ನಮ್ಮ ಮೇಷ್ಟ್ರು ನಮ್ಮ ಹೆಮ್ಮೆ ; ಬದುಕು ಕಲಿಸಿದ ಶಿಕ್ಷಕನಿಗೆ ಅವಿಸ್ಮರಣೀಯ ಬೀಳ್ಕೊಡುಗೆ
ರಿಪ್ಪನ್‌ಪೇಟೆ : ಶಿಕ್ಷಕ ಬಹುದೊಡ್ಡ ವ್ಯಕ್ತಿತ್ವ ಅದು. ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಅಂದ್ರೆ ಗುರುವಿನ ಸ್ಥಾನ. ಅಂಬೆಗಾಲಿಡುತ್ತ ಕಲಿಕಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಅರಿವಿನ ಜ್ಞಾನದ ಧಾರೆ ಎರೆದು ಒಂದು ವ್ಯಕ್ತಿತ್ವವನ್ನ ತುಂಬುವಾತ. ತಿಳುವಳಿಕೆಯ ಸಾಂಸ್ಕೃತಿಕ ಹಿರಿಮೆಯ ಹೊಂದಿರುವ ಗುರುವಿಗೆ ವಿಶೇಷ ಗೌರವ ಇದೆ.
ಒಂದು ಗ್ರಾಮದ ಶಿಕ್ಷಕ ತನ್ನ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಟೀಚರ್ ಆಗಿರುವುದಿಲ್ಲ. ಬದಲಾಗಿ ಆ ಗ್ರಾಮಕ್ಕೇ ಮಾರ್ಗದರ್ಶಕನಾಗಿರುತ್ತಾನೆ ಅನ್ನೋ ಮಾತಿದೆ. ಇಂತಹ ವಿಶೇಷ ಸ್ಥಾನ ಅದೆಷ್ಟೋ ಶಿಕ್ಷಕರು ಉಳಿಸಿಕೊಂಡು ಹೋಗಿರ್ತಾರೆ. ಅದ್ರಂತೆ ಕೋಡೂರು ಗ್ರಾಪಂ ವ್ಯಾಪ್ತಿಯ ಬುಲ್ಡೋಜರ್ ಗುಡ್ಡ ಸ.ಕಿ.ಪ್ರಾ.ಶಾಲೆಯ ಶಿಕ್ಷಕರೊಬ್ಬರನ್ನ ಮಂಗಳವಾರ ತುಂಬು ಹೃದಯದಿಂದ ಬೀಳ್ಕೊಡಲಾಯಿತು.

ಹೌದು, ಅದೊಂದು ಅವಿಸ್ಮರಣೀಯ. ನಿಸ್ವಾರ್ಥ ಸೇವೆಗೆ ಮೂಡಿದ ಸಾರ್ಥಕತೆಯ ಭಾವ ಅದಾಗಿತ್ತು. ಬುಲ್ಡೋಜರ್ ಗುಡ್ಡದ ಮುಖ್ಯ ಶಿಕ್ಷಕ ಸಂತೋಷ್ ಹೆಚ್ ಇವರನ್ನು ಅರ್ಥಪೂರ್ಣವಾಗಿ ‘ನಮ್ಮ ಮೇಷ್ಟ್ರು ನಮ್ಮ ಹೆಮ್ಮೆ’ ಎನ್ನುವ ಶೀರ್ಷಿಕೆ ಅಡಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬೀಳ್ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೋಡೂರು ಗ್ರಾಪಂ ಸದಸ್ಯ ಯೋಗೇಂದ್ರಪ್ಪ, ಸಾಧನೆ ಮಾಡುವಂತಹ ವ್ಯಕ್ತಿಗೆ ಯಾವುದೇ ಕೆಲಸವನ್ನು ವಿಶೇಷವಾಗಿ ಮತ್ತು ವಿನೂತನವಾಗಿ ಮಾಡುವ ಹವ್ಯಾಸವನ್ನು ಕರಗತ ಮಾಡಿಕೊಂಡಿರುತ್ತಾರೆ. ಅಂತಹ ವ್ಯಕ್ತಿಗಳು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ವ್ಯಕ್ತಿತ್ವವನ್ನು ಬಳಸಿಕೊಂಡಿರುತ್ತಾರೆ. ಅಂತಹ ಸಾಧಕರ ಸಾಲಿನಲ್ಲಿ ಸೇರುವವರು ನಮ್ಮ ಸಂತೋಷ್ ಅತ್ಯಂತ ಕಡಿಮೆ ಸಮಯದಲ್ಲಿ ಶಾಲೆ ಮತ್ತು ವಿದ್ಯಾರ್ಥಿಗಳು ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಮಹತ್ವದ ಕಾರ್ಯವನ್ನು ಕೈಗೊಂಡಿರುತ್ತಾರೆ. ಆದ್ದರಿಂದ ಸಕಲರಿಗೆ ಸಾಧ್ಯ ಎನ್ನುವ ಮಾತನ್ನು ನೆನಪಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಇಲಾಖೆ ಸಂಯೋಜಕ ದುಗ್ಗಪ್ಪ, ಇಲಾಖೆ ನೀಡುವ ಹಣಕ್ಕೆ ಕೆಲಸ ಮಾಡದೆ ವೈಯಕ್ತಿಕ ಆಸಕ್ತಿ ತೋರಿ ಕೆಲಸ ಮಾಡಿದ್ದಲ್ಲಿ ಇಂತಹ ಗ್ರಾಮಸ್ಥರ ಅಭಿಮಾನ ಮತ್ತು ಪ್ರೀತಿ ಪಡೆಯುವಲ್ಲಿ ಸಾಧ್ಯ ಎಂದು ತಿಳಿಸಿದರು.
ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ಕೋಡೂರು ಶಾಲೆಯ ಮುಖ್ಯ ಶಿಕ್ಷಕ ತೀರ್ಥಪ್ಪ ಮಾತನಾಡಿ, ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕೆಲಸಗಾರರು ಜೀವವಿಲ್ಲದ ಫೈಲ್ ಜೊತೆಗೆ ವ್ಯವಹಾರ ನಡೆಸುತ್ತಾರೆ. ಆದರೆ ಶಿಕ್ಷಕ ವೃತ್ತಿ ಮಾಡುವ ಶಿಕ್ಷಕರು ಮಾತ್ರ ಜೀವಂತ ಫೈಲ್ಗಳಂತೆ ಇರುವ ಮಕ್ಕಳೊಂದಿಗೆ ತಮ್ಮ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ ಇಂತಹ ಮಕ್ಕಳು ಹಾಗೂ ಪೋಷಕರೊಂದಿಗೆ ಅವಿನಭಾವ ಸಂಬಂಧ ಇದ್ದಾಗ ಮಾತ್ರ ಇಂತಹ ಪ್ರೀತಿ ವಿಶ್ವಾಸ ಗೆಲ್ಲಲು ಸಾಧ್ಯ ಎಂದು ತಿಳಿಸಿದರು.

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ್, ಈ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೋರಿಸುವ ಪ್ರೀತಿಗೆ ನಾನು ಅಬಾರಿ ಆಗಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಧರ್ಮಪ್ಪ ಮಾತನಾಡಿ, ಸಂತೋಷ ಅವರ ಕಾರ್ಯ ಅವಿಸ್ಮರಣವಾಗಿದ್ದು ಶಾಲೆಯಲ್ಲಿ ವಿಶೇಷ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಇಂತಹ ಸಾಧಕರ ಸಂತತಿಯು ಹೆಚ್ಚಾಗಲಿ ಎಂದು ಹಾರೈಸುತ್ತೇನೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡಕ್ಕೆ ಶಿಕ್ಷಕರ ವರ್ಗಾವಣೆ ಬರಿಸಲಾಗದ ನಷ್ಟವನ್ನು ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಅನ್ನಪೂರ್ಣ ಮಹೇಶ, ಶಿಕ್ಷಕರಾದ ನಾಗರಾಜಪ್ಪ ಎಚ್ ಬಿ, ಯಶೋಧ ದೇವರಮನಿ, ಗಾಯತ್ರಿ ಎಚ್.ಎಸ್, ಪ್ರೇಮಬಾಯಿ ಜೈರಾಮ್ ನಾಯಕ್, ರಮೇಶ್ ಹೊಸಳ್ಳಿ, ಚಿಕ್ಕಜೇನಿ ಗ್ರಾಮ ಪಂಚಾಯತಿ ಸದಸ್ಯ ಅಣ್ಣಪ್ಪ, ಶಾಲೆಯ ಮುಖ್ಯ ಶಿಕ್ಷಕ ಚಿರಂಜೀವಿ, ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಹಾಗೂ ಗ್ರಾಮಸ್ಥರಾದ ಸುರೇಶ್, ಮಧುಕರ್, ಚಂದ್ರಶೇಖರ್, ಅಶ್ವಿನಿ, ಶುಭಮಂಗಳ ಪವಿತ್ರ, ಜಯಲಕ್ಷ್ಮಿ ಇನ್ನು ಮುಂತಾದವರಿದ್ದರು.
ಶಾಲೆಯನ್ನು ಮಾವಿನ ತೋರಣ ಮತ್ತು ಹೂಗಳಿಂದ ಅಲಂಕರಿಸಿ ಶಾಲೆಯ ಮುಂಭಾಗ ಶಾಮಿಯಾನ ಹಾಕಿ ಗ್ರಾಮಸ್ಥರೆ ಅಡುಗೆ ತಯಾರಿಸಿ ನೆರೆದವರಿಗೆ ಹೋಳಿಗೆ ಮತ್ತು ಪಾಯಸದ ಹಬ್ಬದೂಟ ಹಾಕಿಸಿ ಶಿಕ್ಷಕನಿಗೆ ಉಡುಗೊರೆ ನೀಡುವ ಮೂಲಕ ಬೀಳ್ಕೊಡಲಾಯಿತು. ಈ ವೇಳೆ ತಮ್ಮ ನೆಚ್ಚಿನ ಶಿಕ್ಷಕನ ನೆನೆದು ಅಪಾರ ವಿದ್ಯಾರ್ಥಿಗಳು, ಗ್ರಾಮಸ್ಥರು ಗಳಗಳನೆ ಅತ್ತರು. ಈ ಸಂದರ್ಭ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.
ಶುಭಮಂಗಳ ಪ್ರಾರ್ಥಿಸಿದರು. ಶಿಕ್ಷಕ ಚಿರಂಜೀವಿ ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು. ಪದ್ಮಾವತಿ ವಂದಿಸಿದರು.