ಶಿವಮೊಗ್ಗ ಸುದ್ದಿ ಶಿವಮೊಗ್ಗ

ಅಕ್ಟೋಬರ್ 15ರಿಂದ ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆ ಮರು ಆರಂಭ : ನಿರ್ವಹಣೆ ಖಾಸಗಿ ಕಂಪನಿಗಳ ತೆಕ್ಕೆಗೆ?

ಶಿವಮೊಗ್ಗ: ಸೋಗಾನೆ ಬಳಿ ಇರುವ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಐದು ಸಂಸ್ಥೆಗಳು ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ತೋರಿವೆ.

ಇಲ್ಲಿಯವರೆಗೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ನಿರ್ವಹಿಸುತ್ತಿತ್ತು. ರಾಜ್ಯ ಸರ್ಕಾರದ ಅಧೀನದಲ್ಲಿದ್ದ ಏಕೈಕ ವಿಮಾನ ನಿಲ್ದಾಣ ಎಂಬ ವಿಶೇಷತೆಯೂ ಇದಕ್ಕೆ ಇತ್ತು. ಆದರೆ ನಿರ್ವಹಣಾ ವೆಚ್ಚ, ವಿಮಾನಯಾನ ಸೇವೆಗಳ ವಿಸ್ತರಣೆ ಹಾಗೂ ಭವಿಷ್ಯದ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣವನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ವಹಿಸುವ ಕುರಿತು ಚಿಂತನೆ ನಡೆದಿದೆ.

ಅದರ ಭಾಗವಾಗಿ ಆಸಕ್ತಿ ವ್ಯಕ್ತಪಡಿಸುವಿಕೆ ಪ್ರಕ್ರಿಯೆ ನಡೆಸಲಾಗಿತ್ತು. ಅದಾನಿ ಸಮೂಹ, ಜಿಎಂಆರ್‌ ಗ್ರೂಪ್‌, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್, ಸ್ಕೈ ಏವಿಯೇಶನ್ ಅಂಡ್ ಏರ್‌ಫೋರ್ಸ್ ಹಾಗೂ ಪಶ್ಚಿಮ ಬಂಗಾಳದ ಬೆಂಗಾಲ್ ಏರ್‌ಟ್ರೋಪ್ ಪೊಲೀಸ್ ಸಂಸ್ಥೆಗಳು ನಿರ್ವಹಣೆಗೆ ಆಸಕ್ತಿ ತೋರಿವೆ ಎಂದು ತಿಳಿದುಬಂದಿದೆ.

ಸೋಗಾನೆ ಬಳಿ 778.62 ಎಕರೆ ಪ್ರದೇಶದಲ್ಲಿ ₹449.22 ಕೋಟಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. ಅದೇ ವರ್ಷ ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭವಾಗಿತ್ತು.

ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಸುಮಾರು ₹6 ಕೋಟಿ ವೆಚ್ಚದ ಈ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಅಕ್ಟೋಬರ್ 15ರಿಂದ ಬೆಂಗಳೂರು ವಿಮಾನ ಸೇವೆ

ಶಿವಮೊಗ್ಗ–ಬೆಂಗಳೂರು ನಡುವೆ ಅಕ್ಟೋಬರ್ 15ರಿಂದ ಮತ್ತೆ ವಿಮಾನ ಹಾರಾಟ ಆರಂಭಿಸಲು ಸ್ಟಾರ್ ಏರ್ ಸಂಸ್ಥೆ ಮುಂದಾಗಿದೆ. ಈ ಹಿಂದೆ ಈ ಮಾರ್ಗದಲ್ಲಿ ಇಂಡಿಗೋ ವಿಮಾನ ಸೇವೆ ನೀಡುತ್ತಿತ್ತು. ಆದರೆ ಪೈಲಟ್ ಹಾಗೂ ವಿಮಾನಗಳ ಕೊರತೆಯಿಂದ ಮೇ 1ರಿಂದ ಸೇವೆ ಸ್ಥಗಿತಗೊಂಡಿತ್ತು.

ಬೆಂಗಳೂರಿಗೆ ನೇರ ವಿಮಾನ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ಸೇವೆ ಪುನರಾರಂಭಿಸಲು ಕೆಎಸ್‌ಐಐಡಿಸಿ ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿತ್ತು. ಇದಕ್ಕೆ ಸ್ಟಾರ್ ಏರ್ ಸ್ಪಂದಿಸಿರುವುದರಿಂದ ಅಕ್ಟೋಬರ್‌ನಿಂದ ಮತ್ತೆ ಬೆಂಗಳೂರು ಸಂಪರ್ಕ ಆರಂಭವಾಗುವ ಸಾಧ್ಯತೆ ಇದೆ.

ಚೆನ್ನೈ, ಹೈದರಾಬಾದ್ ಸೇವೆಯೂ ಮರು ಆರಂಭ ಸಾಧ್ಯತೆ

ಶಿವಮೊಗ್ಗದಿಂದ ಚೆನ್ನೈ ಹಾಗೂ ಹೈದರಾಬಾದ್‌ಗೆ ನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದ ಸ್ಪೈಸ್‌ಜೆಟ್ ಸಂಸ್ಥೆ ಜೂನ್ 9ರಿಂದ ತಾಂತ್ರಿಕ ಕಾರಣಗಳಿಂದ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಸೆಪ್ಟೆಂಬರ್‌ನಿಂದ ಮತ್ತೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ಆರಂಭಿಸಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಆದರೆ ನಿಖರ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.

ಮೇ 1ರ ಮೊದಲು ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಿತ್ಯ 12 ವಿಮಾನಗಳು ಸಂಚರಿಸುತ್ತಿದ್ದವು. ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ಮಾರ್ಗಗಳ ಸೇವೆ ಮರು ಆರಂಭವಾದರೆ ಶಿವಮೊಗ್ಗ ವಿಮಾನ ನಿಲ್ದಾಣದ ಚಟುವಟಿಕೆ ಮತ್ತೊಮ್ಮೆ ಚುರುಕುಗೊಳ್ಳುವ ನಿರೀಕ್ಷೆ ಇದೆ.

Leave a Comment