RIPPONPETE ; ಆಶ್ವಯುಜ ಶುಕ್ಲ ಸಪ್ತಮಿಯಂದು ಶರನ್ನವರಾತ್ರಿ ಉತ್ಸವ, ಪೂಜೆ ನಿಮಿತ್ತ ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀಮಠದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿಯಲ್ಲಿ ಪೂಜೆ ಮಾಡಲಾಯಿತು.
ಶ್ರೀ 1008 ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಹೊಂಬುಜ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಅಧಿದೇವತೆ ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆಯ ಸಾನಿಧ್ಯ, ನೇತೃತ್ವ ವಹಿಸಿದ್ದರು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರು ವಿದ್ಯಾಶ್ರೀ ಸರಸ್ವತಿ ದೇವಿ ಸ್ತ್ರೋತ್ರ ಸ್ತುತಿಸಿದರು. ಭಕ್ತ ಸಮುದಾಯದವರು ಶ್ರೀಫಲ-ಪುಷ್ಪ_ಫಲಗಳನ್ನರ್ಪಿಸಿದರು.
“ಪ್ರತಿಯೋರ್ವರೂ ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಜೀವನದ ಸಂಕಷ್ಟಗಳು ಎದುರಾಗುವುದಿಲ್ಲ. ಭಕ್ತಿ, ಶ್ರದ್ದೆಯಿಂದ ವಿದ್ಯಾದೇವಿ ಶ್ರೀ ಸರಸ್ವತಿ ಮಾತೆಯ ನಾಮಸ್ಮರಣೆ ಮಾಡುವುದರಿಂದ ಸುಲಲಿತವಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ” ಎಂದು ಶ್ರೀಗಳವರು ಪ್ರವಚನದಲ್ಲಿ ವಿಸ್ತಾರವಾಗಿ ತಿಳಿಸುತ್ತಾ ಜ್ಞಾನ ಸುಜ್ಞಾನವಂತರಾಗಿ ಧೀರರಾಗಿ, ಧೃತಿಗೆಡದೇ, ಸಂಸ್ಕಾರಯುತ ಜೀವನದಲ್ಲಿ ಯಶಸ್ಸು ಲಭಿಸುವುದೆಂದು ಶ್ರೀಗಳವರು ದರ್ಶನಾರ್ಥಿ ಭಕ್ತರಿಗೆ ಶ್ರೀ ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು.
ಪ್ರಾತಃಕಾಲದಲ್ಲಿ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಜಿನಭಜನೆ ಮಾಡುತ್ತಾ ಸನ್ನಿಧಿಗೆ ತಂದರು. ರಾತ್ರಿ ಪರಂಪರೆಯಂತೆ ಅಷ್ಟಾವಧಾನ, ವಾದ್ಯಗೋಷ್ಠಿ, ನೃತ್ಯ ಗದ್ಯಪಠನ, ಮಂತ್ರಪಠಣ ಏರ್ಪಟ್ಟಿತ್ತು ನವಿಲುಗರಿಗಳಿಂದ ಶ್ರೀ ಪದ್ಮಾವತಿ ದೇವಿ ಅಲಂಕಾರವು ಹೃನ್ಮನ ತಣಿಸಿತು.