ಕಾದ ಇಳೆಗೆ ತಂಪೆರೆದ ವರುಣ

0 186

ಚಿಕ್ಕಮಗಳೂರು/ಶಿವಮೊಗ್ಗ: ಜಿಲ್ಲೆಯ ಕೆಲ ಭಾಗಗಳಲ್ಲಿ ಶುಕ್ರವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಬಿರುಸಿನ ಮಳೆಯಾಗಿದೆ. ಬೇಸಿಗೆಯ ಬಿರು ಬಿಸಿಲಿನಿಂದ ಬಸವಳಿದಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದ್ದು ಇನ್ನೆರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆ ಶುಕ್ರವಾರ ಸಂಜೆ ಮಳೆಯಾಗಿದ್ದು ನಗರದಲ್ಲಿ ಅರ್ಧ ಗಂಟೆ ಉತ್ತಮ ಮಳೆ ಸುರಿಯಿತು. ಶಿಕಾರಿಪುರ, ರಿಪ್ಪನ್‌ಪೇಟೆ, ಸಾಗರ, ತೀರ್ಥಹಳ್ಳಿ, ಕೋಣಂದೂರು, ಸೊರಬ ಸುತ್ತಮುತ್ತ ಮಳೆಯಾಗಿದೆ. ಇಂದು ಬೆಳಗ್ಗೆ ಸಹ ಗುಡುಗಿನಿಂದ ಕೂಡಿದ ಮಳೆ ಸುರಿದಿದೆ.

ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಸಿಡಿಲು ಬಡಿದು ರಾಕೇಶ್ (28) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಇವರ‌ ಜೊತೆಯಿದ್ದ ಮತ್ತೋರ್ವ ರುದ್ರೇಶ ಬಿನ್ ಸಿದ್ದಪ್ಪ ಎಂಬುವರಿಗೆ ಸಿಡಿಲು ಬಡಿದು ತಮ್ಮ ಎರಡು ಕಾಲಗಳ ಸ್ವಾಧೀನತೆ ಕಳೆದುಕೊಂಡಿದ್ದಾರೆ.

ಇನ್ನೂ ಕಾಫಿನಾಡಿನಲ್ಲಿ ಮಧ್ಯರಾತ್ರಿಯಿಂದ ಗುಡುಗು, ಸಿಡಿಲು, ಮಿಂಚಿನ ಅಬ್ಬರ ಜೋರಾಗಿತ್ತು. ಕೆಲವೆಡೆ ಜೋರು ಮಳೆಯಾಗಿದ್ದರೆ, ಹಲವೆಡೆ ಸಾಧಾರಣ ಮಳೆಯಾಗಿದೆ.

ಕಳಸ ತಾಲ್ಲೂಕಿನ ಕೇಳಬೈಲ್ ಗ್ರಾಮದ ಬಾಬು ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ತರೀಕೆರೆ ಸುತ್ತಮುತ್ತ ಬಿರುಗಾಳಿ ಹೆಚ್ಚಿದ್ದರಿಂದ ಅಡಿಕೆ ಮರಗಳು, ವಿದ್ಯುತ್ ಕಂಬಗಳು ಉರಳಿವೆ.

ಮಧ್ಯರಾತ್ರಿಯಿಂದ ಬೆಳಗಿನ ಜಾವ 5 ಗಂಟೆ ತನಕ ಮಳೆ ಸುರಿದಿದೆ. ಚಿಕ್ಕಮಗಳೂರು ನಗರ, ಆಲ್ದೂರು, ಬಾಳೆಹೊನ್ನೂರು, ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ತರೀಕೆರೆ, ಬೀರೂರು, ಕಡೂರು, ಅಜ್ಜಂಪುರ ಸಹಿತ ಎಲ್ಲಾ ಭಾಗದಲ್ಲೂ ಮಳೆಯಾಗಿದೆ.

Leave A Reply

Your email address will not be published.

error: Content is protected !!