RIPPONPETE ; ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ಧನಲಕ್ಷ್ಮಿಯವರು ಅಶ್ಲೀಲ ಪದ ಬಳಸಿ ವ್ಯಕ್ತಿಯೊಬ್ಬರಿಗೆ ‘ಚಡ್ಡಿ ಬಿಚ್ಚಿ ಸರ್ಕಲ್‌ನಲ್ಲಿ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ’ ಎಂದು ಹೇಳಿ ಅವಮಾನ ಮಾಡಿದ್ದಾರೆಂಬ ಬಗ್ಗೆ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಿಂದ ಗ್ರಾಮ ಪಂಚಾಯ್ತಿಯ ಘನತೆ ಗೌರವಕ್ಕೆ ಧಕ್ಕೆ ತಂದಿರುವ ಬಗ್ಗೆ ಇಂದು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ಕರೆಯಲಾದ ತುರ್ತು ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು, ಅಧ್ಯಕ್ಷರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಧಿಕ್ಕಾರ ಕೂಗಿ ಹೊರ ಬಂದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆಯಿತು.
ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ನಿಯೋಜನೆ ಮೇಲೆ ಹೊಸದಾಗಿ ಬಂದು ಅಧಿಕಾರ ಸ್ವೀಕರಿಸಿದ ಕಾರಣ ಪಂಚಾಯ್ತಿ ಆಡಳಿತ ಮಂಡಳಿಯವರ ಜೊತೆ ಪರಿಚಯ ಮಾಡಿಕೊಳ್ಳುವ ಮೂಲಕ ಕೆಲವು ಅಭಿವೃದ್ದಿ ಕಾಮಗಾರಿಗಳ ಕುರಿತು ಚರ್ಚಿಸಿ ಅನುಷ್ಠಾನಗೊಳಿಸುವ ಬಗ್ಗೆ ತುರ್ತು ಸಭೆಯನ್ನು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು ಸಭೆ ಆರಂಭಗೊಳ್ಳುತ್ತಿದ್ದಂತೆ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಿಂದ ಪಂಚಾಯಿತಿ ಬಗ್ಗೆ ಸಾರ್ವಜನಿಕರು ಇಲ್ಲಸಲ್ಲದ ಅಪಹಾಸ್ಯ ಮಾಡುತ್ತಿದ್ದಾರೆಂದು ಹೇಳಿ, ತಮ್ಮದೇ ಧ್ವನಿಯಲ್ಲಿ ಇರುವ ಆಡಿಯೋ ಕುರಿತು ಸ್ಪಷ್ಟನೆ ನೀಡುವಂತೆ ತಿಳಿಸಿದಾಗ ಅಧ್ಯಕ್ಷೆ ‘ನನಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಯಾರಿಗೂ ಆ ರೀತಿಯಲ್ಲಿ ಅವಹೇಳನವಾಗಿ ಮಾತನಾಡಿಲ್ಲ. ಯಾರೋ ದುರುದ್ದೇಶದಿಂದ ನನಗೆ ತೇಜೋವಧೆ ಮಾಡುವ ಉದ್ದೇಶದಿಂದಾಗಿ ಈ ರೀತಿಯಲ್ಲಿ ಆಡಿಯೋ ಮಾಡಿದ್ದಾರೆಂದು’ ಹೇಳುತ್ತಿದ್ದಂತೆ ಬಿಜೆಪಿ ಬೆಂಬಲಿತ ಸದಸ್ಯರು ಧಿಕ್ಕಾರ ಕೂಗಿ ನೈತಿಕ ಹೊಣೆ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಭೆಯಿಂದ ಹೊರ ಬಂದು ಪಂಚಾಯ್ತಿ ಮುಂಭಾಗ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮಹಾಶಕ್ತಿ ಕೇಂದ್ರದವರು ಪ್ರತಿಭಟನೆಗೆ ಕೈಜೋಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಪಿ.ರಮೇಶ್, ಜಿ.ಡಿ. ಮಲ್ಲಿಕಾರ್ಜುನ, ಮಂಜುಳಾ, ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ದಾನಮ್ಮ, ವನಮಾಲ, ಸುಂದರೇಶ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಮುಖಂಡರಾದ ಆರ್.ಟಿ.ಗೋಪಾಲ, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ರೇಖಾರವಿ, ಯೋಗೇಂದ್ರಗೌಡ, ಮುರುಳಿಧರ, ರಾಮಚಂದ್ರ, ಸೀತಮ್ಮ, ಪಕ್ಷದ ಇನ್ನಿತರ ಮುಖಂಡರು ಭಾಗವಹಿಸಿದ್ದರು.
ಬಿಜೆಪಿಯವರು ಅಭಿವೃದ್ಧಿ ಸಹಿಸದೇ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ :
ನಮ್ಮ ಅವಧಿಯಲ್ಲಿನ ಅಭಿವೃದ್ದಿಯನ್ನು ಸಹಿಸದೇ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಯಾವ ವ್ಯಕ್ತಿಗೂ ಅವಹೇಳಕಾರಿಯಾಗಿ ಬೈದಿಲ್ಲ. ದುರುದ್ದೇಶದಿಂದ ನನ್ನ ತೇಜೋವಧೆ ಮಾಡುವ ಉದ್ದೇಶದಿಂದಾಗಿ ಇಲ್ಲ ಸಲ್ಲದ ಆರೋಪ ಮಾಡಿ ಸಾಮಾನ್ಯ ಸಭೆಯನ್ನು ನಡೆಸಲು ಬಿಡದೇ ಏಕಾಏಕಿ ಪ್ರತಿಭಟನೆ ನಡೆಸಿ ನನ್ನ ವಿರುದ್ದ ಧಿಕ್ಕಾರ ಕೂಗಿ ಹೊರ ನಡೆದಿರುವುದರ ಬಗ್ಗೆ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ದಿಢೀರ್ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು.
ನನಗೂ ಆಡಿಯೋದಲ್ಲಿ ಹರಿದಾಡುತ್ತಿರುವ ಸಂಭಾಷಣೆಯ ಧ್ವನಿಗೂ ಯಾವುದೇ ಸಂಬಂಧವಿಲ್ಲ. ಇದು ಹೀಗೆ ಮುಂದುವರೆದರೆ ನಾನು ಕಾನೂನಾತ್ಮಕ ಹೋರಾಟ ನಡೆಸುವುದಾಗಿ ತಿಳಿಸಿ, ನನ್ನ ವಿರುದ್ಧ ಈ ರೀತಿಯಲ್ಲಿ ಅಪಮಾನ ಎಸಗುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ ಅವರು, ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ಸದಸ್ಯರಿಗಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದರು ಕೇಳಿದರೆ ಅದೇ ಕ್ಷಣದಲ್ಲಿಯೇ ರಾಜೀನಾಮೆ ನೀಡುವುದಾಗಿ ಹೇಳಿದ ಅವರು, ರಾಜೀನಾಮೆ ಕೊಡುವಂತಹ ಘಟನೆ ಏನು ನಡೆದಿಲ್ಲ. ಆ ಬಗ್ಗೆ ಬಿಜೆಪಿಯವರು ದಾಖಲೆ ಸಹಿತ ಸಾಬೀತು ಪಡಿಸಲಿ ಎಂದು ಸವಾಲೆಸೆದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಆಸಿಫ್ ಬಾಷಾ, ಗಣಪತಿ ಗವಟೂರು, ಡಿ.ಈ.ಮಧುಸೂಧನ್, ಎನ್.ಚಂದ್ರೇಶ್, ಸಾರಾಭಿ, ವೇದಾವತಿ, ಅನುಪಮ ರಾಕೇಶ್,ಇದ್ದರು.