ಶಿವಮೊಗ್ಗ : ತಾಲ್ಲೂಕಿನ ಮಲವಗೊಪ್ಪದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆಕೆಯ ಪತಿ ಸೇರಿದಂತೆ ಮೂವರಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷ ಕಠಿಣ ಶಿಕ್ಷೆ, 22 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದೆ.
ಏನಿದು ಘಟನೆ ?
ಮಲವಗೊಪ್ಪದ ಶೋಭಾ (26) ಅವರಿಗೆ 2016ರ ಡಿಸೆಂಬರ್ 28ರಂದು ಪತಿ ಹಾಲೇಶನಾಯ್ಕ ಹಾಗೂ ಸಹಚರರಾದ ರವಿನಾಯ್ಕ, ದಾದುನಾಯ್ಕ ಮತ್ತು ವೆಂಕ್ಯಾನಾಯ್ಕ ಸೇರಿ ಅಲ್ಲಿನ ಬಸ್ ನಿಲ್ದಾಣದ ಬಳಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ತಲೆ ಮತ್ತು ಕೈ ಕಾಲಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿ ತೀವ್ರ ಸ್ವರೂಪದಲ್ಲಿ ಗಾಯ ಮಾಡಿದ್ದನು. ಈ ಬಗ್ಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಬಿ. ಸಿ. ಗಿರೀಶ್ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶಾಂತರಾಜ್ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಧೀಶರಾದ ಕೆ.ಎಸ್. ಮಾನು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳಾದ ಮಲವಗೊಪ್ಪದ ರವಿನಾಯ್ಕ (28), ದಾದುನಾಯ್ಕ (35), ವೆಂಕ್ಯಾನಾಯ್ಕ (40) ಅವರಿಗೆ ಶಿಕ್ಷೆ ನೀಡಿ ಆದೇಶಿಸಿದ್ದಾರೆ.