯವರೆಗೆ ಕಟ್ಟಡವೂ ಇಲ್ಲ, ಸ್ಥಳವೂ ಇಲ್ಲದಂತೆ ಮಾಡಿದ್ದಾರೆ ಎಂದು ಹೊಸನಗರ ಪಟ್ಟಣದ ಬೀದಿ ವ್ಯಾಪಾರಿಗಳು ಚಂದ್ರಶೇಖರ್ ನೇತೃತ್ವದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್‌ರಿಗೆ ಮನವಿ ಪತ್ರ ಸಲ್ಲಿಸಿ, ತಕ್ಷಣ ನಮಗೆ ಸ್ಥಳ ಕಲ್ಪಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮನವಿ ಪತ್ರದಲ್ಲಿ, ಹೊಸನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ನಾವುಗಳು ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಈ ಹಿಂದೆ ತಮಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿ ನಮಗೆ ವ್ಯವಸ್ಥಿತವಾದ ಸ್ಥಳವನ್ನು ಮಾಡಿಕೊಡುವ ಬಗ್ಗೆ ಕೇಳಿಕೊಂಡಿರುತ್ತೇವೆ. ಕಳೆದ 1 ತಿಂಗಳ ಹಿಂದೆ ತಾವುಗಳು ಇನ್ನು 15 ದಿನಗಳಲ್ಲಿ ಹೊಸನಗರ ಪಟ್ಟಣದ ಮುಖ್ಯ ರಸ್ತೆಯ ಹಿಂದೆ ಇದ್ದ ಸ್ಥಳದಲ್ಲಿ ನಮಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಭರವಸೆ ಕೊಟ್ಟಿರುತ್ತೀರಿ. ನಾವು ಈಗ ತಾತ್ಕಾಲಿಕವಾಗಿ ಇಟ್ಟುಕೊಂಡಿರುವ ಕಾಲೇಜು ಮುಂಭಾಗದ ರಸ್ತೆಯಲ್ಲಿ ನಮ್ಮ ಶೆಡ್‌ಗಳು ಹಾಳಾಗಿದ್ದು ಅದರ ಮೇಲ್ಭಾಗದಲ್ಲಿಯೇ ವಿದ್ಯುತ್ ಪವರ್ ಲೈನ್ ಹಾದು ಹೋಗಿರುವುದರಿಂದ ನಾವುಗಳು ದಿನವು ಭಯದಿಂದ ಜೀವನ ಸಾಗಿಸುವಂತಾಗಿದೆ ಹಾಗೂ ನಮ್ಮ ಶೆಡ್‌ಗಳನ್ನು ಸರಿ ಮಾಡಿಕೊಳ್ಳಲು ಸಹ ಆಗುತ್ತಿಲ್ಲ. ದೊಡ್ಡ ದೊಡ್ಡ ಮರಗಳು ಇರುವುದರಿಂದ ಅದರ ಕೊಂಬೆಗಳು ಬಿದ್ದು ನಮ್ಮ ಶೆಡ್‌ಗಳು ಜಖಂಗೊಂಡಿರುತ್ತವೆ. ಈಗಲೂ ಸಹ ನಮ್ಮ ಶೆಡ್‌ಗಳ ಮೇಲೆ ಕೊಂಬೆಗಳು ವಾಲಿಕೊಂಡಿರುತ್ತವೆ. ತಾವುಗಳು ದಯಮಾಡಿ ಶೀಘ್ರವಾಗಿ ನಮಗೆ ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿ ಅವಕಾಶ ಮಾಡಿಕೊಡುವ ಮೂಲಕ ನಮ್ಮ ಕುಟುಂಬಗಳ ನಿರ್ವಹಣೆಗೆ ನಮಗೆ ಬೇರೆ ಉದ್ಯೋಗ ಇಲ್ಲದೇ ಇರುವುದರಿಂದ, ಸರ್ಕಾರದ ಸೌಲಭ್ಯದಿಂದ ಪಡೆದ ಸಾಲಗಳು ತೀರಿಸಲು ಬಾಕಿ ಇದ್ದು, ಇವೆಲ್ಲವುಗಳನ್ನು ನಾವು ನಮ್ಮ ಬೀದಿ ವ್ಯಾಪಾರದಿಂದಲೇ ನಿರ್ವಹಣೆ ಮಾಡಬೇಕಾಗಿದ್ದು, ನಿಮ್ಮ ಮೇಲೆ ಭರವಸೆಯಿಂದ ಇಲ್ಲಿಯತನಕ ಕಾಲಕಳೆದಿದ್ದು, ತಾವುಗಳು ಅತೀ ಶೀಘ್ರದಲ್ಲಿ ನಮ್ಮಗಳ ವ್ಯವಹಾರಕ್ಕೆ ಸ್ಥಳಾವಕಾಶ ಮಾಡಿಕೊಡಿ ಎಂದು ತಿಳಿಸಿದರು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ ;

ಹೊಸನಗರ ಪಟ್ಟಣ ಪಂಚಾಯತಿ ಚುನಾವಣೆ ಅತೀ ಶೀಘ್ರದಲ್ಲಿಯೇ ಬರಲಿದ್ದು ನಮ್ಮ ವಾಸ 11 ವಾರ್ಡ್‌ಗಳಲ್ಲಿಯೂ ಇದ್ದಾರೆ. ತಾವು ನಮಗೆ ವ್ಯವಸ್ಥಿತವಾದ ಜಾಗ ಕಲ್ಪಿಸದಿದ್ದರೆ ಮುಂಬರುವ ಪಟ್ಟಣ ಪಂಚಾಯತಿ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸದರು.

ಮನವಿ ಪತ್ರ ನೀಡುವ ಸಂದರ್ಭದಲ್ಲಿ ಚಂದ್ರಶೇಖರ್, ಆರ್.ಕೆ. ರಸ್ತೆ ಗೋವಿಂದಣ್ಣ, ಯೋಗೇಂದ್ರಪ್ಪ, ಅಬ್ದುಲ್ ಖಾದರ್, ನೇತ್ರಾವತಿ, ಓಂಕೇಶ್, ಕಲಾವತಿ, ಅವಿನಾಶ್, ವಿನೋದ್, ಸುಮಾ ಇನ್ನೂ ಮುಂತಾದ ಬೀದಿ ವ್ಯಾಪಾರಿಗಳು ಉಪಸ್ಥಿತರಿದ್ದರು.

Leave a Comment