ಶಿವಮೊಗ್ಗ: ದೇಶದ ಅಭಿವೃದ್ದಿಗೆ ಪೂರಕವಾಗಿ ಕೇಂದ್ರ ಸರ್ಕಾರವು ಸೌಲಭ್ಯ ಮತ್ತು ಸಹಕಾರಗಳನ್ನು ಒದಗಿಸುತ್ತಿರುವುದರ ಜೊತೆಗೆ, ಎದುರಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ಬಿ.ಎಸ್.ಎನ್.ಎಲ್ ಭವನದಲ್ಲಿ ದೂರಸಂಚಾರ ಕ್ಷೇತ್ರದಲ್ಲಿ ನಡೆದ ಸಾಧನೆಗಳ ಕುರಿತು ಏರ್ಪಡಿಸಿದ್ದ ದೂರಸಂಪರ್ಕ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಸ್ವಚ್ಛ ಭಾರತದಿಂದ ಇಂದಿನ ಡಿಜಿಟಲ್ ಯುಗದವರೆಗೆ, ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣದ ಕಾರ್ಯ ಭರದಿಂದ ಸಾಗುತ್ತಿದೆ. ಬಹುಸಂಖ್ಯೆ ಜನಸಂಖ್ಯೆಯ ರಾಷ್ಟ್ರಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ದೊಡ್ಡ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿರ್ವಹಿಸುತ್ತಿದೆ” ಎಂದು ಹೇಳಿದರು.
ಒಂದ ಕಾಲದಲ್ಲಿ ನಷ್ಟದಲ್ಲಿದ್ದ ದೂರಸಂಚಾರ ನಿಗಮವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಕೇಂದ್ರ ಸರ್ಕಾರ ಅಗತ್ಯ ಆರ್ಥಿಕ ನೆರವು ಒದಗಿಸಿದೆ. ಖಾಸಗಿ ವಲಯಗಳ ತೀವ್ರ ಸ್ಪರ್ಧೆಯ ನಡುವೆಯೂ ನಿಗಮವು ಬಂಡವಾಳ ಹೂಡಿಕೆ ಹೆಚ್ಚಿಸಿ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದರು.
287 ಟವರ್‌ಗಳಲ್ಲಿ 136 ಪೂರ್ಣ
4ನೇ ಶ್ರೇಣಿಯೊಳಗಿನ 287 ಟವರ್‌ಗಳ ನಿರ್ಮಾಣದ ಪೈಕಿ 136 ಟವರ್‌ಗಳ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಉಳಿದ ಟವರ್‌ಗಳ ನಿರ್ಮಾಣಕ್ಕೆ ಭೂಸ್ವಾಧೀನ ಹಾಗೂ ತಾಂತ್ರಿಕ ತೊಂದರೆಗಳು ಅಡ್ಡಿಯಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಲೆನಾಡಿಗೆ ಆದ್ಯತೆ

ಹೆಚ್ಚಿನ ಜನಸಂಖ್ಯೆ ಹೊಂದಿರುವ, ವಿಶೇಷವಾಗಿ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಿಗೆ ಆದ್ಯತೆ ಮೇರೆಗೆ ಟವರ್‌ಗಳನ್ನು ಒದಗಿಸಬೇಕೆಂದು ಸೂಚಿಸಿದರು. ತಾಂತ್ರಿಕ ಸಮಸ್ಯೆ, ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ನಿಯಮಾನುಸಾರ ಕಾರ್ಯಾರಂಭ ಮಾಡುವಂತೆ ಸೂಚಿಸಿದರು.
ಬಸವಾನಿ ಘಟನೆಯ ಉಲ್ಲೇಖ
ಮಲೆನಾಡಿನ ಬಸವಾನಿ ಗ್ರಾಮದ ಕೇಂದ್ರದಲ್ಲಿ ಟವರ್‌ನ ಬ್ಯಾಟರಿ ಕಳವು ಪ್ರಕರಣ ಉಲ್ಲೇಖಿಸಿದ ರಾಘವೇಂದ್ರ, “ಇದು ನಿಗಮದ ಸಿಬ್ಬಂದಿಯ ಸಹಕಾರದಿಂದಲೇ ನಡೆದಿರಬಹುದೆಂಬ ಮಾಹಿತಿ ಇದೆ. ನಿಗಮದ ಮಹಾಪ್ರಬಂಧಕರು ತಕ್ಷಣ ಗಮನಹರಿಸಬೇಕು” ಎಂದು ಹೇಳಿದರು. ಜೊತೆಗೆ, ಆಡುಗೋಡಿ ಅರಣ್ಯಭೂಮಿಯಲ್ಲಿ ಟವರ್ ನಿರ್ಮಾಣಕ್ಕೆ ಅನುಮತಿ ಪಡೆಯಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ನೂರಾರು ಕೋಟಿ ವೆಚ್ಚದ ಯೋಜನೆ
“ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಟವರ್‌ಗಳ ನಿರ್ಮಾಣಕ್ಕೆ ಹಣ ಖರ್ಚು ಮಾಡಲಾಗಿದೆ. ಅಂತಿಮ ಹಂತದಲ್ಲಿರುವ ಕೆಲಸಗಳನ್ನು ಮುಂದಿನ ಒಂದು-ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು” ಎಂದು ಹೇಳಿದರು.
ಇಲಾಖೆಗಳ ಸಹಕಾರ ಅಗತ್ಯ
ಈ ಯೋಜನೆ ಯಶಸ್ವಿಯಾಗಲು ಅರಣ್ಯ, ವಿದ್ಯುತ್ ಹಾಗೂ ನಿಗಮದ ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಿದೆ. ಇದು ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ದೂರಸಂಚಾರ ನಿಗಮದ ಹಿರಿಯ ಮಹಾಪ್ರಬಂಧಕ ವಿನಯ್ ಕುಮಾರ್ ಸಿಂಗ್, ಸಮಿತಾ ಸರ್ಕಾರ್, ಶ್ರೀದೇವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್, ಸಮಿತಿ ಸದಸ್ಯರಾದ ಸುಧೀಂದ್ರ ಕಟ್ಟೆ, ಅಶೋಕ್ ಮೂರ್ಥಿ, ನಾಗರಾಜ್ ಬೊಬ್ಬಿಗೆ, ನಿರಂಜನ್ ಟಿ.ಪಿ., ರವಿ ಕೈತೋಟ, ಶಿವಪ್ಪ ಪಿ., ಗಣಪತಿ ಬಿ., ಶಿವಯೋಗಿ ಡಿ., ಪ್ರಸನ್ನ ಕೆರೆಕೈ ಸೇರಿದಂತೆ ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಮೀನುಮರಿ ಸಾಕಾಣಿಕೆಯಿಂದ ಆರ್ಥಿಕ ಸ್ವಾವಲಂಬನೆಗೆ ರಹದಾರಿ ; ಬೇಳೂರು ಗೋಪಾಲಕೃಷ್ಣ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650