ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿ.ವೈ.ರಾಘವೇಂದ್ರ

0 355

ಶಿಕಾರಿಪುರ : ಏತ ನೀರಾವರಿಗಾಗಿ ಪಾದಯಾತ್ರೆ ಮಾಡಿದ್ದೇನೆ ಎಂದು ಹೇಳುವಂತಹ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರು ತಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆ ಬಗ್ಗೆ ಏಕೆ ಚಿಂತನೆ ಮಾಡಲಿಲ್ಲ? ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಚೇಲಾಗಳು ಎಂದು ಹೇಳುವ ನೀವು ತಾವು ಮತ್ತು ನಿಮ್ಮ ತಂದೆ ಬಿಜೆಪಿಯಲ್ಲಿದ್ದಾಗ ನಮ್ಮ ಕಾರ್ಯಕರ್ತರೇ ನಿಮ್ಮ ತಂದೆ ಬಂಗಾರಪ್ಪರವರಿಗೆ ದುಡಿದು ಸಂಸದರನ್ನಾಗಿಸಿದ್ದು ಮರೆತು ಹೋಯಿತೇ‌ ಎಂದು ಸಂಸದ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ ವೈ ರಾಘವೇಂದ್ರರವರು ‌ಸಚಿವ ಮಧು ಬಂಗಾರಪ್ಪರವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಚುರ್ಚುಗುಂಡಿ ಗ್ರಾಮದ ಬಳಿ ಇರುವ ಸಂಗಮೇಶ್ವರ ಸಮುದಾಯ ಭವನದ ಆವರಣದಲ್ಲಿ ಸೋಮವಾರ ಈಸೂರು ಮಹಾಶಕ್ತಿ ಕೇಂದ್ರದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ಅವದಿಗೆ ತಾಲ್ಲೂಕು ಹಾಗೂ ಜಿಲ್ಲೆಯಿಂದ ಸಂಸದನನ್ನಾಗಿಸಲು ನನ್ನ ತಾಯಿ ಸ್ಥಾನವನ್ನು ತುಂಬಿ ನೀವೆಲ್ಲರೂ ಹಾಗೂ ನಮ್ಮ ಪಕ್ಷದ ಹಿರಿಯರು, ಕಾರ್ಯಕರ್ತರಾದಿಯಾಗಿ ಪಕ್ಷದ ಅನೇಕ ಮುಖಂಡರು ಆಶೀರ್ವದಿಸಿದ್ದೀರಿ. ನಿಮ್ಮ ಹಾರೈಕೆಯಿಂದ ಸಂಸದನಾದ ನಾನು ನಮ್ಮ ತಂದೆ ಬಿ ಎಸ್ ಯಡಿಯೂರಪ್ಪರವರ ಕೃಪಾಶಿರ್ವಾದದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೇವಲ ಚುನಾವಣಾ ಸಂದರ್ಭದಲ್ಲಿ ಮತ ಕೇಳಲು‌ ಮಾತ್ರ‌ನಿಮ್ಮ‌ಬಳಿ‌ ಬರದೇ ಯಾವಾಗಲೂ ನಿಮ್ಮ ಬಳಿಯೇ ಇದ್ದು ನಿಮ್ಮ ಮಗನಾಗಿ ಸೇವೆ ಸಲ್ಲಿಸಿದ್ದೇನೆ. 

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರು ಕಾರ್ಯಕ್ರಮ ಒಂದರಲ್ಲಿ ನಮ್ಮ ಕಾರ್ಯಕರ್ತರಿಗೆ ಚೇಲಾಗಳು ಎಂಬ ಪದ ಬಳಸಿ ಅವಮಾನಿಸಿದ್ದಾರೆ. ಈ ಮಾತು ಅವರ ಹುದ್ದೆಗೆ ಶೋಭೆ ತರುವಂತದ್ದಲ್ಲ. ನೀವು ಮತ್ತು ನಿಮ್ಮ ತಂದೆ ಬಿಜೆಪಿಯಲ್ಲಿದ್ದಾಗ ನಮ್ಮ ಕಾರ್ಯಕರ್ತರೇ ನೀವು ಸೊರಬದಲ್ಲಿ ಶಾಸಕರಾಗಲು ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದೀರಿ, ನಿಮ್ಮ ತಂದೆ ಬಂಗಾರಪ್ಪರವರಿಗೆ ದುಡಿದು ಸಂಸದರನ್ನಾಗಿಸಿದ್ದು ಮರೆತು ಹೋಯಿತೇ? ಏತ ನೀರಾವರಿಗಾಗಿ ಪಾದಯಾತ್ರೆ ಮಾಡಿದ್ದೇನೆ ಎಂದು ಹೇಳುವಂತಹ ನೀವು ನಿಮ್ಮ  ತಂದೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆ ಬಗ್ಗೆ ಏಕೆ ಚಿಂತನೆ ಮಾಡಲಿಲ್ಲ? ಶಿಕಾರಿಪುರದಲ್ಲಿ ಜಿಲ್ಲಾ ಆಸ್ಪತ್ರೆಯಾಗುವುದನ್ನು ತಪ್ಪಿಸಿದ ಮಧು ಬಂಗಾರಪ್ಪರವರಿಗೆ ತಾಲ್ಲೂಕಿನ ಜನತೆಯಲ್ಲಿ ಮತ ಕೇಳುವ ಯಾವ ನೈತಿಕತೆ ಇದೆ?. ತಾಲ್ಲೂಕಿಗೆ ಇವರ ಕೊಡುಗೆ‌ ಏನು? ಎಂದು ಪ್ರಶ್ನಿಸಿದರು.

ಕುವೈತ್ ನಲ್ಲಿ ಭಾರತದ 8 ಇಂಜಿನಿಯರ್ ಗಳು ಗೂಡಾಚಾರಿ ಕೆಲಸ ಮಾಡುತ್ತಿದ್ದಾರೆ ಎಂದು ಅಲ್ಲಿನ ಉಚ್ಚನ್ಯಾಯಾಲಯ ಅವರಿಗೆ ಮರಣದಂಡನೆ ಘೋಷಿಸಿತ್ತು. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ತೊಂದರೆಯಾಗದಂತೆ ಅವರನ್ನು ವಾಪಾಸ್ ನಮ್ಮ ದೇಶಕ್ಕೆ ಕರೆತಂದರು. ನಮ್ಮ ತಾಲ್ಲೂಕಿನ ಯೋಧರೊಬ್ಬರು ಉಗ್ರಗಾಮಿಗಳ ಗುಂಡಿಗೆ ಬಲಿಯಾದಾಗ ಮರಣ ಹೊಂದಿದ‌ ಜಾಗದಿಂದ ಇಲ್ಲಿಗೆ ಕರೆ ತಂದದ್ದು ನಿಮ್ಮ ರಾಘವೇಂದ್ರ, ರಷ್ಯ ಉಕ್ರೇನ್ ಯುದ್ಧ ನಡೆಯುವಾಗ ಅಲ್ಲಿನ ಭಾರತೀಯರನ್ನ ಯಾವುದೇ ರೀತಿಯ ತೊಂದರೆಯಾಗದಂತೆ‌ ನಮ್ಮ ದೇಶಕ್ಕೆ ಕರೆತಂದದ್ದು ಇದೇ‌ ಮೋದಿಯವರು. ನರೇಂದ್ರ ಮೋದಿಯವರು ಮತ್ತು ಅಮಿತ್ ಷಾರವರು ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿ ನಮ್ಮ ದೇಶದ ಧ್ವಜವನ್ನು ಅಲ್ಲಿ ಹಾರಿಸಿ ಅಲ್ಲಿನವರಿಗೆ ಸ್ವಾತಂತ್ರ್ಯ ನೀಡಿದರು. ಬಾಲ್ಯ ವಿವಾಹ ಪದ್ಧತಿ ಹಾಗೂ ತ್ರಿಬಲ್ ತಲಾಕ್ ಅನ್ನು ರದ್ದುಪಡಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದರಲ್ಲ. ದೇಶದ 10 ಕೋಟಿ ಬಡ ಮಹಿಳೆಯರಿಗೆ ಉಜ್ವಲ್ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಕೊಟ್ಟರಲ್ಲ ಇಂತಹಾ ಮೋದಿಗೆ ಹಾಗೂ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಶಿಕಾರಿಪುರ ಮಾರ್ಗವಾಗಿ ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಯೋಜನೆ, ರಾಣೆಬೆನ್ನೂರಿನಿಂದ ಬೈಂದೂರಿಗೆ ರಾಷ್ಟ್ರೀಯ ಹೆದ್ದಾರಿ, ಶಿವಮೊಗ್ಗದಿಂದ ಹಾನಗಲ್ ತಾಲ್ಲೂಕಿನ ತಡಸಾದವರೆಗೆ ರಾಜ್ಯ ಹೆದ್ದಾರಿ, ಕಳಸವಳ್ಳಿಯಿಂದ ಸಿಗಂದೂರಿಗೆ ತೆರಳಲು 12 ಕಿ.ಮಿ ಮೇಲ್ಸೇತುವೆ,ಶಿವಮೊಗ್ಗಕ್ಕೆ ಕೃಷಿ ಕಾಲೇಜು, ತೋಟಗಾರಿಕಾ ಕಾಲೇಜು, ಆಯುರ್ವೇದಿಕ್ ಕಾಲೇಜು ಹೀಗೆ ಜಿಲ್ಲೆಯ ಅನೇಕ ಅಭಿವೃದ್ಧಿಗೆ ಶ್ರಮಿಸಿದ ನಿಮ್ಮ ರಾಘವೇಂದ್ರಗೆ ನಿಮ್ಮ ಮತವಿರಲಿ ಎಂದು ಮತಯಾಚನೆ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಮಾಜಿ ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ನಿವೇದಿತ ರಾಜು, ಅರುಂಧತಿ ರಾಜೇಶ್, ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಕು|| ಮಂಜುಳಾ, ಗುರುಮೂರ್ತಿ ಗಾಯಿತ್ರಿ ಮಲ್ಲಪ್ಪ, ರೇಖಾ ರಾಜಶೇಖರ್, ರೂಪ, ಸವಿತಾ ಶಿವಕುಮಾರ್ ನಾಯ್ಕ್, ವಿಜಯಲಕ್ಷ್ಮಿ, ಮಂಗಳ, ಲತಾರವಿಕುಮಾರ್, ಶಕುಂತಲಾ,ಬಳಿಗಾರ್ ರುದ್ರಮುನಿ, ಶಶಿಧರ್, ಉಮೇಶ್, ವೀರೇಂದ್ರ ಸೇರಿದಂತೆ ಅನೇಕರು ಹಾಜರಿದ್ದರು.

Leave A Reply

Your email address will not be published.

error: Content is protected !!