ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ಮತಯಾಚನೆ ಸಭೆ | ಉಚಿತ ಅಕ್ಕಿ ಹಂಚುವ ಬಗ್ಗೆ ಬಿಜೆಪಿಗೆ ಬೇಸರ ಆಯನೂರು ಮಂಜುನಾಥ್

0 189

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಮತಯಾಚನೆ ಸಭೆ | ಉಚಿತ ಅಕ್ಕಿ ಹಂಚುವ ಬಗ್ಗೆ ಬಿಜೆಪಿಗೆ ಬೇಸರ ಆಯನೂರು ಮಂಜುನಾಥ್

ಶಿಕಾರಿಪುರ: ರಾಜ್ಯ ಕಾಂಗ್ರೆಸ್‌ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ಹಂಚುತ್ತದೆ ಎಂದು ಬಿಜೆಪಿಗರಿಗೆ ಬೇಸರವಿದೆ. ಅದೇ ಉದ್ದೇಶದಿಂದ ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ಕೇಂದ್ರ ಸರ್ಕಾರ ಒದಗಿಸಲಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ದೂರಿದರು.

ತಾಲ್ಲೂಕಿನ ಬಗನಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಬ್ಬನ ಬೈರನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿ, ದೇಶದ ಪ್ರತಿ ವ್ಯಕ್ತಿಗೂ ಅಗತ್ಯ ಪ್ರಮಾಣದ ಆಹಾರ ದೊರೆಯಬೇಕು ಎಂದು 2013ರಲ್ಲಿ ಯುಪಿಎ ಸರ್ಕಾರವು ‘ಆಹಾರ ಭದ್ರತಾ ಕಾಯ್ದೆ’ಯನ್ನು ಜಾರಿಗೆ ತಂದಿತ್ತು. ದೇಶದ ಜನರಿಗೆ ಅಗತ್ಯವಿರುವಷ್ಟು ಆಹಾರ ಧಾನ್ಯಗಳನ್ನು ಖರೀದಿಸಿ, ಎಲ್ಲಾ ಕಾಲಕ್ಕೂ ಲಭ್ಯವಿರುವಂತೆ ನೋಡಿಕೊಳ್ಳುವ ಹೊಣೆ ಕೇಂದ್ರ ಸರ್ಕಾರದ್ದು ಮತ್ತು ಅರ್ಹರನ್ನು ಗುರುತಿಸಿ, ಅವರಿಗೆ ಪಡಿತರವನ್ನು ವಿತರಿಸುವ ಹೊಣೆ ರಾಜ್ಯ ಸರ್ಕಾರದ್ದು ಎಂದು ಈ ಕಾಯ್ದೆ ಹೇಳುತ್ತದೆ. ಇದಕ್ಕೆ ಬಿಜೆಪಿ ನಾಯಕರು ವಿರೋಧವೊಡ್ಡಿದರು ಎಂದರು.

ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಹರಸಬೇಕು ಎಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ,ರಾಜ್ಯದ ಪಂಚ ಗ್ಯಾರಂಟಿಯೊಂದಿಗೆ 25 ಭರವಸೆಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದರು.

ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಲು ಕಾನೂನು ತಿದ್ದುಪಡಿ ತರಲಾಗುತ್ತದೆ. ಎಲ್ಲಾ ಜಾತಿ ಮತ್ತು ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸಲಾಗುವುದು ಎಂದರು.

ಡಿಪ್ಲೋಮಾ ಅಥವಾ ಪದವಿ ಹೊಂದಿರುವ 25 ವರ್ಷದೊಳಗಿನವರಿಗೆ ಒಂದು ವರ್ಷದ ಅಪ್ರೆಂಟಿಶಿಪ್ ಒದಗಿಸಲು ಕಾಯ್ದೆ ಜಾರಿಗೊಳಿಸಲಾಗುವುದು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಜಾರಿಗೊಳಿಸಲಾಗುವುದು ಎಂದರು.

ನಟ ಶಿವರಾಜ್‌ಕುಮಾರ್ ಮಾತನಾಡಿ, ನಾವು ಮಾಡುವ ಕಾಯಕದಲ್ಲಿ ಸ್ಪಷ್ಟತೆ ಇರಬೇಕು. ಇದರಿಂದ, ಉತ್ತಮ ಫಲಿತಾಂಶ ಪಡೆಯಬಹುದು. ಇಲ್ಲಿ ಸಂಸದ ಸ್ಥಾನಕ್ಕೆ ಗೀತಾ ಅವರು ಸ್ಪರ್ಧಿಸಿದ್ದಾರೆ. ಗೀತಾ ಅವರು ಗೆದ್ದ ಬಳಿಕ ಆ ಸ್ಥಾನಕ್ಕೆ ಖಂಡಿತ ನ್ಯಾಯ ಒದಗಿಸಿಕೊಡುವರು ಎನ್ನುವ ನಂಬಿಕೆ ನನಗಿದೆ. ಆದ್ದರಿಂದ, ಈ ಚುನಾವಣೆಯಲ್ಲಿ ಮತ ನೀಡಿ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ತಾಲ್ಲೂಕಿನ ಬೇಗೂರು, ಹೊಸೂರು, ಗೊಗ್ಗ, ಜಕ್ಕಿನ ಕೊಪ್ಪದ ಬಳ್ಳೂರು ವೃತ್ತ, ಕಾಗಿನೆಲ್ಲಿ- ಮಾರವಳ್ಳಿ, ಮುತ್ತಿನ ಕೋಟೆ, ನೆಲವಾಗಿಲು-ಗೋದನಕೊಪ್ಪದ ಹೊಸ ಮುಗಳಗೆರೆ, ಅಂಬಾರ ಗಪ್ಪದ ತಮ್ಮಡಿ ಹಳ್ಳಿ, ಹಾರೋಗೊಪ್ಪ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಲಾಯಿತು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಬಗನಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಭರ್ಮಜ್ಜ, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಭಂಡಾರಿ ಮಾಲತೇಶ್, ರಾಘವೇಂದ್ರ ನಾಯ್ಕ್, ಶಿವುನಾಯ್ಕ್, ಕುಮಾರ್ ನಾಯ್ಕ್, ನಗರದ ಮಹದೇವಪ್ಪ, ಹುಸೇನ್ ಖಾನ್ ಸಾಬ್, ರಮೇಶಪ್ಪ ಮಾನಕ್ಕಿ, ಬಗನಕಟ್ಟೆ ಸುರೇಶ್ ಇದ್ದರು.

Leave A Reply

Your email address will not be published.

error: Content is protected !!