ರಿಪ್ಪನ್‌ಪೇಟೆ ; ಪ್ರಾಚೀನ ಜೈನ ಪರಂಪರೆ, ಪೂಜಾ ವಿಧಿ ವಿಧಾನ, ಭಕ್ತರ ಅಭೀಷ್ಠ ಈಡೇರಿಸುವ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯವರ ಸಾನಿಧ್ಯ ಅಪೂರ್ವವಾದುದು ಎಂದು ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರವರು ಸಿದ್ಧಾಂತಕೀರ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಾರ್ಷಿಕ ರಥೋತ್ಸವ ನಿಮಿತ್ತ ಧಾರ್ಮಿಕ ಸಭೆಯಲ್ಲಿ ವಿವರಸುತ್ತಾ ತೀರ್ಥಂಕರರ, ಯಕ್ಷ ಯಕ್ಷಿಯರ, ಜಿನಶಾಸನ ದೇವತೆಗಳ ಕುರಿತು ಜೈನ ಧರ್ಮೀಯರು ಅರಿಯಬೇಕು ಎನ್ನುತ್ತಾ ಹೊಂಬುಜ ಅತಿಶಯ ಶ್ರೀಕ್ಷೇತ್ರ ವಿಶಿಷ್ಠ ಸಿದ್ಧಕ್ಷೇತ್ರವೂ, ವಿಶ್ವಮಾನ್ಯ ಆದುದೆಂದು ಪ್ರವಚನದಲ್ಲಿ ಹೇಳಿದರು.
ಪೂರ್ವ ಭಟ್ಟಾರಕರು ಕ್ಷೇತ್ರದ ಜೀರ್ಣೋದ್ಧಾರ ಕೈಗೊಂಡಿದ್ದನ್ನು ಸ್ಮರಿಸಿ, ಪ್ರಸಕ್ತ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಅಸ್ಥೆ-ಶ್ರದ್ಧೆ ಅಭಿನಂದನಾರ್ಹವಾದುದೆಂದು ಹರಸಿದರು.
ಸಾಹಿತಿ, ವಾಗ್ಮಿ, ಸಂಶೋಧಕಿ ಪ್ರೊ. ಪದ್ಮಾಶೇಖರರವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೂ. 51 ಸಾವಿರ ನಗದು, ಪ್ರಶಸ್ತಿ ಪತ್ರ, ಶಾಲು, ಹಾರ ನೀಡಿ ಅಭಿನಂದಿಸಿ, ಗೌರವಿಸಲಾಯಿತು.

ಮುನಿಶ್ರೀಯವರ ಸಸಂಘ, ಆರ್ಯಿಕೆಯರು, ಕಂಬದಹಳ್ಳಿಯ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಪ್ರೊ. ಪದ್ಮಾಶೇಖರರವರು ಹೊಂಬುಜ ಸಂಸ್ಥಾನದ ಸಾಹಿತ್ಯ-ಸಾಂಸ್ಕೃತಿಕ ಹಿನ್ನಲೆ ಬಗ್ಗೆ ಅವಲೋಕಿಸಿ, ಯುವ ಪೀಳಿಗೆಯವರು ಕ್ಷೇತ್ರದ ಐತಿಹ್ಯ ತಿಳಿಯಲು ಅಧ್ಯಯನ-ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ತಿಳಿಸಿದರು.
ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಆದಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ನೆಲೆಯಾಗಿ ಹೊಂಬುಜ ಕ್ಷೇತ್ರವು 1400 ವರ್ಷಗಳ ಇತಿಹಾಸ ಹೊಂದಿದೆ. ಭಕ್ತರ ಇಷ್ಟಾರ್ಥ ಸಿದ್ಧಿಸಲು ಪದ್ಮಾವತಿ ದೇವಿ ಸದಾ ಹರಸಿ, ಸಂತೃಪ್ತ ಜೀವನ ನಿರ್ವಹಣೆ ಜ್ಯೋತಿಸ್ವರೂಪವಾಗಿ ಸಧರ್ಮಪಥ ತೋರುತ್ತಿರುವುದು ಶ್ರೀಕ್ಷೇತ್ರದ ಅನನ್ಯತೆ ಎಂದರು.

ಶ್ರೀಕ್ಷೇತ್ರದ ವಾರ್ಷಿಕ ರಥೋತ್ಸವ ಸಂದರ್ಭದಲ್ಲಿ ಸೇವಾಕರ್ತೃರಾದವರನ್ನು ಪೂಜ್ಯ ಸ್ವಾಮೀಜಿಯವರು ಶ್ರೀಮಠದ ವತಿಯಿಂದ ಗೌರವಿಸಿ, ಆಶೀರ್ವದಿಸಿದರು.
ಶಾಲಿನಿ ಮೋಹನ್ ಪ್ರಾರ್ಥಿಸಿದರು. ಸಿ.ಡಿ. ಅಶೋಕ ಕುಮಾರರ್ ಸ್ವಾಗತಿಸಿ, ಶಿರಹಟ್ಟಿ ಪ್ರೋ. ಶಾಂತಿಸಾಗರ್ ಪರಿಚಯ ವಾಚನ ಮಾಡಿದರು. ಪ್ರ‍್ರಾದ್ಯಾಪಕ ಹೆಚ್. ಸಂತೋಷ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.