ಕ್ರೀಡಾ ಸ್ಪೂರ್ತಿ ಪ್ರತಿಯೊಬ್ಬರಲ್ಲೂ ಇರಬೇಕು ; ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ‌.

0 320

ಶಿವಮೊಗ್ಗ : ಕ್ರೀಡಾ ಸ್ಪೂರ್ತಿ ಪ್ರತಿಯೊಬ್ಬರಲ್ಲೂ ಇರಬೇಕು. ಸೌಹಾರ್ದತೆಗಾಗಿ ಮತ್ತು ಶಾಂತಿಗಾಗಿ ಪ್ರತಿಯೊಬ್ಬರಲ್ಲೂ ಪರಸ್ಪರ ಪ್ರೀತಿಗಾಗಿ ಈ ಕ್ರೀಡಾ ಕೂಟವನ್ನು ಏರ್ಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದು, ಸಂತೋಷ ತಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಜಿ.ಕೆ. ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಲೀಗ್ ಮಾದರಿ ಕ್ರಿಕೇಟ್ ಪಂದ್ಯಾವಳಿ “ರಿಪಬ್ಲಿಕ್ ಡೇ ಕಪ್- 2024′ ಉದ್ಘಾಟಿಸಿ ಮಾತನಾಡಿ, ರಾಗಿಗುಡ್ಡದ ನಿವಾಸಿಗಳಿಗಾಗಿ ರಾಗಿಗುಡ್ಡದ ಕ್ರಿಕೆಟ್ ಮೈದಾನದಲ್ಲಿ ಈ ಕ್ರೀಡಾಕೂಟ ಆಯೋಜಿಸಿದ್ದು, ಪೊಲೀಸ್ ಇಲಾಖೆ ಸಾರಥ್ಯ ವಹಿಸಿದೆ. ಪ್ರತಿಯೊಂದು ತಂಡದಲ್ಲಿ ಇಲಾಖಾ ವತಿಯಿಂದಲೇ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, 4 ಜನ ಹಿಂದೂ ಯುವಕರು, 4 ಮುಸ್ಲಿಂ, ಓರ್ವ ಕ್ರಿಶ್ಚಿಯನ್, 2 ಪೊಲೀಸ್, ಓರ್ವ ಪತ್ರಕರ್ತ ಒಳಗೊಂಡ 11 ಜನರ ತಂಡ ರಚಿಸಿದ್ದು, ಈಗಾಗಲೇ 9 ತಂಡಗಳು ಭಾಗವಹಿಸಿದ್ದು, ಪ್ರತಿ ತಂಡಕ್ಕೆ 5 ಓವರ್ ನಿಗದಿಪಡಿಸಲಾಗಿದೆ. ಗೆದ್ದ ತಂಡಕ್ಕೆ 10 ಸಾವಿರ ರೂ.ಗಳ ನಗದು ಮತ್ತು ಟ್ರೋಫಿಯನ್ನು ನೀಡುವುದಾಗಿ ಅವರು ತಿಳಿಸಿದರು.

ಈಗಾಗಲೇ 150 ಕ್ರೀಡಾಸಕ್ತರು ನೊಂದಾಣಿ ಮಾಡಿಕೊಂಡಿದ್ದಾರ. ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಇಂದು ಮತ್ತು ನಾಳೆ 2 ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದ್ದು, ನಾಳೆ ಸಂಜೆ 3ರಿಂದ 6 ಗಂಟೆಯವರಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿಗಳು ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಕಹಿ ಘಟನೆ ನಡೆದಿತ್ತು. ಸಾಮರಸ್ಯದ ಬದುಕಿಗಾಗಿ ಎಲ್ಲಾ ಧರ್ಮಿಯರು ಒಟ್ಟಾಗಿ ಇರುವ ಶಾಂತಿನಗರ ಮತ್ತು ರಾಗಿಗುಡ್ಡದ ಜನ ಸಾಮಾನ್ಯರಲ್ಲಿ ಸಹೋದರತೆಯ ಮನೋಭಾವನೆ ಬೆಳೆಯುವಂತಾಗಲಿ ಮತ್ತು ಎಲ್ಲರು ಸೌಹಾರ್ದಯುತವಾಗಿ ಬಾಳಬೇಕು ಎನ್ನುವ ಸದುದ್ದೇಶದಿಂದ ನೂತನ ಪ್ರಯೋಗವಾಗಿ ಪೊಲೀಸ್ ಇಲಾಖೆ ವಿಭಿನ್ನ ರೀತಿಯ ಈ ಕ್ರೀಡಾಕೂಟವನ್ನು ಆಯೋಜಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್‌ಕುಮಾರ್ ಭೂಮ್‌ರೆಡ್ಡಿ, ಕಾರ್ಯಪ್ಪ ಎ.ಜಿ., ಉಪಾಧೀಕ್ಷಕರಾದ ಸುರೇಶ್, ಪೊಲೀಸ್ ಅಧಿಕಾರಿಗಳಾದ ರವಿಪಾಟೀಲ್, ಕುಮಾರ್, ಸಿ.ಆರ್. ಕೊಪ್ಪನ್, ಟಿ.ಹರ್ಷ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!