MT Exclusive | ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಅವ್ಯವಸ್ಥೆಯ ಆಗರ | ಸೋರುತಿಹುದು ಸರ್ಕಾರಿ ಶಾಲಾ ಕಟ್ಟಡ ! ಛತ್ರಿ ಹಿಡಿದು ನೀರಿನಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು…!! ಎಲ್ಲಿದು ?

0 164

ರಿಪ್ಪನ್‌ಪೇಟೆ: ಕೋಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೇಲ್ಚಾವಣಿ ಶಿಥಿಲವಾಗಿದ್ದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಮಳೆಯಿಂದ ರಕ್ಷಣೆ ಪಡೆಯಲು ವಿದ್ಯಾರ್ಥಿಗಳು ಶಾಲಾ ತರಗತಿ ಕೊಠಡಿಯಲ್ಲಿ ಛತ್ರಿ ಹಿಡಿದು ಪಾಠ ಪ್ರವಚನ ಕೇಳುವ ಸ್ಥಿತಿ ಎದುರಾಗಿದೆ ಎಂದು ಶಾಲಾ ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ಶಿವಮೊಗ್ಗ-ಹೊಸನಗರ ಮುಖ್ಯ ರಸ್ತೆಯಲ್ಲಿರುವ ಕೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 125 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 8ನೇ ತರಗತಿಯಿಂದ 10ನೇ ತರಗತಿಯ ವರೆಗೆ 52 ಹೆಣ್ಣು ಮಕ್ಕಳು 73 ಜನ ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಆರು ಜನ ಶಿಕ್ಷಕರು, ದ್ವಿತೀಯ ದರ್ಜೆ ಓರ್ವ ಡಿ.ಗ್ರೂಪ್ ನೌಕರ ವರ್ಗ ಇದ್ದು 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ.ಪಬ್ಲಿಕ್ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶೇಕಡಾ 86 ರಷ್ಟು ಫಲಿತಾಂಶ ಪಡೆದಿರುವ ಈ ಪ್ರೌಢಶಾಲೆಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿರುವ ಬಗ್ಗೆ ಶಾಲಾ ಎಸ್.ಡಿ.ಎಂ.ಸಿ.ಯವರು ಮತ್ತು ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕೂಡಾ ಗಮನಹರಿಸದೇ ಇರುವುದೇ ಈ ದುರಾವಸ್ಥೆಗೆ ಕಾರಣ ಎನ್ನಲಾಗುತ್ತಿದೆ.

ಕಳೆದ ವರ್ಷದಲ್ಲಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೋಡೂರು ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು ಮಳೆ ಹಾನಿ ಪ್ರದೇಶದ ವೀಕ್ಷಣೆಗಾಗಿ ಭೇಟಿ ನೀಡಿದ ರಾಜ್ಯ ಗೃಹಸಚಿವರಿಗೆ ಮತ್ತು ಶಾಸಕ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾ ತಾಲ್ಲೂಕ್ ಮಟ್ಟದ ಅಧಿಕಾರಿಗಳ ತಂಡಕ್ಕೆ ಈ ಶಾಲಾ ಮೇಲ್ಚಾವಣಿ ಶಿಥಿಲಗೊಂಡಿರುವ ಬಗ್ಗೆ ಮನವಿ ನೀಡಲಾಗಿದ್ದು ಮಳೆಹಾನಿ ಪರಿಹಾರದಡಿಯಲ್ಲಿ ಶಾಲೆಯ ಮೇಲ್ಛಾವಣಿ ದುರಸ್ಥಿಗೊಳಿಸುವ ಕಾಮಗಾರಿ ಪಟ್ಟಿಗೆ ಸೇರಿಸಿ ಅನುಮೊದನೆಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದ್ದು ಈ ವರೆಗೂ ಮೇಲ್ಚಾವಣಿ ದುರಸ್ಥಿಗೆ ಹಣ ಬಿಡುಗಡೆಯಾಗದೆ ಇರುವುದರಿಂದಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತರಗತಿಯ ಕೊಠಡಿಯಲ್ಲಿ ಛತ್ರಿ ಹಿಡಿದುಕೊಂಡು ಪಾಠ ಕೇಳುವಂತಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ತರಗತಿಯ ಕೊಠಡಿಯ ಮೇಲ್ಛಾವಣಿ ಮರದ ರೀಪರ್-ಪಕಾಶಿಗಳು ಗೆದ್ದಲು ತಿಂದು ಹಾಳಾಗಿ ಹೋಗಿದ್ದು ಮಳೆಯಿಂದಾಗಿ ಹೆಂಚುಗಳು ಎಲ್ಲಿ ತಲೆ ಮೇಲೆ ಬೀಳುತ್ತದೋ ಎಂಬ ಭಯದಲ್ಲಿ ಮೇಲೆ ನೋಡುತ್ತಾ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹೆಂಚಿನಿಂದ ಮಳೆ ಹನಿಗಳು ನೋಟ್ಸ್ ಪುಸ್ತಕದ ಮೇಲೆ ಬಿದ್ದು ಬರವಣಿಗೆ ಅಳಿಸಿ ಹೋಗುತ್ತದೇ ಎಂಬ ಭಯದಲ್ಲಿದ್ದು ಕೊಠಡಿಯಲ್ಲಿ ಗಾಳಿ ಚಳಿ ಮಳೆ ನೀರು ಸೋರಿ ಕಾಲಿನ ಬಳಿ ನೀರು ತಲೆಯ ಮೇಲೆ ನೀರು ಇದರಿಂದಾಗಿ ಆರೋಗ್ಯವಂತ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಬೇಕಾಗುವುದೆಂಬ ಭಯದಲ್ಲಿ ಪಾಠ ಪ್ರವಚನ ಕೇಳಬೇಕಾಗಿದೆ ಎಂದು ಹೇಳಿದರು.

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮತ್ತು ಜಿಲ್ಲಾಧಿಕಾರಿಗಳು ಜಿಲ್ಲಾ ಶಿಕ್ಷಣಾಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ರಕ್ಷಣೆಯೊಂದಿಗೆ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಯ ದುರಸ್ಥಿಗೆ ಮುಂದಾಗುವರೇ ಕಾದು ನೋಡಬೇಕಾಗಿದೆ.

ನಮ್ಮ ಗಮನಕ್ಕೆ ಬಂದಿಲ್ಲ
ಗುರುವಾರದಂದ ಸುರಿದ ಮಳೆಯಿಂದಾಗಿ ಶಾಲೆಯ ತರಗತಿ ಕೊಠಡಿಗಳೆಲ್ಲಾ ಸೋರಿದ ನೀರು ತುಂಬಿ ಹೊರ ಹಾಕಿರುವ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಿ ಇಂದು ಶಾಲೆಗೆ ‘ಮಲ್ನಾಡ್ ಟೈಮ್ಸ್’ ಪ್ರತಿನಿಧಿ ಭೇಟಿ ನೀಡಿ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ಮತ್ತು ಬಿ.ಆರ್.ಪಿ ರಂಗನಾಥ್ ರವರಿಗೆ ದೂರವಾಣಿಯ ಮೂಲಕ ವಿಚಾರಿಸಿದಾಗ ನಮ್ಮ ಗಮನಕ್ಕೆ ಬಂದಿಲ್ಲ ನೋಡಿ ವಿಚಾರಿಸಿ ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!