ರಿಪ್ಪನ್‌ಪೇಟೆ ; ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರವು ಘೋಷಿಸಿದ್ದ “ಶಕ್ತಿ” ಯೋಜನೆ ತೀರ್ಥಹಳ್ಳಿ–ಸಾಗರ ಮಾರ್ಗದಲ್ಲಿ ನಿಷ್ಪ್ರಭವಾಗಿದ್ದು, ಈ ಮಾರ್ಗದಲ್ಲಿ ದಿನ ನಿತ್ಯ ಪ್ರಯಾಣಿಸುವ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರು, ಮಹಿಳೆಯರು ಸರ್ಕಾರದ ಭರವಸೆಯಿಂದ ವಂಚಿತರಾಗಿದ್ದಾರೆ.
ರಾಜ್ಯದಾದ್ಯಂತ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಿದ್ದರೆ, ತೀರ್ಥಹಳ್ಳಿ–ಸಾಗರ ಹೆದ್ದಾರಿ 1ರಲ್ಲಿ ಒಂದೇ ಒಂದು ರಾಜ್ಯ ರಸ್ತೆ ಸಾರಿಗೆ ಬಸ್ ಸಹ ಸಂಚರಿಸದಿರುವುದು ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ತೀರ್ಥಹಳ್ಳಿಯಿಂದ ಸಾಗರ ಮಾರ್ಗದಲ್ಲಿ ಸಂಚರಿಸುವ ಮಹಿಳೆಯರು ಸರ್ಕಾರದ ‘ಶಕ್ತಿ’ ಯೋಜನೆಯ ಫಲವನ್ನು ಅನುಭವಿಸಲು ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಷಯವಾಗಿ ಹಲವು ಬಾರಿ ಮಹಿಳೆಯರು ಹಾಗೂ ಸ್ಥಳೀಯರು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ.
ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಈ ಪ್ರಮುಖ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆ ಪ್ರಾರಂಭವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ದಿನನಿತ್ಯ ಕೆಲಸ, ಶಿಕ್ಷಣ, ಆರೋಗ್ಯ ಸೇವೆಗಾಗಿ ಪ್ರಯಾಣಿಸುವ ಗ್ರಾಮೀಣ ಮಹಿಳೆಯರಿಗೆ ಬಸ್ ಸೌಲಭ್ಯ ಅಗತ್ಯವಾಗಿರುವ ಸಂದರ್ಭದಲ್ಲೂ ಸಾರಿಗೆ ಇಲಾಖೆ ಹಾಗೂ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯರು ಸರ್ಕಾರವನ್ನು ಎಚ್ಚರಿಸಿದ್ದು – “ತೀರ್ಥಹಳ್ಳಿ–ಸಾಗರ ಮಾರ್ಗದಲ್ಲಿ ತಕ್ಷಣ ರಾಜ್ಯ ಸಾರಿಗೆ ಬಸ್ ಸಂಚಾರ ಆರಂಭಿಸಿ ‘ಶಕ್ತಿ’ ಯೋಜನೆಗೆ ನಿಜವಾದ ಅರ್ಥ ನೀಡಬೇಕು, ಇಲ್ಲದಿದ್ದರೆ ಮಹಿಳೆಯರ ಹಕ್ಕಿನ ಮೇಲಿನ ಅನ್ಯಾಯವನ್ನು ಖಂಡಿಸಲು ಜನರ ಹೋರಾಟ ಆರಂಭವಾಗುತ್ತದೆ” ಎಂದಿದ್ದಾರೆ.
ಈ ಯೋಜನೆಯ ಉದ್ದೇಶ ರಾಜ್ಯದ ಯುವತಿಯರು ಮತ್ತು ವಿದ್ಯಾರ್ಥಿನಿಯರು ತಮ್ಮ ದಿನನಿತ್ಯ ಪ್ರಯಾಣದಲ್ಲಿ ಆರ್ಥಿಕ ಬಾಧೆಯಿಂದ ಮುಕ್ತಿ ಪಡೆಯಲು ಹಾಗೂ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗ ಸಂಬಂಧಿತ ಚಲನವಲನ ಸುಗಮವಾಗಿಸಲು ಉಚಿತ ಸಾರಿಗೆ ಸೌಲಭ್ಯ ಒದಗಿಸುವುದು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.