ರಿಪ್ಪನ್‌ಪೇಟೆ : ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯ್ತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನರ ಅನೇಕ ಸಮಸ್ಯೆಗಳು ಅನಾವರಣಗೊಂಡವು.
ಇತ್ತೀಚೆಗೆ ವಿದ್ಯುತ್ ಸಮಸ್ಯೆ ಅಧಿಕವಾಗಿದ್ದು ಒಮ್ಮೆ ಹೋದ ವಿದ್ಯುತ್ ಎರಡು, ಮೂರು ದಿನಗಳಾದರೂ ಬರುವುದಿಲ್ಲ. ಹೊಸ ಲೈನ್ ಎಳೆಯುವಾಗ ರಸ್ತೆಯಲ್ಲಿಯೇ ವಿದ್ಯುತ್ ಕಂಬಗಳನ್ನು ನೆಟ್ಟು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಸಲು ಮೆಸ್ಕಾಂ ಸಿಬ್ಬಂದಿ ಸರಿಯಾದ ಯೋಜನೆ ತಯಾರಿಸದೆ ಪಂಚಾಯ್ತಿಗೆ ನಷ್ಟವುಂಟುಮಾಡುತ್ತಿದ್ದಾರೆ.
94ಸಿ ಹಕ್ಕುಪತ್ರ ಪಡೆಯಲು ಹಲವು ಜನ ಇಲಾಖೆಗೆ ಹಣ ಸಂದಾಯ ಮಾಡಲಾಗಿದ್ದರು ಹಕ್ಕುಪತ್ರ ನೀಡಿರುವುದಿಲ್ಲ. ಗಾಂಜಾ, ಕಳ್ಳತನ, ಸಹಿತ ಶಾಲಾ-ಕಾಲೇಜುಗಳ ಸಮೀಪ ಪುಂಡರ ಹಾವಳಿ ಹೆಚ್ಚಾಗಿದೆ. ಪಟ್ಟಣದ ಪ್ರಮುಖ ನಾಲ್ಕು ಸಾರ್ವಜನಿಕ ರಸ್ತೆಯಲ್ಲಿ ಅಪಾಯದ ಹಂತದಲ್ಲಿರುವ ಮರಗಳ ತೆರವು, ಲೋಕೋಪಯೋಗಿ ಕಾರ್ಯದಲ್ಲಿ ಕಳಪೆ ಕಾಮಗಾರಿ, ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಳಪೆ ಫಲಿತಾಂಶ, ಪಿಯು, ಪ್ರಥಮ ದರ್ಜೆ ಕಾಲೇಜುಗಳ ಹಿಂಬದಿಯ ಮೈದಾನದ ಸ್ವಚ್ಛತೆಯ ನಿರ್ಲಕ್ಷ್ಯ. ಖಾಸಗಿ ಶಿಕ್ಷಣ ಸಂಸ್ಥೆಯ ನಿಯಮ ಮೀರಿದ ಕಟ್ಟಡ ನಿರ್ಮಾಣ. ಸರ್ಕಾರಿ ಆಸ್ಪತ್ರೆಯ ಪ್ರಾಂಗಣದ ಶುಚಿತ್ವ. ಇನ್ನಿತರ ವಿಷಯಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳ ಗಮನ ಸೆಳೆದ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಸಭೆಗೆ ಗೈರು ಹಾಜರಾದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.
ಇಲಾಖೆಯ ಕಾರ್ಯಯೋಜನೆ ಮತ್ತು ಪ್ರಗತಿಯ ವರದಿ ನೀಡಿದ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿತ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರಕ್ಷಣಾ, ಲೋಕೋಪಯೋಗಿ, ಮೆಸ್ಕಾಂ, ಅರಣ್ಯ, ಕಂದಾಯ, ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಪಂ ಅಧ್ಯಕ್ಷರಾದ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಉಪತಹಶೀಲ್ದಾರ್ ಗೌತಮ್. ಕೆಡಿಪಿ ಸದಸ್ಯರಾದ ಚಂದ್ರೇಶ್, ಆಸೀಫ್, ಪಿಡಿಒ ನಾಗರಾಜ್ ಇದ್ದರು.
Read More :ಜೀವಜಲ ಯೋಜನೆ 2025: ಈ ಸಮುದಾಯದ ರೈತರಿಗೆ ಲಕ್ಷಾಂತರ ರೂ ಮೌಲ್ಯದ ಬೋರ್‌ವೆಲ್ ಉಚಿತ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.