Shivamogga

ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ | ಕ.ಸಾ.ಪ. ಮುಂದುವರೆದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ; ಮಧು ಬಂಗಾರಪ್ಪ

ಶಿವಮೊಗ್ಗ ; ನಗರದ ಸಾಹಿತ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪರಿಷತ್ ಕಟ್ಟಡದ ಮುಂದುವರೆದ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡುವುದರ ಜೊತೆಗೆ ವೈಯಕ್ತಿಕವಾಗಿ 5ಲಕ್ಷ ರೂ.ಗಳನ್ನು ಪರಿಷತ್ ಚಟುವಟಿಕೆಗಳಿಗಾಗಿ ನೀಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಗ್ರಾಮ ಚಾಲುಕ್ಯ ನಗರದಲ್ಲಿ ಏರ್ಪಡಿಸಿದ್ದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ಕಟ್ಟಡದ ನೀಲನಕ್ಷೆಯನ್ನು ಉದ್ಘಾಟಿಸಿದ ನಂತರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಕನ್ನಡಿಗರ ಹೆಮ್ಮೆಯ ಅಸ್ಮಿತೆಯ ಪ್ರತೀಕವಾಗಿರುವ ಹಾಗೂ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತು ಕನ್ನಡದ ಉಳಿವು, ವಿಕಾಸದ ಕುರಿತು ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅದಕ್ಕಾಗಿ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದ ಅವರು, ಕನ್ನಡದ ನೆಲ, ಜಲ. ಭಾಷೆಯ ಉಳಿವು ವಿಕಾಸದ ಕಾರ್ಯಕ್ರಮಗಳು ಮುಂದುವರೆಯಲಿ ಎಂದವರು ನುಡಿದರು.

ಈ ನೆಲದ ಶ್ರೀಮಂತ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ಜನಪದ ಮತ್ತಿತರ ಎಲ್ಲಾ ಪ್ರಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಿದೆ. ವಿಶೇಷವಾಗಿ ಕನ್ನಡದ ಪ್ರತಿ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಮೈದಳೆಯಬೇಕು. ನಾನೂ ಓರ್ವ ಕನ್ನಡಿಗನೆಂಬ ಹೆಮ್ಮೆ ನನಗಿದೆ. ಆ ಭಾಷಾಭಿಮಾನವನ್ನು ಯಾರೂ ನನ್ನಿಂದ ಅಳಿಸಲಾಗದು ಎಂದವರು ನುಡಿದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ ಆದರೂ ಕನ್ನಡ ಕಲಿಕೆ ಕಡ್ಡಾಯವಾಗಿರಲಿದೆ. ಕನ್ನಡ ಮಾಧ್ಯಮ ನಿರಂತರವಾಗಿರಲಿದೆ. ಜಿಲ್ಲೆಯ ಹಿರಿಯ ಸಾಹಿತಿ ನಾ.ಡಿಸೋಜ ಅವರು ಭಾಷೆಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರನ್ನು ನೆನೆಯವುದು ಎಲ್ಲರ ಕರ್ತವ್ಯವಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರವು ಎಲ್ಲ ರೀತಿಯ ನೆರವು ಸಹಕಾರವನ್ನು ನೀಡಲಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ನಟಸಾರ್ವಭೌಮ ಡಾ|| ರಾಜ್‍ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದನ್ನು ನೆನಪಿಸಿಕೊಂಡರು.

ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸಮ್ಮೇಳನಾಧ್ಯಕ್ಷ ಡಾ.ಎಸ್.ಪಿ.ಪದ್ಮಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>