SHIVAMOGGA ; ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಬ್ಲಿಕ್ ಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಕೆ.ವಿ. (39) ಶಶಿಧರ್ ಇಂದು ಸಂಜೆ 5:45ರ ವೇಳೆಗೆ ಅಕಾಲಿಕ ನಿಧನ ಹೊಂದಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ ಕಳೆದ 6 ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಶಶಿಧರ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದವರಾಗಿದವರು.
ಮೃತರು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ. ಶಶಿಧರ್ ಕಳೆದ 16 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇಂದು ಬೆಳಿಗ್ಗೆ ತಮ್ಮ ಶಿವಮೊಗ್ಗದ ನಿವಾಸದಲ್ಲಿ ಬಾತ್ ರೂಂ ಗೆ ಹೋದ ಶಶಿಧರ್ ಆಕಸ್ಮಿಕವಾಗಿ ಹಿಮ್ಮುಖವಾಗಿ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಮನೆಯಲ್ಲಿ ಯಾರು ಇಲ್ಲದ ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು. ತದನಂತರ ವಿಷಯ ಗೊತ್ತಾಗಿ ಶಶಿಧರ್ ರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ವೈದ್ಯರು ಚಿಕಿತ್ಸೆ ಕೊಡಲು ಅಣಿಯಾಗಲು ಶಶಿಧರ್ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಕುಟುಂಬಸ್ಥರ ಸಹಿ ಪಡೆದು ಚಿಕಿತ್ಸೆ ಮುಂದುವರೆಸಲು ಅಣಿಯಾಗುವ ಹೊತ್ತಿಗೆ ಎಮೆರ್ಜೆನ್ಸಿಯಲ್ಲಿ ದಾಖಲಾಗಿದ್ದ ಶಶಿಧರ್ ರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದುಬಂದಿದೆ.
ಶಶಿಧರ್ ಪತ್ರಿಕೋಧ್ಯಮಕ್ಕೆ ಬರುವ ಆಶಯದೊಂದಿಗೆ ಮೈಸೂರಿನಲ್ಲಿ 2006 ರಲ್ಲಿ ಎಂಎ ಜರ್ನಲಿಸಂ ಸೇರ್ಪಡೆಗೊಂಡರು. ಸ್ನಾತಕೊತ್ತರ ಪದವಿಯ ನಂತರ ಈ ಟಿವಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ಚಾಮರಾಜನಗರದಲ್ಲಿ ಸುವರ್ಣ ನ್ಯೂಸ್ ವರದಿಗಾರರಾಗಿ ಸೇವೆ ಸಲ್ಲಿಸದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಆರು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದರು. ಈ ಸಂದರ್ಭದಲ್ಲಿ ಕಿಡ್ನಿ ಸಮಸ್ಯೆ ಎದುರಾಗಿ, ಡಯಾಲೀಸ್ ಚಿಕಿತ್ಸೆಗೆ ಒಳಗಾಗಿದ್ದರು. ಶಶಿಧರ್, ಫೀಲ್ಡ್ ನಲ್ಲಿ ಆಕ್ಟಿವ್ ಆಗಿಯೇ ಕರ್ತವ್ಯ ನಿರ್ವಹಿಸಿ ಎಲ್ಲದರನ್ನು ಬೆರಗಾಗುವಂತೆ ಮಾಡಿದ್ದರು.
ಆದರೆ ಶಶಿಧರ್ ಅವರ ಅಕಾಲಿಕ ಮರಣ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಪತ್ರಕರ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ಭಾನುವಾರ ಅವರ ಹುಟ್ಟೂರಿನಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಶಶಿಧರ್ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆ ಕಂಬನಿ ಮಿಡಿದಿದೆ.