ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ |
ಮಹಿಳೆಯರನ್ನು ಸದಾ ಗೌರವಿಸಬೇಕು ; ನ್ಯಾ.ಮಲ್ಲಿಕಾರ್ಜುನ ಗೌಡ

0 9


ಶಿವಮೊಗ್ಗ:‌ ಸರ್ವ ರೀತಿಯಲ್ಲಿ ಸಮರ್ಥಳಾದ, ಕುಟುಂಬದ ಬೆನ್ನೆಲುಬಾದ ಮಹಿಳೆಯರನ್ನು ನಾವೆಲ್ಲಾ ಸದಾ ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ನುಡಿದರು.


ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಆಲ್ಕೊಳದ ಚೈತನ್ಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಪುರುಷರಿಗಿಂತ ಹೆಚ್ಚು ಶಕ್ತಿವಂತಳು, ಇಡೀ ಕುಟುಂಬವನ್ನು ತಿದ್ದಿ ತೀಡಿ ದಾರಿಗೆ ತರುವ ಸಾಮಥ್ರ್ಯ ಮತ್ತು ಹೊಣೆಗಾರಿಕೆ ಉಳ್ಳವಳು. ಇಂತಹ ಮಹಿಳೆಯನ್ನು ನಾವೆಲ್ಲರೂ ಸದಾ ಗೌರವಿಸಬೇಕು.
ಹಿಂದೆ ಹೆಣ್ಣು-ಗಂಡು ಎಂಬ ತಾರತಮ್ಯ ಬಹಳ ಇತ್ತು. ದೈಹಿಕವಾಗಿ ಮಹಿಳೆ ದುರ್ಬಲಳು, ಗಂಡಿಗೆ ಸಮಾನವಾಗಿ ದುಡಿಯಲಾರಳು ಹಾಗೂ ಹೆರಿಗೆ, ಇತರೆ ಆರೋಗ್ಯ ಸಮಸ್ಯೆಗಳ ಕಾರಣ ಸಂಬಳ ಮತ್ತು ರಜೆಯಲ್ಲಿ ಸಹ ತಾರತಮ್ಯ ಮಾಡಲಾಗುತ್ತಿತ್ತು. ಸುಮಾರು 1911 ರಿಂದ ಈ ಬಗ್ಗೆ ಹೋರಾಟ ನಡೆಸಿದ ಫಲವಾಗಿ 1976 ರಲ್ಲಿ ಇದಕ್ಕೆ ಮುಕ್ತಿ ದೊರಕಿ ಸಮಾನ ಸಂಬಳ, ಇತರೆ ಸೌಲಭ್ಯ ದೊರೆತವು.
ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಮಹಿಳೆ ಪುರುಷರಿಗೆ ಸರಿಸಮಾನ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾಳೆ. ಒಂದು ಉತ್ತಮ ಕುಟುಂಬದ ಹಿಂದೆ ಹೆಣ್ಣಿನ ಪಾತ್ರ ಮಹತ್ವದ್ದಾಗಿದೆ. ಮೇಲು-ಕೀಲು ಎನ್ನದೆ ಹೊಂದಾಣಿಕೆಯಿಂದ ನಡೆದರೆ ಸಾಮರಸ್ಯ ಸಾಧ್ಯವಾಗುತ್ತದೆ ಎಂದರು.


ಆದರೆ ಇಂದು ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಿರುವುದುನ್ನು ಕಾಣುತ್ತಿದೇವೆ. ಅದಕ್ಕೆ ಕಾರಣ ಮೊದಲಿನ ರೀತಿಯಲ್ಲಿ ಕುಟುಂಬ ವ್ಯವಸ್ಥೆಗಳು ಇಲ್ಲದಿರುವುದು. ಹಿರಿಯರು ಕಿರಿಯರು ಒಂದೆಡೆ ಕಲೆತು ಆಟ, ಇತರೆ ಚಟುವಟಿಕೆಗಳಲ್ಲಿ ತೊಡಗದೇ ಇರುವುದು. ಇಂದು ಮಕ್ಕಳಿಗೆ ಊಟ ಮಾಡಿಸಲು ಸಹ ಮೊಬೈಲ್ ಬೇಕು ಅನ್ನುವಂತೆ ಮೊಬೈಲ್ ಮೊರೆ ಹೋಗುತ್ತಿರುವುದು ಸರಿಯಲ್ಲ. ಓದುವ ಹವ್ಯಾಸ ಹೆಚ್ಚಬೇಕು. ಅದರಿಂದ ಮಾನಸಿಕ ಆರೋಗ್ಯ ಮತ್ತು ಜ್ಞಾನ ಕೂಡ ಹೆಚ್ಚುತ್ತದೆ. ಆದ್ದರಿಂದ ಈ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‍ಎಂಎಸ್‍ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಮಾತನಾಡಿ, ಛಲ ಮತ್ತು ವಿಶ್ವಾಸದಿಂದ ಮುನ್ನುಗ್ಗುವ ಮನಸ್ಸಿನವರು ಏನನ್ನಾದರೂ ಸಾಧಿಸುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳು ಇವೆ. ಐಪಿಎಸ್ ಅಧಿಕಾರಿ ಎನ್.ಅಂಬಿಕಾ ಅವರ ಜೀವನವೂ ಅದಕ್ಕೆ ಸಾಕ್ಷಿಯಾಗಿದೆ. ಬಾಲ್ಯ ವಿವಾಹವಾದ ಈಕೆ ಹೇಗೆ ಚಿಕ್ಕಮಕ್ಕಳು ಮತ್ತು ಸಂಸಾರವನ್ನು ಸರಿದೂಗಿಸಿಕೊಂಡು ಐಪಿಎಸ್ ಪಾಸ್ ಆಗಿ ಅಧಿಕಾರಿಯಾದರು ಎಂದು ವಿವರಿಸಿದ ಅವರು ಆತ್ಮವಿಶ್ವಾಸವಿದ್ದರೆ ನಾವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬಹುದೆಂದು ತಿಳಿಸಿದರು.


ಸಮಾಜದಲ್ಲಿ ಶೋಷಣೆಗೆ ಒಳಗಾದ ಕುಟುಂಬಗಳಿಗೆ ನಾವು ಹೇಗೆ ಆತ್ಮವಿಶ್ವಾಸ ತುಂಬಿ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಅವಲೋಕಿಸಿಕೊಂಡು ಕರ್ತವ್ಯ ನಿರ್ವಹಿಸಿದಾಗ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬಂತೆ ನಮ್ಮ ಸೇವೆ ಸಾಗಬೇಕೆಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ರಕ್ಷಿತಾ ಹಾಗೂ ಸಿಂಧು ಸೆಬಾಸ್ಟಿನ್, ಸಮಾಜ ಸೇವೆಯಲ್ಲಿ ಅನಿತಾ ಮೇರಿ, ಉದ್ಯಮ ಕ್ಷೇತ್ರದಲ್ಲಿ ಸೌಮ್ಯ ಗುರುರಾಜ್ ಮತ್ತು ವಿಶೇಷಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೇಮ ಕೆ.ವಿ ಇವರನ್ನು ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ, ಸಿಡಿಪಿಓ ಗಳಾದ ಚಂದ್ರಪ್ಪ, ಶಶಿರೇಖಾ, ಇತರರು ಹಾಜರಿದ್ದರು.

Leave A Reply

Your email address will not be published.

error: Content is protected !!