ಶಿವಮೊಗ್ಗ: ನಗರದಲ್ಲಿ ಈ ಬಾರಿಯ ನಾಡಹಬ್ಬ ದಸರಾವನ್ನು 11 ದಿನಗಳ ಕಾಲ ಆಚರಿಸಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ದೇವಿಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುರಾತನ ನಾಣ್ಯಗಳ ಪ್ರದರ್ಶನ ಹಾಗೂ ಯುವ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಾಗಲಿವೆ. ಪಾಲಿಕೆ ಕಟ್ಟಡ ಸೇರಿದಂತೆ ನಗರದ ಬೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿವೆ.
ಅ.11ರಂದು ಚಾಮುಂಡೇಶ್ವರಿ ಮೆರವಣಿಗೆ
ಅಕ್ಟೋಬರ್ 11ರಂದು ಮಹಾನಗರ ಪಾಲಿಕೆ ಆವರಣದಿಂದ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಆರಂಭವಾಗಿ ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನಕ್ಕೆ ತಲುಪಲಿದೆ. ಹಿರಿಯ ನಟ ಶ್ರೀನಾಥ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಬೆಳ್ಳಿ ಮಂಟಪದಲ್ಲಿ ವಿರಾಜಮಾನಳಾಗುವ ದೇವಿಗೆ ಆರು ಚಿನ್ನದ ಬಳೆಗಳನ್ನು ಅರ್ಪಿಸಲಾಗುತ್ತಿದೆ. ಮುಂದಿನ ವರ್ಷ ದೇವಿಯ ಮುಖವಾಡವನ್ನು ಚಿನ್ನದಿಂದ ಅಲಂಕರಿಸುವ ಯೋಜನೆಯೂ ಇದೆ ಎಂದು ತಿಳಿಸಲಾಗಿದೆ. ಮೆರವಣಿಗೆಯಲ್ಲಿ ಸಕ್ರೆಬೈಲು ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಆನೆಗಳು ಪಾಲ್ಗೊಳ್ಳಲಿವೆ.
ಈ ಬಾರಿಯ ದಸರಾವನ್ನು ವೈಭವದಿಂದ ಆಚರಿಸಲು ಪಾಲಿಕೆಯ ನೇತೃತ್ವದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.
200ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ
ದಸರಾ ಅಂಗವಾಗಿ ಶಿವಪ್ಪನಾಯಕ ಅರಮನೆಯಿಂದ 200ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿರುವ ಪುರಾತನ ನಾಣ್ಯಗಳ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಯುವ ದಸರೆಯಲ್ಲಿ ರವಿಚಂದ್ರನ್
ಅಕ್ಟೋಬರ್ 20ರಂದು ನಡೆಯಲಿರುವ ಯುವ ದಸರಾದ ಸಂಗೀತ ಸಂಜೆಯಲ್ಲಿ ನಟ ರವಿಚಂದ್ರನ್ ಭಾಗವಹಿಸಲಿದ್ದಾರೆ. ಧಾರ್ಮಿಕ ಆಚರಣೆಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಸಂಭ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದ್ದು, ನಗರದಲ್ಲಿ ಹಬ್ಬದ ಸಿದ್ಧತೆಗಳು ನಡೆಯುತ್ತಿವೆ.

