ಶಿವಮೊಗ್ಗ:ಜಿಲ್ಲೆಯಲ್ಲಿ ದಾಖಲಾಗಿರುವ ಬಾಲ್ಯವಿವಾಹ ಮತ್ತು ಫೋಕ್ಸೊ ಪ್ರಕರಣಗಳಲ್ಲಿ ಶೇ.60ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳಿಂದ ಆಗಿರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿಷಾದ ವ್ಯಕ್ತಪಡಿಸಿದರು.
ಈ ವಿಷಯವನ್ನು ಅವರು ಇಂದು ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ ವೇಳೆ ತಿಳಿಸಿದರು.
“ಸಮುದಾಯದ ಮುಖಂಡರು ಮುಂಚೂಣಿಯಲ್ಲಿ ಬರಬೇಕು”
“ಸಮುದಾಯದ ಹಿರಿಯರು ಹಾಗೂ ಮುಖಂಡರು ಬಾಲ್ಯವಿವಾಹ ನಿಯಂತ್ರಣದ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಇಲಾಖೆ ತೀವ್ರ ಜಾಗೃತಿ ಮೂಡಿಸಿರುವುದರಿಂದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ,” ಎಂದು ಅವರು ಹೇಳಿದರು.
ಹಳೆಯ ಕೆಲವು ಪ್ರಕರಣಗಳು ಇತ್ಯರ್ಥವಾಗದಿರುವುದರಿಂದ ವಿಶೇಷ ಗಮನ ನೀಡಲಾಗಿದೆ. ಪರಿಶೀಲನೆಯ ನಂತರ ಋಜುವಾದ 11 ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ, ಎಂದರು.
ಸುಳ್ಳು ಜಾತಿ ಪ್ರಕರಣಗಳ ಪರಿಶೀಲನೆ
ಪ್ರಸ್ತುತ ಸಾಲಿನಲ್ಲಿ ದಾಖಲಾಗಿರುವ ಮೂರು ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳನ್ನು ಡಿ.ಸಿ.ಆರ್.ಇ. ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಲಾಗಿದೆ, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಾಗೆಯೇ ದೌರ್ಜನ್ಯ ಪ್ರಕರಣಗಳಿಗೆ ಪರಿಹಾರ ಧನವಾಗಿ ₹138 ಲಕ್ಷ ರೂ. ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ, ಅನುದಾನ ಬಂದ ನಂತರ ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಕರಣಗಳ ವಿವರ
2024ನೇ ಸಾಲಿನಲ್ಲಿ ದಾಖಲಾದ 114 ಪ್ರಕರಣಗಳ ಪೈಕಿ 90 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ, ಹಾಗೂ ಪ್ರಸಕ್ತ ಸಾಲಿನಲ್ಲಿ 98 ಪ್ರಕರಣಗಳಲ್ಲಿ 64 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ದೇವಾಲಯ ಪ್ರವೇಶಕ್ಕೆ ಮುಕ್ತ ಅವಕಾಶ
ಜಿಲ್ಲೆಯ ಗ್ರಾಮೀಣ ಭಾಗಗಳ ಮುಜರಾಯಿ ದೇವಾಲಯಗಳಲ್ಲಿ ಎಲ್ಲಾ ಜಾತಿ-ಜನಾಂಗದವರಿಗೆ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ತಾರತಮ್ಯ ನಡೆಯದಂತೆ ಪ್ರಚಾರ ಫಲಕ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಗುರುದತ್ತ ಹೆಗಡೆ ಹೇಳಿದರು.
ಸದಸ್ಯರ ಅಭಿಪ್ರಾಯ
ಜಾಗೃತಿ ಸಮಿತಿಯ ಸದಸ್ಯ ಮಂಜುನಾಥ್ ಅವರು, “ಶಿವಮೊಗ್ಗ ಬಸ್ ನಿಲ್ದಾಣ ಹಿಂಭಾಗದ ಬುದ್ಧನಗರದ ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು” ಎಂದರೆ, ಬೂದಿಗೆರೆ ಬಸವರಾಜ್ ಅವರು “ಅಪ್ರಾಪ್ತ ವಿವಾಹಿತರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮಾನವೀಯ ದೃಷ್ಟಿಕೋಣ ಅಗತ್ಯ” ಎಂದು ಅಭಿಪ್ರಾಯಪಟ್ಟರು.
ಅದೇ ರೀತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ತಾರತಮ್ಯವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸದಸ್ಯರು ಸೂಚಿಸಿದರು.
ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳಿಗೆ ಬಾಕಿ ಇರುವ ಅರ್ಜಿಗಳನ್ನು ತಕ್ಷಣ ವಿಲೇಮಾಡಿ ವರದಿ ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ಎ.ಜಿ. ಕಾರಿಯಪ್ಪ (ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ), ಮಲ್ಲೇಶಪ್ಪ (ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ), ಸಮಿತಿ ಸದಸ್ಯರು ರುದ್ರಪ್ಪ, ದಿನೇಶ್ ಪಟೇಲ್, ಓಂಪ್ರಕಾಶ್, ನಾಗರಾಜ್, ಬೂದಿಗೆರೆ ಬಸವರಾಜ್, ಮಂಜುನಾಥ್, ಶಿವಬಸಪ್ಪ ಸೇರಿದಂತೆ ಅನೇಕರು ಹಾಜರಿದ್ದರು.
ತೀರ್ಥಹಳ್ಳಿ ; ಭೀಕರ ಅಪಘಾತ, ಬೈಕ್ ಸವಾರ ಸಾವು !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650