ರಿಪ್ಪನ್‌ಪೇಟೆ: ಸಮೀಪದ ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶಿವಮ್ಮ ಪದ್ಮನಾಭ ಅವಿರೋಧವಾಗಿ ಅಯ್ಕೆಯಾದರು.
ಈ ಹಿಂದೆ ಗ್ರಾಮ ಪಂಚಾಯ್ತಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷೆಯಾಗಿದ್ದು ನಂತರದಲ್ಲಿ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಿವಮ್ಮ ಪದ್ಮನಾಭ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಬಿಜೆಪಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.
9 ಸದಸ್ಯ ಬಲ ಹೊಂದಿರುವ ಬಾಳೂರು ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ 5 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಾಗಿ 4 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು.
ಆರೋಪ:
ಅಧ್ಯಕ್ಷರನ್ನು ನಮ್ಮ ಪಕ್ಷದವರಿಗೆ ಮಾಡುವಂತೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ರಾತ್ರೋರಾತ್ರಿ ಭೇಟಿ ಮಾಡಿ ಇಲ್ಲಸಲ್ಲದ ಆಸೆ ಆಮಿಷ ಒಡ್ಡಿ ಇನ್ನೂ ಹೆಚ್ಚಿನ 20 ಆಶ್ರಯ ಮನೆಗಳನ್ನು ನೀಡುತ್ತೇನೆ ಮತ್ತು ಮುಂದಿನ ಚುನಾವಣೆಯಲ್ಲಿ ನಾನೇ ಗೆದ್ದು ಮಂತ್ರಿಯಾಗುತ್ತೇನೆಂದು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹೇಳಿಕೊಂಡಿದ್ದರೂ ಕೂಡಾ ನಮ್ಮ ಬೆಂಬಲದಲ್ಲಿ ಗೆದ್ದ ಸದಸ್ಯರು ಯಾವುದನ್ನು ಪರಿಗಣಿಸದೇ ಪಕ್ಷ ನಿಷ್ಟೆ ತೋರಿದ್ದಾರೆಂದು ಹೇಳಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಳದಿ ಗ್ರಾಮ ಪಂಚಾಯ್ತಿ ಸಹ ಕಾಂಗ್ರೆಸ್ ಕೈಗೆ ದೊರೆಕಿದ್ದು ಈಗ ಬಾಳೂರು ಕೈ ಪಾಲಾಗಿರುವುದನ್ನು ನೋಡಿದರೆ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಾಗರ ಗಣಪತಿ ಕೆರೆ ಅಭಿವೃದ್ದಿ ಬಿಟ್ಟರೆ ಇನ್ನಾವುದೇ ಅಭಿವೃದ್ದಿಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆಂದು ಆರೋಪಿಸಿದರು.
ಈವರೆಗೂ ಶಾಲಾ ಮಕ್ಕಳಿಗೆ ಸರಿಯಾದ ಪಠ್ಯ ಪುಸ್ತಕ ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಸರ್ಕಾರ ಸಾಗರ ಕ್ಷೇತ್ರದ ಶಾಸಕರಿಗೆ ಗಣಪತಿ ಕೆರೆ ಒಂದಕ್ಕೆ ಖರ್ಚು ಮಾಡಿದ ಅನುದಾನದಲ್ಲಿ ಮಕ್ಕಳಿಗೆ ಸೌಲಭ್ಯವನ್ನು ನೀಡಬಹುದಿತು ಎಂದರು.
ಈ ಸಂದರ್ಭದಲ್ಲಿ ಅರಸಾಳು ಗ್ರಾ.ಪಂ. ಅಧ್ಯಕ್ಷ ಉಮಾಕರ, ಚಂದ್ರಶೇಖರ ಮಳವಳ್ಳಿ, ಉಂಡಗೋಡು ನಾಗಪ್ಪ, ಗಂಟೆ ದೇವರಾಜ್‌ಗೌಡ, ಎಂ.ಎಂ.ಪರಮೇಶ್, ರಮೇಶ್, ಸಂತೋಷ ಚಿಂತು ಇನ್ನಿತರ ಮುಖಂಡರು ಹಾಜರಿದ್ದರು.