ರಿಪ್ಪನ್‌ಪೇಟೆ : ವರ್ತಮಾನದ ಕಾಲಘಟ್ಟದಲ್ಲಿ ದೇವರು ಧರ್ಮದ ಹೆಸರಿನಲ್ಲಿ ಮತೀಯ ಸಂಘರ್ಷಕ್ಕೆ ಕಾರಣವಾಗಿ ಮಾನವೀಯ ಮೌಲ್ಯಗಳು ಕಳಹೀನವಾಗಿವೆ ಎಂದು ಶಿಕ್ಷಕ ಕೆ. ಚಂದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಗಾಂಧಿನಗರದ ಹಿಂದೂ ರುದ್ರಭೂಮಿ (ಸ್ಮಶಾನದಲ್ಲಿ) ಪ್ರಜಾವಾಣಿ ಬಳಗದ ಓದುಗರ ವೇದಿಕೆ ಹಾಗೂ ಶಾಂತಿಧಾಮ ಕ್ರಿಯಾ ಸಮಿತಿ ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಭಾರತ ಮೂಡನಂಬಿಕೆಯಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದು, ನಮ್ಮನ್ನ ಆಳುವ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ದೇವರು ಧರ್ಮದ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿದೆ. ಬಸವಣ್ಣ, ಗಾಂಧಿ, ಅಂಬೇಡ್ಕರ್ ಮತ್ತೊಮ್ಮೆ ಜನಿಸಿ ಬಂದು ಉಪದೇಶ ಮಾಡಿದರೂ ಕೇಳುವ ಸ್ಥಿತಿ ನಮ್ಮಲ್ಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ರಾಷ್ಟ್ರೀಯ ಐಕ್ಯತೆ ಹಿತದೃಷ್ಟಿಯಿಂದ ಯುವ ಜನತೆ ಇಂತಹ ಗೊಂದಲಗಳಿಗೆ ಕಿವಿಗೊಡದೆ ಇರುವುದು ವರ್ತಮಾನದ ಅಗತ್ಯವಾಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಭೋಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕಾಯಕದಲ್ಲಿ ದೇವರನ್ನ ಕಾಣಬೇಕು. ಜಾತಿ ಮತ ಪಂಥಗಳ ಬೇದ ಭಾವಗಳನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರಗೊಡದೆ ಸಾಮರಸ್ಯ ಜೀವನಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಜಾವಾಣಿ ಬಳಗದ ಓದುಗರ ವೇದಿಕೆ ವತಿಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ಯುವಕರಿಗಾಗಿ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಬಳಗದ ಸಂಚಾಲಕ ರಿ.ರಾ. ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಘವೇಂದ್ರ (ಅಕ್ವೇರಿಯಂ) ಸ್ವಾಗತಿಸಿದರು. ಶಿವರಾಜ್ ಡಿ ಪ್ರಭು ವಂದಿಸಿದರು.