ರಿಪ್ಪನ್‌ಪೇಟೆ ; ಇಲ್ಲಿನ ಸಾಗರ-ತೀರ್ಥಹಳ್ಳಿ ಸಂಪರ್ಕದ ಎಪಿಎಂಸಿ ಬಳಿಯಿಂದ ತಲಾ ಒಂದೊಂದು ಕಿ.ಮೀ.ರಸ್ತೆ ಅಗಲೀಕರಣ ಮತ್ತು ಬಾಕ್ಸ್ ಚರಂಡಿ ಸೇರಿದಂತೆ ಡಾಂಬರೀಕರಣ ಕಾಮಗಾರಿಗೆ ಈ ಹಿಂದಿನ ಶಾಸಕ ಹರತಾಳು ಹಾಲಪ್ಪ 4.85 ಕೋಟಿ ಹಣವನ್ನು ಬಿಡುಗಡೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಈಗ ಕಳೆದೊಂದು ವಾರದಿಂದ ಭರದಿಂದ ಕಾಮಗಾರಿ ಸಾಗಿದ್ದು ಸಂಪೂರ್ಣ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎನ್.ಸತೀಶ್ ಆರೋಪಿಸಿದರು.
ರಿಪ್ಪನ್‌ಪೇಟೆಯ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣಕ್ಕಾಗಿ ವಿನಾಯಕ ವೃತ್ತದ ಚಂದ್ರಪ್ಪ ಎಂಬುವರು ಕಟ್ಟಡ ತೆರವು ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂಬ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿ ನಂತರದಲ್ಲಿ ರಾತ್ರೋರಾತ್ರಿ ದಿಢೀರ್ ತಹಶೀಲ್ದಾರ್ ನೇತೃತ್ದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿ ಮೂರು ತಿಂಗಳಾದ ನಂತರ ಈಗ ಒಂದು ವಾರದಿಂದ ರಸ್ತೆ ಕಾಮಗಾರಿ ಆರಂಭಿಸಲಾಗಿ ಸಂಪೂರ್ಣ ಕಳಪೆ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯ ಗ್ರಾಮಾಡಳಿತ ನಿತ್ಯ ಧ್ವನಿವರ್ಧಕದ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದ್ದು ಅಂಗಡಿ ಮುಂಗಟುಗಳನ್ನು ರಸ್ತೆಯಿಂದ ಒಳಗೆ 6 ಅಡಿ ಹೆಚ್ಚವರಿ ತೆರವು ಮಾಡಿಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದು ಅದರಂತೆ ಹಲವರು ಸ್ವಪ್ರೇರಣೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳ ಬಳಿ ರಸ್ತೆಯಂಚಿನಿಂದ ಚರಂಡಿ ಹೊರತುಪಡಿಸಿ ಪಾದಚಾರಿಗಳಿಗಾಗಿ ಹೆಚ್ಚುವರಿ ಆರು ಅಡಿ ಜಾಗವನ್ನು ಬಿಟ್ಟು ಒಳಗೆ ಹಾಕಿಕೊಂಡಿದ್ದರೆ, ಇನ್ನೂ ಹಲವರು ತೆರವು ಮಾಡಿಕೊಳ್ಳದೆ ಇದ್ದರೂ ಕೂಡಾ ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ತೆರವು ಕಾರ್ಯಚರಣೆಗೆ ಮುಂದಾಗದೆ ಮಲತಾಯಿ ಧೋರಣೆ ಅನುಸರಿಸಿರುವ ಹಿಂದಿನ ಮರ್ಮ ಏನು ಎಂಬ ಸಂಶಯ ಸಾರ್ವಜನಿಕರನ್ನು ಕಾಡುವಂತಾಗಿದೆ.
ಇನ್ನಾದರೂಶಾಸಕ ಗೋಪಾಕೃಷ್ಣ ಬೇಳೂರು ಇತ್ತ ಗಮನಹರಿಸಿ ಕಳಪೆ ರಸ್ತೆ ಕಾಮಗಾರಿಯ ವಿರುದ್ಧ ಕ್ರಮ ಕೈಗೊಂಡು ಅಂಗಡಿ ಮುಂದೆ ತೆರವು ಕಾರ್ಯ ಮಾಡದಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇಲ್ಲವಾದರೆ ಮುಂದಿನ ಒಂದು ವಾರದ ನಂತರ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಸಹ ಎಚ್ಚರಿಕೆಯನ್ನು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಮಂಜುನಾಥ, ಎಂ.ಸುರೇಶಸಿಂಗ್, ಸುಧೀಂದ್ರ ಪೂಜಾರಿ, ಸುಂದರೇಶ, ಪಿ.ರಮೇಶ, ಪದ್ಮಾ ಸುರೇಶ್, ಜಿ.ಡಿ.ಮಲ್ಲಿಕಾರ್ಜುನ, ಅಶ್ವಿನಿ, ದೀಪಾ ಸುಧೀರ್, ರೇಖಾ ರವಿ, ರಾಮಚಂದ್ರ, ಮುರುಳಿ ಕೆರೆಹಳ್ಳಿ, ಧರ್ಮಣ್ಣ ಕೊಳವಂಕ, ರಾಮಚಂದ್ರ ಬಳೆಗಾರ್, ಮಂಜುಳಾ ಕೇತಾರ್ಜಿರಾವ್, ಇನ್ನಿತರರು, ಬಿಜೆಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.