ಇರುವಕ್ಕಿ ಕೃಷಿ ವಿವಿ ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

0 530

ಶಿವಮೊಗ್ಗ: ಕಾಮಗಾರಿಯ ಭದ್ರತಾ ಹಣ (ಎಫ್‌ಡಿ) ವಾಪಸ್ ಕೊಡಲು ಗುತ್ತಿಗೆದಾರನಿಂದ 30 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಾಗರ ತಾಲ್ಲೂಕಿನ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತಕುಮಾರ್‌ ಹಾಗೂ ಲೆಕ್ಕ ಶಾಖೆಯ ಸಹಾಯಕ ಜಿ.ಆರ್.ಗಿರೀಶ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗದ ಗುತ್ತಿಗೆದಾರ ಸತೀಶ ಚಂದ್ರ, ವಿಶ್ವವಿದ್ಯಾಲಯ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಬಬ್ಬೂರು ಫಾರ್ಮ್‌ನಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಕಚೇರಿಯ ಛಾವಣಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಅದು ಈಚೆಗೆ ಮುಕ್ತಾಯಗೊಂಡು ಬಿಲ್ ಕೂಡ ಪಾವತಿಯಾಗಿತ್ತು.

ಕಾಮಗಾರಿಗೆ ಸಂಬಂಧಿಸಿದಂತೆ ವ್ಯತ್ಯಾಸ ಮೊತ್ತದ ಎಫ್.ಡಿ ಹಣ 63,946 ರೂ. ಮರಳಿಸುವಂತೆ ಗುತ್ತಿಗೆದಾರ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಅದು ಬಿಡುಗಡೆ ಆಗಿರಲಿಲ್ಲ. ಆ ಬಗ್ಗೆ ಎಇಇ ಲೋಹಿತ್‌ ಪ್ರಶಾಂತಕುಮಾರ್ ಬಳಿ ಕೇಳಿದ್ದರು. ಆ ಹಣ ಪಡೆಯಲು ಲೆಕ್ಕ ಸಹಾಯಕ ಗಿರೀಶ್ ಅವರಿಗೆ 40 ಸಾವಿರ ರೂ. ಲಂಚ ತಲುಪಿಸುವಂತೆ ಅವರು ಹೇಳಿದ್ದರು. ಲಂಚ ಕೊಟ್ಟರೆ ಮಾತ್ರ ಎಫ್‌.ಡಿ ಮೊತ್ತ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾಗಿ ಸತೀಶ ಚಂದ್ರ ಶಿವಮೊಗ್ಗದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಪೂರ್ವ ನಿಗದಿಯಂತೆ ವಿಶ್ವವಿದ್ಯಾಲಯದಲ್ಲಿ ಸತೀಶ ಚಂದ್ರ ಅವರಿಂದ ಆರೋಪಿಗಳು 30 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ‍ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್ ಹಾಗೂ ವೀರಬಸಪ್ಪ ಎಲ್.ಕುಸುಲಾಪುರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

Leave A Reply

Your email address will not be published.

error: Content is protected !!