ವಿಶ್ವ ಆನೆಗಳ ದಿನಾಚರಣೆ 2025 : ಸಕ್ರೆಬೈಲು ಶಿಬಿರದ ಆನೆ ಮರಿಗಳಿಗೆ ನಾಮಕರಣ

Written by Koushik G K

Published on:

ಶಿವಮೊಗ್ಗ :ಆನೆ ಸಂರಕ್ಷಣೆ, ಮಾನವ–ಆನೆ ಸಂಘರ್ಷ ನಿರ್ವಹಣೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರುವ ವಿಶ್ವ ಆನೆಗಳ ದಿನಾಚರಣೆಯನ್ನು 2025 ಆಗಸ್ಟ್‌ 12 ರಂದು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಅರಣ್ಯ ಇಲಾಖೆ, ಶಿವಮೊಗ್ಗ ವನ್ಯಜೀವಿ ವಿಭಾಗ ಮತ್ತು ಸಕ್ರೆಬೈಲು ವನ್ಯಜೀವಿ ವಲಯದ ಸಹಯೋಗದಲ್ಲಿ ಆಯೋಜಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆನೆ ಸಂರಕ್ಷಣೆ – ಸಮಾಜದ ಜವಾಬ್ದಾರಿ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆನೆಗಳು ಕೇವಲ ಅರಣ್ಯದ ಭಾಗವಲ್ಲ, ಅವು ಪರಿಸರ ಸಮತೋಲನ ಕಾಯ್ದುಕೊಳ್ಳುವ ಪ್ರಮುಖ ಜೀವಿಗಳೆಂದು ಅವರು ಹೇಳಿದರು. ಆನೆಗಳಿಗೆ ಗೌರವ ಸಲ್ಲಿಸುವುದು, ಅವುಗಳ ಜೀವನ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಸಕ್ರೆಬೈಲು ಶಿಬಿರವು ತುಂಗಾ ನದಿಯ ತೀರದಲ್ಲಿ ನೆಲೆಸಿದ್ದು, ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರಕೃತಿ ಪ್ರಿಯರು, ವನ್ಯಜೀವಿ ಆಸಕ್ತರು ಹಾಗೂ ವಿದ್ಯಾರ್ಥಿಗಳಿಗೆ ಆನೆಗಳ ಜೀವನ ಕ್ರಮ, ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮದ ಬಗ್ಗೆ ತಿಳಿಯಲು ಇದು ಉತ್ತಮ ಸ್ಥಳವಾಗಿದೆ.

ಸಕ್ರೆಬೈಲು ಶಿಬಿರದ ವಿಶೇಷತೆ

ಶಿಬಿರದಲ್ಲಿ ಒಟ್ಟು 25 ಆನೆಗಳಿದ್ದು, 23 ಪಳಗಿದವು, 3 ಆನೆಗಳನ್ನು ಕ್ರಾಲ್‌ಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪಳಗಿದ ಆನೆಗಳಲ್ಲಿ 16 ಗಂಡು, 5 ಹೆಣ್ಣು ಮತ್ತು 1 ಮಕನ ಆನೆಗಳಿವೆ. ಇವು ಆನೆ ಸೆರೆ ಕಾರ್ಯಾಚರಣೆ, ಉಪಟಳ ನಿಯಂತ್ರಣ, ಹಾಗೂ ದಸರಾ ಉತ್ಸವಗಳಲ್ಲಿ ಭಾಗವಹಿಸುತ್ತವೆ. ಶಿಬಿರದಲ್ಲಿ ಅನುಭವೀ ಮಾವುತರು ಮತ್ತು ತಜ್ಞ ಸಿಬ್ಬಂದಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ಶೀಘ್ರದಲ್ಲೇ ಆನೆಗಳ ಇತಿಹಾಸ, ಸಾಧನೆ ಮತ್ತು ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡುವ ಫಲಕ ಹಾಗೂ ಮಾಹಿತಿ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಇದೆ. ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ.

ಆನೆಗಳ ವರ್ಗಾವಣೆ ಮತ್ತು ಸಹಾಯ

ಇತ್ತೀಚೆಗೆ ಶಿಬಿರದಿಂದ ‘ರವಿ’ ಮತ್ತು ‘ಶಿವ’ ಎಂಬ ಆನೆಗಳನ್ನು ಮಧ್ಯಪ್ರದೇಶಕ್ಕೆ, ‘ಕೃಷ್ಣ’ ಮತ್ತು ‘ಅಭಿಮನ್ಯು’ ಎಂಬ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ. ಮಾನವ–ಆನೆ ಸಂಘರ್ಷ, ಆನೆಗಳ ಭಾವನಾತ್ಮಕ ಜೀವನ ಮತ್ತು ಅವುಗಳ ಮಹತ್ವ ಕುರಿತು ಸಂಶೋಧನೆ, ಶಿಕ್ಷಣ ಮತ್ತು ದತ್ತು ಯೋಜನೆಗಳನ್ನು ಕೈಗೊಳ್ಳುವ ಕೆಲಸ ನಡೆಯುತ್ತಿದೆ.

ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಅವರು ಈ ಬಾರಿ ವಿಶ್ವ ಆನೆಗಳ ದಿನಾಚರಣೆಯ ಧ್ಯೇಯವಾಕ್ಯ ‘ಮಾತೃ ಪ್ರಧಾನರು ಮತ್ತು ನೆನಪುಗಳು’ ಎಂದು ಘೋಷಿಸಿದರು. ಹಿಂಡನ್ನು ಮುನ್ನಡೆಸುವ ಹೆಣ್ಣು ಆನೆಗಳು ತಮ್ಮ ಶಕ್ತಿಯುತ ನೆನಪುಗಳಿಂದ ನೀರು, ಆಹಾರ ಒದಗಿಸುವಲ್ಲಿ ಮತ್ತು ಹಿಂಡುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ವಿಶೇಷ ಅಂಚೆ ಲಕೋಟೆ ಬಿಡುಗಡೆ

ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ, ಸಕ್ರೆಬೈಲು ಆನೆ ಬಿಡಾರದ ಕುರಿತು ಮಾಹಿತಿಯಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಅವರು 2000 ಪ್ರತಿಗಳ ಸೀಮಿತ ಆವೃತ್ತಿಯ ಈ ಲಕೋಟೆಯ ಮೌಲ್ಯ ರೂ.30 ಆಗಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು. ಸೀಮಿತ ಪ್ರಮಾಣದ ಕಾರಣ ಭವಿಷ್ಯದಲ್ಲಿ ಇದರ ಮೌಲ್ಯ ಹೆಚ್ಚುವ ಸಾಧ್ಯತೆ ಇದೆ ಎಂದರು.

ಸಾಂಸ್ಕೃತಿಕ ಸಂಭ್ರಮ ಮತ್ತು ಆನೆ ಮರಿಗಳ ನಾಮಕರಣ

ಶಿಬಿರದಲ್ಲಿ ಆನೆಗಳನ್ನು ಬಣ್ಣದ ಚಿತ್ತಾರಗಳಿಂದ ಅಲಂಕರಿಸಿ, ಅವುಗಳಿಗೆ ಇಷ್ಟವಾದ ಹಣ್ಣು-ತರಕಾರಿ ನೀಡಿ ಸಂಭ್ರಮಿಸಲಾಯಿತು. ನೇತ್ರಾವತಿ ಮತ್ತು ಭಾನುಮತಿ ಹೆಣ್ಣು ಆನೆಗಳಿಗೆ ಜನಿಸಿದ ಮರಿಗಳಿಗೆ ಕ್ರಮವಾಗಿ ‘ಚಾಮುಂಡಿ’ ಮತ್ತು ‘ತುಂಗಾ’ ಎಂದು ನಾಮಕರಣ ಮಾಡಲಾಯಿತು. ಮಕ್ಕಳು ಆನೆ ಮುಖವಾಡ ಧರಿಸಿ ಜಾಥಾ ನಡೆಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ವಿದ್ಯಾರ್ಥಿಗಳ ಭಾಗವಹಿಸುವಿಕೆ

ಪುರದಾಳು, ಹೆದ್ದಾರಿಪುರ, ಬೆಳ್ಳೂರು ಶಾಲೆಗಳಲ್ಲಿ ಚಿತ್ರಕಲೆ, ಪ್ರಬಂಧ ಹಾಗೂ ಪೋಸ್ಟರ್ ಸ್ಪರ್ಧೆಗಳು ನಡೆದವು. ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಆನೆ ತಜ್ಞರೊಂದಿಗೆ ವೆಬಿನಾರ್ ಆಯೋಜಿಸಲಾಯಿತು.

ವಿಶ್ವ ಆನೆಗಳ ದಿನಾಚರಣೆ ಕೇವಲ ಒಂದು ಹಬ್ಬವಲ್ಲ; ಅದು ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧವನ್ನು ಪುನಃ ನೆನಪಿಸುವ ದಿನ. ಆನೆಗಳಂತಹ ಅಪರೂಪದ ಜೀವಿಗಳನ್ನು ರಕ್ಷಿಸುವುದು, ಅವರ ಸಹಜ ವಾಸಸ್ಥಳವನ್ನು ಕಾಪಾಡುವುದು ಮತ್ತು ಸಂಘರ್ಷವನ್ನು ಕಡಿಮೆ ಮಾಡುವುದು ಎಲ್ಲರ ಜವಾಬ್ದಾರಿ. ಸಕ್ರೆಬೈಲು ಶಿಬಿರದಂತಹ ಸ್ಥಳಗಳು ಈ ಉದ್ದೇಶವನ್ನು ಸಾಕಾರಗೊಳಿಸಲು ಜೀವಂತ ಉದಾಹರಣೆಗಳಾಗಿವೆ.

ಶಿಕಾರಿಪುರ: ಶ್ರೀಗಂಧ ಕಳ್ಳರ ಬಂಧನ

Leave a Comment