ದೇವರು ಧರ್ಮ ಗುರು ಮರೆಯದಿರು ; ರಂಭಾಪುರಿ ಶ್ರೀಗಳು

0 145

ಸೊರಬ : ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಸುಖದಾಯಕ ಶಾಂತಿ ನೆಮ್ಮದಿಯ ಬದುಕಿಗೆ ದೇವರು ಧರ್ಮ ಗುರುವನ್ನು ಮರೆಯದೇ ಬಾಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ತಾಲೂಕಿನ ಚಿಕ್ಕಕಬ್ಬೂರ ಗ್ರಾಮದಲ್ಲಿ ಶ್ರೀ ವೀರಾಂಜನೇಯ ನೂತನ ದೇವಾಲಯ ಉದ್ಘಾಟನೆ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಾವು ನಿಂತ ನೆಲ ಕುಡಿಯುವ ನೀರು ತಿನ್ನುವ ಅನ್ನ ಉಸಿರಾಡುವ ಗಾಳಿ ಪರಮಾತ್ಮ ಕೊಟ್ಟ ಕೊಡುಗೆ. ಏನೆಲ್ಲವನ್ನು ಕೊಟ್ಟ ಭಗವಂತನನ್ನು ದಿನದ 24 ಗಂಟೆಯಲ್ಲಿ ಎರಡು ನಿಮಿಷ ಸ್ಮರಿಸಿ ಪೂಜಿಸಿದರೆ ಜೀವನ ಸಾರ್ಥಕಗೊಳ್ಳುತ್ತದೆ. ದೇವನೊಬ್ಬ ನಾಮ ಹಲವು. ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮ ಒಬ್ಬನೇ ಎಂಬ ಅರಿವು ಮೂಡಿದಾಗ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ. ನುಡಿದಂತೆ ನಡೆಯುವುದೇ ನಿಜವಾದ ಧರ್ಮ. ಆಡುವ ಮಾತು ನಡೆಯುವ ದಾರಿ ಇನ್ನೊಂದಾದರೆ ಮನುಷ್ಯನಿಗೆ ಬೆಲೆ ಸಿಗುವುದಿಲ್ಲ. ದೇವರ ಧರ್ಮದ ಅರಿವು ಮೂಡಿಸಿ ಬಾಳ ಬೆಳಗಲು ಗುರು ಮಾರ್ಗದರ್ಶನ ಅವಶ್ಯಕವಾಗಿದೆ. ವೀರಭದ್ರನಿಂದ ವೀರಾಂಜನೇಯ ಲಿಂಗದೀಕ್ಷೆ ಪಡೆದ ಇತಿಹಾಸವಿದೆ. ಶ್ರೀ ರಂಭಾಪುರಿ ಪೀಠಕ್ಕೂ ವೀರಾಂಜನೇಯನಿಗೂ ನಿಕಟವಾದ ಸಂಬಂಧವಿದೆ. ಭವ್ಯ ಸುಂದರವಾಗಿ ಕಟ್ಟಿದ ವೀರಾಂಜನೇಯ ದೇವಸ್ಥಾನ ಕಂಡು ಹರುಷವಾಗಿದೆ ಎಂದರು.

ತೊಗರ್ಸಿ ಮಳೆಮಠದ ಮಹಾಂತ ಶ್ರೀಗಳು, ಪಂಚವಣ್ಣಿಗೆ ಮಠದ ಚನ್ನವೀರ ಶ್ರೀಗಳು, ಮಳಲಿಮಠದ ಡಾ.ನಾಗಭೂಷಣ ಶ್ರೀಗಳು, ಶಾಂತಪುರ ಶಿವಾನಂದ ಶ್ರೀಗಳು, ಕಣಸೋಗಿ ಶಿವಾನಂದ ಶ್ರೀಗಳು, ಗುಡುಗಿನಕೊಪ್ಪ ಲಿಂಗನಗೌಡ್ರು ಉಪಸ್ಥಿತರಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಅಶೋಕ ಮೊದಲ್ಗೊಂಡು ಎಲ್ಲಾ ಧರ್ಮದರ್ಶಿಗಳು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಮೆರವಣಿಗೆ ದೇವಸ್ಥಾನದವರೆಗೆ ಜರುಗಿತು. ಸಮಾರಂಭದ ನಂತರ ಅನ್ನದಾಸೋಹ ನಡೆಯಿತು.

Leave A Reply

Your email address will not be published.

error: Content is protected !!