ಶಿವಮೊಗ್ಗ

ಖಾತೆಯಿಂದ ₹7 ಲಕ್ಷ ಕಡಿತ ಪ್ರಕರಣ: ಯೂನಿಯನ್ ಬ್ಯಾಂಕ್‌ಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ

ಖಾತೆಯಿಂದ ₹7 ಲಕ್ಷ ಕಡಿತ ಪ್ರಕರಣ: ಯೂನಿಯನ್ ಬ್ಯಾಂಕ್‌ಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ – uninon

ಶಿವಮೊಗ್ಗ: ಗ್ರಾಹಕರ ಅನುಮತಿಯಿಲ್ಲದೆ ಖಾತೆಯಿಂದ ಹಣ ಕಡಿತಗೊಂಡ ಪ್ರಕರಣದಲ್ಲಿ, ಬಾಕಿ ಹಣವನ್ನು ಹಿಂತಿರುಗಿಸದೆ ಸೇವಾ ನ್ಯೂನತೆ ಎಸಗಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ನಗರದ ನಂದಿನಿ ಬಡಾವಣೆಯ ನಿವಾಸಿ ಜೂಲಿ ಎಸ್.ಪಿ. ಅವರು ವಿನೋಬನಗರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು. 2024ರ ಮೇ 3ರಂದು ಅವರ ಖಾತೆಯಿಂದ ಮೂರು ಬಾರಿ ವ್ಯವಹಾರ ನಡೆದಿದ್ದು, ಒಟ್ಟು ₹7,00,000 ಕಡಿತಗೊಂಡಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿತ್ತು.

ತಾವು ಯಾವುದೇ ಒಟಿಪಿ ಹಂಚಿಕೊಳ್ಳಲಿಲ್ಲ, ಯಾವುದೇ ವ್ಯವಹಾರವೂ ಮಾಡಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ. ಹಣ ಕಡಿತವಾದ ಕೂಡಲೇ ಅವರು ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮೊತ್ತವನ್ನು ಮರುಜಮೆ ಮಾಡುವಂತೆ ಮನವಿ ಮಾಡಿದ್ದರು.

ಆದರೆ, ಬ್ಯಾಂಕ್‌ನಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್ 25ರಂದು ಕಾನೂನು ನೋಟಿಸ್ ನೀಡಲಾಗಿತ್ತು. ಬಳಿಕ ಬ್ಯಾಂಕ್ 2024ರ ನವೆಂಬರ್ 30ರಂದು ₹2,33,333 ಮಾತ್ರ ಖಾತೆಗೆ ಜಮೆ ಮಾಡಿದ್ದು, ಉಳಿದ ಮೊತ್ತವನ್ನು ಮರುಪಾವತಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಹಕರು ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರುದಾರರು ಸಲ್ಲಿಸಿದ ದಾಖಲೆಗಳು, ಪ್ರಮಾಣಪತ್ರಗಳು ಹಾಗೂ ಉಭಯ ಪಕ್ಷಗಳ ವಾದಗಳನ್ನು ಪರಿಶೀಲಿಸಿದ ಆಯೋಗ, ಬ್ಯಾಂಕ್ ಕಡೆಯಿಂದ ಸೇವಾ ನ್ಯೂನತೆಯಾಗಿದೆ ಎಂದು ತೀರ್ಮಾನಿಸಿದೆ.

ಆಯೋಗವು ದೂರುವನ್ನು ಭಾಗಶಃ ಪುರಸ್ಕರಿಸಿ, ಗ್ರಾಹಕರಿಗೆ ಬಾಕಿ ಇರುವ ₹4,66,667 ಮೊತ್ತವನ್ನು 2024ರ ಅಕ್ಟೋಬರ್ 25ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.8ರ ಬಡ್ಡಿಯೊಂದಿಗೆ 45 ದಿನಗಳ ಒಳಗೆ ಪಾವತಿಸುವಂತೆ ಬ್ಯಾಂಕ್‌ಗೆ ಆದೇಶಿಸಿದೆ.

ಇದರ ಜೊತೆಗೆ ಮಾನಸಿಕ ಕಿರುಕುಳ ಮತ್ತು ವೇದನೆಗೆ ₹25,000 ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವಾಗಿ ₹10,000 ಪಾವತಿಸುವಂತೆ ಸೂಚಿಸಲಾಗಿದೆ.

ನಿಗದಿತ 45 ದಿನಗಳೊಳಗೆ ಮೊತ್ತ ಪಾವತಿಸಲು ವಿಫಲವಾದರೆ, ಸಂಪೂರ್ಣ ಮೊತ್ತಕ್ಕೆ ವಾರ್ಷಿಕ ಶೇ.10ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠ ಈ ಆದೇಶ ನೀಡಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

error: Content is protected !!