ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ವಿಧಿವಶ !

0 8

ಶಿವಮೊಗ್ಗ: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾಜಿ ಸಂಸದ ಆರ್. ಧ್ರುವನಾರಾಯಣ್ ವಿಧಿವಶರಾಗಿದ್ದಾರೆ. ಮೈಸೂರಿನಲ್ಲಿ ಹೃದಯಾಘಾತದಿಂದ ಧ್ರುವನಾರಾಯಣ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.


ಚಾಮರಾಜನಗರ ಕ್ಷೇತ್ರದ ಮಾಜಿ ಸಂಸದರಾಗಿದ್ದ ಅವರು ಹಿಂದೆ ಸಂತೆಮರಹಳ್ಳಿ ಕ್ಷೇತ್ರದಿಂದ ಶಾಸಕರಾಗಿದ್ದರು.

ಕೇವಲ ಒಂದೇ ಒಂದು ಮತದಿಂದ ಜಯಗಳಿಸಿದ್ದರು. ಎರಡು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಅವರು ಆಯ್ಕೆಯಾಗಿದ್ದರು.

1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸೇರಿದ ಆರ್. ಧ್ರುವನಾರಾಯಣ ಪಕ್ಷದ ಮುಖಂಡನಾಗಿ ಬೆಳೆದರು. 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಜಯ ಗಳಿಸಿದ್ದರು. 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧೃವನಾರಾಯಣ ಸೋಲಿಸಿದ್ದರು.

ಹಾಗೆಯೇ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಧೃವನಾರಾಯಣ ಮೂಲತಃ ವೃತ್ತಿಯಿಂದ ಕೃಷಿಕರಾಗಿದ್ದು, ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ನಂಜನಗೂಡು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು.

ಮೌನಾಚರಣೆ :

ಧ್ರುವನಾರಾಯಣ್ ನಿಧನದ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ಕೆಪಿಸಿಸಿಯ ವಕ್ತಾರರು ಮಾಜಿ ಶಾಸಕರು ಆದ ಕೆ.ಬಿ ಪ್ರಸನ್ನ ಕುಮಾರ್ ಹಾಗೂ ಅವರ ಸ್ನೇಹಿತರು ಎರಡು ನಿಮಿಷ ಮೌನ ಆಚರಣೆ ಆಚರಿಸಿದರು.

ಸಂತಾಪ ಸಭೆ :

ಧ್ರುವನಾರಾಯಣ್ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸಂತಾಪ ಸೂಚಕ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸುವಂತೆ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

ಸಂತಾಪ:

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಧ್ರುವನಾರಾಯಣ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಕರ್ನಾಟಕ ರಾಜ್ಯ ಕಂಡ ಅತ್ಯಂತ ಸರಳ ರಾಜಕಾರಣಿಯಾಗಿದ್ದ ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಾಡಿಗೆ ತುಂಬಲಾರದ ನಷ್ಟ ಎಂದು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!