ಶಿವಮೊಗ್ಗ ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ ಘಟನೆ ಬುಧವಾರ ನಡೆದಿದೆ.
ತೀವ್ರ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ.
ಮಂಜುನಾಥ ಗೌಡ ಅವರನ್ನು 14 ದಿನ ಇ.ಡಿ. ವಶಕ್ಕೆ ನೀಡಲಾಗಿದೆ. ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಮಂಜುನಾಥ ಗೌಡ ಅವರನ್ನು ಹಾಜರುಪಡಿಸಲಾಗಿತ್ತು.
ಎ.8ರ ಮಂಗಳವಾರ ಬೆಳಗ್ಗೆ ಅಪೆಕ್ಸ್ ಬ್ಯಾಂಕ್ ಅತಿಥಿ ಗೃಹದಲ್ಲಿ ಮಂಜುನಾಥ ಗೌಡ ಅವರಿದ್ದ ಕೊಠಡಿ ಮೇಲೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಮಂಗಳವಾರ ಸಂಜೆ ಇ.ಡಿ. ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಇಂದು ಮಂಜುನಾಥ ಗೌಡ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ :
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ. ವಂಚನೆ ನಡೆದಿತ್ತು. 2014ರಲ್ಲಿ ಈ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2014ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಬಳಿಕ ಇಡಿ ಸಹ ಇಸಿಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಮಂಜುನಾಥ್ ಗೌಡಗೆ ಸಮನ್ಸ್ ಜಾರಿಗೊಳಿಸಿತ್ತು. ಇಡಿ ಸಮನ್ಸ್ ಪ್ರಶ್ನಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನ ಇತ್ತೀಚೆಗೆ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಡಿ ಮಂಜುನಾಥ್ ಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಬಳಿಕ ನಿನ್ನೆ ಬೆಂಗಳೂರಿನಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಸಿದ್ದರು. ಆದರೆ, ಇದೀಗ ಮಂಜುನಾಥ್ ಅವರನ್ನು ಇ.ಡಿ ಬಂಧಿಸಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆಯಲ್ಲಿ ಯಾವೆಲ್ಲಾ ಅಂಶಗಳು ಹೊರಬರಲಿವೆ ಎನ್ನುವುದನ್ನು ಕಾದುನೋಡಬೇಕಿದೆ.