ಅಧಿಕಾರಿಗಳ, ಜನಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಬೆಲೆ ನೀಡದ ಗುತ್ತಿಗೆದಾರ ; ಅಪೂರ್ಣ ರಸ್ತೆ ಕಾಮಗಾರಿ ವಿರೋಧಿಸಿ ಬೆನವಳ್ಳಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿ ಬೆನವಳ್ಳಿ ಗ್ರಾಮದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಈ ರಸ್ತೆ ಕಾಮಗಾರಿಗಾಗಿ ಇದ್ದ ರಸ್ತೆಯನ್ನು ಐದಾರು ತಿಂಗಳ ಹಿಂದೆ ಕಿತ್ತು ಹಾಕಿ ಈವರೆಗೂ ಕಾಮಗಾರಿ ನಡೆಸದೇ ಅಪೂರ್ಣಗೊಳಿಸಿರುವುದನ್ನು ಖಂಡಿಸಿ ಬೆನವಳ್ಳಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿ 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ಎಚ್ಚರಿಸಿದರು.

ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ಮತ್ತು ಸಂಬಂಧಿಸಿದ ಇಲಾಖೆಯವರ ಬಳಿ ಸಾಕಷ್ಟು ಭಾರಿ ದೂರುಗಳನ್ನು ಸಲ್ಲಿಸಲಾಗಿದ್ದು ಈ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ
ಯಾರ ಮಾತಿಗೂ ಮನ್ನಣೆ ನೀಡದೆ ನಿರ್ಲಕ್ಷ್ಯ ವಹಿಸಿರುವುದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಐದಾರು ತಿಂಗಳ ಹಿಂದೆ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವುದರ ಬಗ್ಗೆ ಗುತ್ತಿಗೆದಾರ ಬಂದು ಜೆಸಿಬಿ ಯಂತ್ರದ ಮೂಲಕ ರಸ್ತೆಯನ್ನು ಕಿತ್ತು ಸಣ್ಣ ಜೆಲ್ಲಿಕಲ್ಲು ಹಾಕಿ ಹೋದವರು ಈವರೆಗೂ ಇತ್ತ ಗಮನಹರಿಸಿಲ್ಲ. ಇತ್ತೀಚೆಗೆ ಕ್ಷೇತ್ರದ ಶಾಸಕರ ಬಳಿ ತಿಳಿಸಲಾಗಿದ್ದು ಅವರು ಸಹ ನಾನು ಸಾಕಷ್ಟು ಬಾರಿ ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ ಆದರೂ ಗುತ್ತಿಗೆದಾರ ಮಾತ್ರ ಯಾರ ಮಾತಿಗೂ ಸೊಪ್ಪು ಹಾಕುತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ‘ಮಲ್ನಾಡ್ ಟೈಮ್ಸ್’ ನಲ್ಲಿ ಈ ರಸ್ತೆಯ ಕುರಿತು ಗಮನಸೆಳೆಯುವ ಸಮಗ್ರ ವರದಿ ಸಹ ಪ್ರಕಟಿಸಲಾಗಿದ್ದು ಆಗಲೇ ಗ್ರಾಮಸ್ಥರು ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ನಡೆಸುವು ಎಚ್ಚರಿಕೆಯನ್ನು ನೀಡಿದ್ದು ಈಗ ಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಬಿ.ಎಲ್.ಲಿಂಗಪ್ಪ, ಬಿ.ಆರ್.ಮಹೇಂದ್ರ ಗೌಡ, ಬಿ.ಬಿ.ಶಾಂತಪ್ಪ ಗೌಡ, ವಿಜೇಂದ್ರ ಗೌಡ, ರವೀಂದ್ರ ಗೌಡ, ವೀರೇಶ್ ಬೆನವಳ್ಳಿ, ಅಶೋಕ್, ಉಮೇಶ್, ಸುರೇಶ್ ಇನ್ನಿತರರು, ಗ್ರಾಮಸ್ಥರು ಪಾಲ್ಗೊಂಡಿದ್ದರು.