ಶಿವಮೊಗ್ಗ:ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರೊಂದಿಗೆ ಸ್ನೇಹಪರ ಸಂಬಂಧ ಬೆಸೆದು ಸೌಹಾರ್ದತೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ‘ಮನೆ ಮನೆಗೆ ಪೊಲೀಸ್’ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್ ನಲ್ಲಿ ಭವ್ಯ ಚಾಲನೆ ದೊರಕಿತು.
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ. ಮಂಜುನಾಥ ನಾಯಕ್ ಉದ್ಘಾಟಿಸಿ ಮಾತನಾಡಿದರು.
“ಈ ಸೇವೆ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಪೊಲೀಸರು ಮನೆಗೆ ಬಂದು ತಾವು ಕೇಳಲು ಸಿದ್ಧರಾಗಿರುವ ವಿಚಾರವೇ ಜನರಲ್ಲಿ ಪೊಲೀಸ್ ವ್ಯವಸ್ಥೆಯ ನಿಕಟತೆ ಹೆಚ್ಚಿಸುತ್ತದೆ. ಮಕ್ಕಳೊಂದಿಗೆ ಸ್ನೇಹಭಾವದಿಂದ ವರ್ತಿಸಿ, ಸಮವಸ್ತ್ರವಿಲ್ಲದೆ ಭೇಟಿ ನೀಡಿದರೆ ಜನರಲ್ಲಿ ಭಯವಿಲ್ಲದ ಸಂಪರ್ಕ ಮೂಡುತ್ತದೆ,” ಎಂದು ಸಲಹೆ ನೀಡಿದರು.
ಬ್ರಿಟಿಷ್ ಲೆಗೆಸಿ ಭೀತಿ ನಿವಾರಣೆಯತ್ತ ಹೆಜ್ಜೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡುತ್ತಾ,
“ಪೊಲೀಸರು ಎಂದರೆ ಜನರಲ್ಲಿ ಇನ್ನೂ ಒಂದು ರೀತಿಯ ಭಯ ಮತ್ತು ಅಸಡ್ಡೆಯ ಭಾವನೆ ಇದೆ. ಇದು ಬ್ರಿಟಿಷ್ ಕಾಲದಿಂದ ಉಳಿದಿರುವ ಮನೋಭಾವನೆಯ ಫಲಿತಾಂಶ. ಇಂತಹ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ನಾವು ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಬೇಕಾಗಿದೆ,” ಎಂದು ಹೇಳಿದರು. “ಸಾಮಾನ್ಯವಾಗಿ ಪೊಲೀಸ್ ಠಾಣೆಗೂ ಬಾರದ ಜನರಲ್ಲಿ ಪೊಲೀಸರ ಕುರಿತು ಬಗ್ಗೆ ಕೆಟ್ಟ ಅಭಿಪ್ರಾಯವೂ ಸಾಕಷ್ಟಿದೆ.. ಆದರೆ ಮನೆ ಮನೆಗೆ ಭೇಟಿ ನೀಡುವ ಮೂಲಕ ನಾವು ಸ್ಥಳೀಯ ಸಮಸ್ಯೆಗಳನ್ನು ಅರಿತು, ಅದನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ,” ಎಂದರು.
ಜು.24 | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?
ವ್ಯವಸ್ಥಿತ ರೂಪದಲ್ಲಿ ನಡೆಯಲಿರುವ ಕಾರ್ಯಕ್ರಮ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಪ್ರಾಸ್ತಾವಿಕ ಭಾಷಣದಲ್ಲಿ,
“ಈ ಯೋಜನೆಯ ಅಡಿಯಲ್ಲಿ 50-60 ಮನೆಗಳ ಸಮೂಹಗಳನ್ನು ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ನಿರ್ದಿಷ್ಟ ಜವಾಬ್ದಾರಿ ನೀಡಲಾಗುತ್ತದೆ. ಓಣಿ ಓಣಿಗೆ ಬೇಟಿ ನೀಡಿ, ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಗುತ್ತದೆ. ಭದ್ರತೆ, ಸುರಕ್ಷತೆ ಹಾಗೂ ಅಪರಾಧಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಪ್ರತಿ ತಿಂಗಳ 2ನೇ ಶನಿವಾರ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಆಯಾ ಠಾಣಾ ವ್ಯಾಪ್ತಿಗಳಲ್ಲಿ ನಡೆಸಲಾಗುತ್ತದೆ,” ಎಂದು ವಿವರಿಸಿದರು.
ಕಾರ್ಯಕ್ರಮದ ವೈಶಿಷ್ಟ್ಯಗಳು
ಕಾರ್ಯಕ್ರಮದಲ್ಲಿ ‘ಮನೆ ಮನೆಗೆ ಪೊಲೀಸ್’ ಕುರಿತು ಕರಪತ್ರ ಹಾಗೂ ಬೀಟ್ ಬುಕ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ, ರಾಮಣ್ಣ ಶೆಟ್ಟಿ ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.