ನಟ, ರಂಗಕರ್ಮಿ, ಸಮಾಜ ಸೇವಕ ಯೇಸುಪ್ರಕಾಶ್ ಇನ್ನಿಲ್ಲ !

0 2,749

ಹೊಸನಗರ : ಸಿನಿಮಾ ರಂಗದಲ್ಲಿ ತಮ್ಮದೇ ಚಾಪು ಮೂಡಿಸಿ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ, ರಂಗಕರ್ಮಿ, ಸಮಾಜ ಸೇವಕರಾಗಿ ತಮ್ಮ ಸೇವೆ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದ, ಸಾರ ಸಂಸ್ಥೆಯ ಸಹಯೋಗದಲ್ಲಿ 20ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ಕಲ್ಲುಕೊಪ್ಪ ನಿವಾಸಿ ಯೇಸುಪ್ರಕಾಶ್ (ಪ್ರಕಾಶ್ ಹೆಗ್ಗೋಡು) (58) ಇಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಆರೇಳು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಭಾನುವಾರ ಬೆಳಗ್ಗೆ 9 ಗಂಟೆಯಿಂದ ಕಲ್ಲುಕೊಪ್ಪ (ಪುರಪ್ಪೆಮನೆ) ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.

ಶಿಕ್ಷಣ :
ಯೇಸುಪ್ರಕಾಶ್ ಪ್ರಾಥಮಿಕ ಶಿಕ್ಷಣವನ್ನು ಹೊಸನಗರ ತಾಲೂಕಿನ ಪುರಪ್ಪೆಮನೆ ಪಡೆದರೆ. ಪ್ರೌಢಶಿಕ್ಷಣ ಸಾಗರದ ಸರ್ಕಾರಿ ಜೂನಿಯ‌ರ್ ಕಾಲೇಜು, ಬಿ.ಕಾಂ. ಪದವಿ ಲಾಲ್‌ಬಹದ್ದೂರ್ ಕಾಲೇಜು ಸಾಗರದಲ್ಲಿ ಪಡೆದಿದ್ದರು.

ಬಾಲ್ಯ :
ಬಾಲ್ಯದಲ್ಲಿಯೇ ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಮೊಟ್ಟಮೊದಲ ಬಾರಿಗೆ ಊರಿನ ದೇವಾಲಯದ 25ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ “ದಾರಿತಪ್ಪಿದ ಮಗ” ಎಂಬ ಸಾಮಾಜಿಕ ನಾಟಕವನ್ನು ರಚಿಸಿ ನಟನೆಯೊಂದಿಗೆ ನಿರ್ದೇಶನವನ್ನೂ ಮಾಡಿದವರು.

1985ರಲ್ಲಿ ಪ್ರಸಿದ್ದ ನಿರ್ದೇಶಕ ಪ್ರಸನ್ನ ಅವರ ರಂಗಭೂಮಿ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ನೀನಾಸಂನೊಂದಿಗೆ ಗುರುತಿಸಿಕೊಂಡವರು. ಅಲ್ಲಿಂದ ಇದುವರೆಗೂ ಕೆ.ವಿ. ಸುಬ್ಬಣ್ಣ, ಚಂದ್ರಶೇಖರ ಕಂಬಾರ, ಅತುಲ್‌ತಿವಾರಿ, ಚಿದಂಬರರಾವ್ ಜಂಬೆ, ಕೆ.ವಿ. ಅಕ್ಷರ, ವೆಂಕಟರಮಣ ಐತಾಳ. ಪ್ರಕಾಶ್ ಬೆಳವಾಡಿ, ರಘುನಂದನ, ಕೆ.ಜಿ. ಕೃಷ್ಣಮೂರ್ತಿ ಮುಂತಾದವರು ನಿರ್ದೇಸಿಸಿದ ನೀನಾಸಂನ ಹೆಚ್ಚು ಕಡಿಮೆ ಎಲ್ಲ ನಾಟಕಗಳಲ್ಲಿಯೂ ನಟರಾಗಿದ್ದವರು.

ನಟಿಸಿದ ಪ್ರಮುಖ ನಾಟಕಗಳು:
ರಥಮುಸಲ, ಷಹಜಹಾನ್, ಹ್ಯಾಬ್ಲೆಟ್, ನೂರ್‌ಜಹಾನ್, ಕೆಂಪುಕಣಗಿಲೆ, ತಲಕಾಡುಗೊಂಡ, ಮಂತ್ರಶಕ್ತಿ, ಸಿರಿಸಂಪಿಗೆ, ಜೋಕುಮಾರ ಸ್ವಾಮಿ, ಬೆಪ್ಪುತಕ್ಕಡಿ ಭೋಳೇಶಂಕರ, ಶಿಶಿರವಸಂತ, ಸದ್ದು ವಿಚಾರಣೆ ನಡೆಯುತ್ತಿದೆ ಮುಂತಾದವು. ಪ್ರಸ್ತುತ ನೀನಾಸಮ್ ಸಂಸ್ಥೆಯ ಸಕ್ರಿಯ ಸದಸ್ಯರೂ ಆಗಿದ್ದಾರೆ.

ಎನ್. ಹುಚ್ಚಪ್ಪ ಮಾಸ್ತರ ನೇತೃತ್ವದ ರಂಗಸಂಕುಲ ಕುಲ್ವೆ ತಂಡದ ಸಂಗ್ಯಾಬಾಳ್ಯ ನಾಟಕದಲ್ಲಿ ವೀರಪ್ಪನ ಪಾತ್ರ ವಹಿಸಿ, ಸೌತ್ ಜೋನ್ ಮತ್ತು ದೆಹಲಿಯಲ್ಲಿ ಪ್ರದರ್ಶನ ನೀಡಿದ್ದು ಹೆಮ್ಮೆ. ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡ ಯೇಸುಪ್ರಕಾಶ್ ಅವರು ಕೆ.ವಿ. ಸುಬ್ಬಣ್ಣ ರಂಗಸಮೂಹ (ರಿ.) ಹೆಗ್ಗೋಡು ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರು. ಕೆ.ವಿ. ಸುಬ್ಬಣ್ಣ ರಂಗಸಮೂಹದ ನಾಟಕಗಳಾದ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ಸಂಗ್ಯಾಬಾಳ್ಯಾ, ಮಂಜುನಾಥ ಎಲ್. ಬಡಿಗೇರ್ ನಿರ್ದೇಶನದ ಸಂದೇಹ ಸಾಮ್ಯಾಜ್ಯ ಹಾಗೂ ವೃತ್ತಿ ರಂಗಭೂಮಿಯ ಪರಶುರಾಮ ವಿ. ಗುಡ್ಡಳ್ಳಿ ನಿರ್ದೇಶನದ ದೇವದಾಸಿ ನಾಟಕಗಳಲ್ಲಿ ಅಭಿನಯಿಸಿದವರು. ಸಂದೇಹ ಸಾಮ್ರಾಜ್ಯ ನಾಟಕವು ರಂಗಭೂಮಿ (ರಿ) ಉಡುಪಿ ನಡೆಸುವ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಪ್ರಥಮ ಬಹುಮಾನದೊಂದಿಗೆ ಉತ್ತಮ ನಟ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಯುವಜನ ಮೇಳ, ಸಾಕ್ಷರತಾ ಜಾತ ಹಾಗೂ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ. 1987-88ರಲ್ಲಿ ಇವರು ರಚಿಸಿ ನಿರ್ದೇಶಿಸಿದ ಕುರಿಗಳು ನಾಟಕಕ್ಕೆ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಪ್ರಥಮಬಹುಮಾನ ದೊರೆತಿದೆ. ನಂತರದ ದಿನಗಳಲ್ಲಿ ಯುವಜನಮೇಳದಲ್ಲಿ ಎರಡು ಬಾರಿ ರಾಜ್ಯಮಟ್ಟದ ಉತ್ತಮ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸ್ಥಳೀಯ ಹತ್ತು ಹಲವು ಸಂಸ್ಥೆಗಳಿಗೆ ನಾಟಕ ನಿರ್ದೇಶನ ಮಾಡಿ ಬಹುಮಾನಗಳಿಗೆ ಪಾತ್ರರಾಗಿದ್ದಾರೆ.

ಯಕ್ಷಗಾನ:
ಬಾಲ್ಯದಲ್ಲಿ ಪೇತ್ರಿ ಮಾಧವ ನಾಯ್ಕ ಇವರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಅಭ್ಯಾಸ ಮಾಡಿ ನಂತರ ಹೆರಂಜಾಲ ಗೋಪಾಲ ಗಾಣಿಗ ಇವರ ನಿರ್ದೇಶನದಲ್ಲಿ “ವೀರಮಣಿ ಕಾಳಗ ಮತ್ತು ವಿದ್ಯುನ್ಮತಿ ಕಲ್ಯಾಣ” ಯಕ್ಷಗಾನದಲ್ಲಿ ಬಣ್ಣ ಹಚ್ಚಿದರು. ತರುವಾಯ ತೆಂಕುತಿಟ್ಟಿನ ಹೆಸರಾಂತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಮತ್ತು ಯಕ್ಷಗುರು ಸಬ್ಬಣಕೋಡಿ ರಾಂ ಭಟ್ ಇವರ ನಿರ್ದೇಶನದಲ್ಲಿ ಯಜ್ಞ ಸಂರಕ್ಷಣೆ, ಷಣ್ಮುಖ ವಿಜಯ ಹಾಗೂ ರತಿ ಕಲ್ಯಾಣ ಎಂಬ ತೆಂಕುತಿಟ್ಟಿನ ಯಕ್ಷಗಾನದಲ್ಲಿ ಅಭಿನಯಿಸಿದ್ದಾರೆ.

ಪ್ರಸ್ತುತ, “ನಾಡಚಾವಡಿ (ರಿ.)” ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಮಕ್ಕಳಿಗೆ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಯಕ್ಷಗಾನ ತರಬೇತಿ ಹಾಗೂ ಪ್ರದರ್ಶನಗಳನ್ನು ನೀಡುತ್ತಾಬಂದಿದ್ದಾರೆ. ಇವರ ಈ ತಂಡ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ಮುಂಬೈ ಮಹಾನಗರದಲ್ಲಿಯೂ ಪ್ರದರ್ಶನ ನೀಡಿ ಸೈ ಎನ್ನಿಸಿಕೊಂಡಿದೆ.

ಇತರೆ ಸಾಂಸ್ಕೃತಿಕ ಚಟುವಟಿಕೆ:
“ಹಾಲ್ದೀಪ ಚಂಡೆ ಬಳಗೆ” ಸಂಸ್ಥೆಯನ್ನು ಕಟ್ಟಿ ಸುತ್ತಮುತ್ತಲಿನ ಮಕ್ಕಳು ಮತ್ತು ಯುವಜನತೆಗೆ ಕೇರಳದ ಚಂಡೆ ವಾದನ ತರಬೇತಿಯನ್ನೂ ನೀಡಿ, ನಾಡಿನಾದ್ಯಂತ ಪ್ರದರ್ಶನಗಳನ್ನು ನೀಡುತ್ತಾ ಬರುತ್ತಿದೆ.

ಹೊಸನಗರ ತಾಲ್ಲೂಕು ಮಟ್ಟದ ಯುವಜನ ಮೇಳವನ್ನು ಆಲಗೇರಿ ಮಂಡ್ರಿಯಲ್ಲಿ ಸಂಘಟಿಸಲಾಗಿದೆ. ಶಿರಸಿಯಲ್ಲಿ ಮಕ್ಕಳ ಬೇಸಿಗೆ 15 ದಿನಗಳ ಶಿಬಿರ ನಡೆಸಲಾಗಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಪರಿಸರ, ನಾಟಕ, ಪ್ರಸಾದನ, ಕರಕುಶಲ ಕಲೆ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ತರಬೇತಿ ನೀಡಿ ಅವುಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲಾಯಿತು.

ಕವಿಗೋಷ್ಠಿ:
1997 ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮದಲ್ಲಿ ಸೂರಂ ಎಕ್ಕುಂಡಿ, ಹೆಚ್.ಎಸ್. ವೆಂಕಟೇಶಮೂರ್ತಿ, ಸುಮತೀಂದ್ರ ನಾಡಿಗ, ಮಾಲತಿ ಪಟ್ಟಣಶೆಟ್ಟಿ. ಬಿ.ಆರ್. ಲಕ್ಷ್ಮಣರಾವ್ ಇವರಿಂದ ಕವಿಗೋಷ್ಠಿಯ ಆಯೋಜನೆ.

ನೀನಾಸಂ ಊರುಮನೆ ಉತ್ಸವ:
ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ವೇದಿಕೆಯನ್ನು ನೀಡುವ ಸಲುವಾಗಿ ಊರುಮನೆ ಉತ್ಸವವನ್ನು ಆಯೋಜಿಸಲಾಗಿತ್ತು. ಉತ್ಸವದ ಸಂಚಾಲಕನಾಗಿ ಸ್ಥಳೀಯ ಪ್ರತಿಭಾವಂತರನ್ನು ಗುರುತಿಸಿ ನಾಟಕ, ಯಕ್ಷಗಾನ, ಜಾನಪದ ವೈಭವ ಹಾಗೂ ಸುಗಮ ಸಂಗೀತಗಳಲ್ಲಿ ಅಗತ್ಯ ತರಬೇತಿ ನೀಡಿ ಅವರಿಂದ ನೀನಾಸಮ್ ವೇದಿಕೆಯಲ್ಲಿ ಪ್ರದರ್ಶನ ನೀಡುವಂತೆ ಮಾಡಲಾಯಿತು.

ಚಂದ್ರಶೇಖರ ಕಂಬಾರರು ನಿರ್ದೇಶಿಸಿದ ಸಂಪಿಗೆ ರಾಣಿ ಕಿರು ಚಿತ್ರದಲ್ಲಿ ನಾಯಕ ನಟನಾಗಿ ಪ್ರಥಮ ಬಾರಿಗೆ ಕ್ಯಾಮೆರಾವನ್ನು ಎದುರಿಸಿದರು.

ಈ-ಟಿವಿ ಪ್ರಸಾರ ಮಾಡಿದ ಶ್ರೀ ಅಶೋಕ್ ಕಶ್ಯಪ್ ನಿರ್ದೇಶನದ ಸೀತೆ ಧಾರಾವಾಹಿಯಲ್ಲಿ ಖಳನಟನಾಗಿ ಮಿಂಚಿದವರು.

ಚಲನಚಿತ್ರ:
ಎಸ್. ನಾರಾಯಣ್ ನಿರ್ದೇಶಿಸಿದ ವೀರು ಚಿತ್ರದಲ್ಲಿ ಖಳನಾಯಕನಾಗಿ ಚಲನಚಿತ್ರ ರಂಗವನ್ನು ಪ್ರವೇಶಿಸಿದ ಇವರು, ಸಂತ, ಮಾದೇಶ, ಗುಣವಂತ, ಭಾಗ್ಯದ ಬಳೆಗಾರ, ಸುಗ್ರೀವ, ಯಾರೇ ಕೂಗಾಡಲಿ, ಅಗ್ರಜ, ಯೋಧ, ಸಾರಥಿ, ಬೃಂದಾವನ, ಕಲ್ಪನಾ-2, ಎ.ಕೆ. 56, ರಾಜಾಹುಲಿ, ಮುದ್ದು ಮನಸೇ. ದೀನ, ಸಂತೆಯಲ್ಲಿ ನಿಂತ ಕಬೀರ, ಮುಂತಾದ 35ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಇವರು ಕನ್ನಡದ ಮೇರು ನಟರಾದ ದರ್ಶನ್, ಶಿವರಾಜ್‌ಕುಮಾರ್, ಉಪೇಂದ್ರ, ಪುನೀತ್ ರಾಜ್‍ಕುಮಾರ್, ಯಶ್, ಪ್ರೇಮ್ ಮುಂತಾದ ನಟರೊಡನೆ ಅಭಿನಯಿಸಿದ್ದಾರೆ.

ಅಶೋಕ್ ಕಶ್ಯಪ್ ನಿರ್ದೇಶನದ ಅಂಬುಟಿ ಇಂಬುಟಿ ಎಂಬ ತಮಿಳು ಚಿತ್ರದಲ್ಲಿಯೂ ಖಳನಾಯಕನಾಗಿ ಅಭಿನಯಿಸಿದ್ದಾರೆ.

ಸಾಮಾಜಿಕ:
ಹೊಸನಗರ ತಾಲ್ಲೂಕು ಹರಿದ್ರಾವತಿ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಅದೇ ಗ್ರಾಮದ ಕಾಡ್ರಿಗೆ ಈಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮಾಡಿದರು.

1990ರ ದಶಕದಲ್ಲಿ ನಡೆದ ಅಕ್ಷರ ತುಂಗ ಸಾಕ್ಷರತಾ ಆಂದೋಲನದ ಸಂಚಾಲಕರಾಗಿ ಯಶಸ್ವಿಯಾಗಿ ನಿರ್ವಹಿಸಿದವರು. ಆಗಿನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ಭರತ್‌ ಲಾಲ್ ಮೀನಾ ಅವರು ಸಂಘಟಿಸಿದ ಅಪ್ರಾದೇಶ್ ಸ್ವಸಹಾಯ ಸಾಮಾಜಿಕ ಸಂಘಟನೆಯಲ್ಲಿ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಮದ್ಯ ವ್ಯಸನಿ ವಿರೋಧಿ ಆಂದೋಲನವನ್ನು ಹೆಗ್ಗೋಡು, ಭೀಮನಕೋಣೆ, ಪುರಪ್ಪೆಮನೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಘಟಿಸಿ, ಜಾತ ಮತ್ತು ಸಮಾವೇಶಗಳನ್ನು ಸಂಘಟಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ಕಾರ್ಯಾಧ್ಯಕ್ಷರಾಗಿ ಎಂಟು ದಿನಗಳ ಶಿಬಿರ ನಡೆಸಿ 78 ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಧೀಜಿಯವರ 125ನೇ ವರ್ಷಾಚರಣೆಯ ಅಂಗವಾಗಿ ದೆಹಲಿಯಲ್ಲಿ ನಡೆದ ಪಂಚಾಯ್ತಿ ಪ್ರತಿನಿಧಿಗಳ ಸಮಾವೇಶದಲ್ಲಿ ಹೊಸನಗರ ತಾಲ್ಲೂಕಿನ ಪ್ರತಿನಿಧಿಯಾಗಿ ಭಾಗವಹಿಸಲಾಯಿತು.
1994ರಲ್ಲಿ ‘ಸಮತಾ ವಾಣಿ’ ಎಂಬ ಕೈ ಬರಹದ ಪತ್ರಿಕೆಯ ಸಂಪಾದಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಲಾಗಿದೆ.

ಬಸ್ ನಿಲ್ದಾಣ ನಿರ್ಮಾಣ:
1992-93ರಲ್ಲಿ ಅಲಗೇರಿಮಂಡ್ರಿಯಲ್ಲಿ ದಾನಿಗಳ ಸಹಕಾರದಿಂದ ಸ್ವಯಂ ಶ್ರಮದಾನದ ಮೂಲಕ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.

ಅಶಕ್ತ ಕುಟುಂಬಗಳಿಗೆ ನೆರವು:
ಕೊರೋನಾ ಸಂಕಷ್ಟ ಸಮಯದಲ್ಲಿ ಹಾಲ್ದೀಪ ಚಂಡೆ ಬಳಗದ ದಾನಿಗಳ ಹೆಸರಿನ ನಿಧಿಯಿಂದ ಗ್ರಾಮದ 85 ಅಶಕ್ತ ಕುಟುಂಬಗಳಿಗೆ ಆಹಾರ ಪಡಿತರ ಕಿಟ್‌ಗಳನ್ನು ವಿತರಿಸಿದ್ದಲ್ಲದೆ ಗ್ರಾಮದಲ್ಲಿನ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ವಿತರಣೆ ಮಾಡಲಾಯಿತು.

ಚಿಕಿತ್ಸಾ ವೆಚ್ಚ:
ಅಪಘಾತಕ್ಕೊಳಗಾದಿ ಯಕ್ಷಗಾನ ಕಲಾವಿದ ಯೋಗೀಶ್ ರವರಿಗೆ ನಾಡಚಾವಡಿ ಸಂಸ್ಥೆಯವತಿಯಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಿ ಚಿಕಿತ್ಸೆಗಾಗಿ 25000 ರೂಪಾಯಿಗಳ ಸಹಾಯಧನ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಲಿಂಗ ಶೋಷಣೆಯ ಕುರಿತು ಅರಿವು ಮೂಡಿಸುವ ದಿಶೆಯಲ್ಲಿ ಸ್ಥಳೀಯ ಶಾಲಾ ಕಾಲೇಜು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕಾನೂನು ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಾಯಿತು.

ಶ್ರಮದಾನ:
ಸ್ವಗ್ರಾಮ ಪುರಪ್ಪೆಮನೆಯಲ್ಲಿ ಹಾಗೂ ಸ್ಥಳೀಯ ಸಾಂಸ್ಕೃತಿಕ ಕೇಂದ್ರ ಸ್ಥಾನ ಹೆಗ್ಗೋಡಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಪರಿಸರಾಸಕ್ತರನ್ನೊಡಗೂಡಿಕೊಂಡು ಶ್ರಮದಾನ ಏರ್ಪಡಿಸಲಾಗಿತ್ತು.

ಶರಾವತಿ ಉಳಿಸಿ ಹೋರಾಟದ ಆಯೋಜನೆ:
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಅವೈಜ್ಞಾನಿಕ ಪ್ರಸ್ತಾವನೆಯ ವಿರುದ್ಧ ಮೂಲೆಗದ್ದೆ ಮಠದ ಪೀಠಾಧ್ಯಕ್ಷರಾದ ಶಅಭಿನವ ಚನ್ನಬಸವ ಸ್ವಾಮಿಗಳ ದಿವ್ಯ ಮುಂದಾಳತ್ವದಲ್ಲಿ ಹೊಸನಗರ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಬೃಹತ್ ಆಂದೋಲನವನ್ನು ಆಯೋಜಿಸಲಾಯಿತು.

ಪರಿಸರ ಕಾರ್ಯಾಗಾರ:
ಸ್ಥಳೀಯ ಹತ್ತು ಶಾಲೆಗಳ 80 ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಪರಿಸರ ಜಾಗೃತಿ ಕಾರ್ಯಾಗಾರವನ್ನು ಸಾರಾ, ನಾಡಚಾವಡಿ ಹಾಗೂ ಕೆ.ವಿ. ಸುಬ್ಬಣ್ಣ ರಂಗಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಯಿತು. ಈ ಶಿಬಿರದಲ್ಲಿ ಮಕ್ಕಳಿಗೆ ಪರಿಸರ, ಭೂಮಿ, ಅರಣ್ಯ, ಪ್ರಾಣಿ, ಪಕ್ಷಿಗಳು, ನೀರು, ತಾಪಮಾನ ಏರಿಕೆ. ಪ್ಲಾಸ್ಟಿಕ್ ನಿಂದಾಗಬಹುದಾದ ದುಷ್ಪರಿಣಾಮ, ಪ್ರವಾಹ, ಭೂಕಂಪ ಮುಂತಾದ ಪರಿಸರ ವೈಪರಿತ್ಯಗಳ ಕುರಿತು ಮಾಹಿತಿಗಳನ್ನು ಕಿರು ಚಿತ್ರ ಪ್ರದರ್ಶನ, ಉಪನ್ಯಾಸ ನೀಡುವುದರ ಮೂಲಕ ನೀಡಲಾಯಿತು. ಕಟ್ಟ ಕಡೆಗೆ ಮಕ್ಕಳಿಂದ ಪರಿಸರಕುರಿತು ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ಪರಿಸರ ಜಾಗೃತಿ:
ಸಾರಾ ಸಂಸ್ಥೆ ದೊಂಬೆಕೊಪ್ಪ ಸಂಘಟಿಸಿದ “ಘಟ್ಟದತ್ತ ದಿಟ್ಟ ಹೆಜ್ಜೆ” ಪರಿಸರ ಜಾಗೃತಿ ಆಂದೋಲನದಲ್ಲಿ ನಾಡಚಾವಡಿ ಸಂಸ್ಥೆಯೊಡನೆ ಕಳೆದ 4-5 ವರ್ಷಗಳಿಂದ ಜಿಲ್ಲಾದ್ಯಂತ ಎಲ್ಲ ಶಾಲೆಗಳನ್ನು ಸಂದರ್ಶಿಸಿ ಸರಿ ಸುಮಾರು 38ಸಾವಿರ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.

2016 ಹಾಗೂ 2017ರಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಜೋಗದಿಂದ ಶಿವಮೊಗ್ಗದವರೆಗೆ ಪರಿಸರ ಜಾಗೃತಿ ಜಾಥಾವನ್ನು ಆಯೋಜಿಸಲಾಯಿತು. ಜೋಗ, ಸಾಗರ, ಹೊಸನಗರ, ರಿಪ್ಪನ್‌ಪೇಟೆ ಆನಂದಪುರ, ಆಯನೂರು ಮಾರ್ಗವಾಗಿ ಪ್ರಥಮ ವರ್ಷದ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ಮರು ವರ್ಷ, ಸಾಗರ, ಕೆಳದಿ, ಸೊರಬ, ಶಿರಾಳಕೊಪ್ಪ, ಶಿಕಾರಿಪುರ, ಈಸೂರು ಮಾರ್ಗದ ಮೂಲಕ ಪರಿಸರ ಜಾಗೃತಿ ಜಾಥಾವನ್ನು ಆಯಾ ಸ್ಥಳಿಯ ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಸ್ಥಳಿಯ ಮುಖಂಡರು, ಪರಿಸರಾಸಕ್ತರು ಇವರ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಪರಿಸರ ಜಾಗೃತಿ ಜಾತವನ್ನು ನಡೆಸಲಾಯಿತು.

ಪರಿಸರ ಜಾಗೃತಿ ರಾಜ್ಯ ಮಟ್ಟದ ವಿಚಾರ ಸಂಕಿರಣ:
2017ರಲ್ಲಿ ಬಟ್ಟೆಮಲ್ಲಪ್ಪ ಸಾರಾ ಸಂಸ್ಥೆ ಹಾಗೂ ಇತರ ಸಮಾನ ಮನಸ್ಕ ಸಂಸ್ಥೆಯ ಸಂಯೋಜನೆಯಲ್ಲಿ ಎರಡು ದಿನಗಳ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಯಿತು.

ಬೀಜದುಂಡೆ ತಯಾರಿ:
ಸ್ವಗ್ರಾಮ ಪುರಪ್ಪೆಮನೆಯಲ್ಲಿ ವೈದ್ಯ ಡಾ. ಪತಂಜಲಿಯವರ ಮಾರ್ಗದರ್ಶನದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಂದ ಬೀಜದ ಉಂಡೆ ತಯಾರಿಸಿ ಹಾಗೂ ಅವುಗಳನ್ನು ಗ್ರಾಮದ ಕಾಡುಗಳಲ್ಲಿ ಬೀಜ ಪ್ರಸಾರ ಮಾಡುವ ಕಾರ್ಯಕ್ರಮ ನಡೆಸಲಾಯಿತು.

ಇಂಗುಗುಂಡಿ ನಿರ್ಮಾಣ :
ಸ್ವಗ್ರಾಮ ಪುರಪ್ಪೆಮನೆಯ ಕಲ್ಲುಕೊಪ್ಪದಲ್ಲಿರುವ 56 ಮನೆಗಳಿಗೂ ಇಂಗುಗುಂಡಿಗಳ ಮಹತ್ವದ ಅರಿವು ಮೂಡಿಸುವ ಜೊತೆಗೆ ಮಳೆನೀರನ್ನು ಇಂಗಿಸಲು ಇಂಗು ಗುಂಡಿಗಳನ್ನು ತೋಡುವ ಕಾರ್ಯ ನೆರವೇರಿಸಲಾಯಿತು.

ಗ್ರಾಮದ ಸ್ಥಳಿಯ ಪರಿಸರಾಸಕ್ತ ಸಮಾನ ಮನಸ್ಕರೊಂದಿಗೆ ಸುಮಾರು ಐದು ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಅಂಚಿನ ಚರಂಡಿಗಳಲ್ಲಿ ಹರಿದುಹೋಗುವ ಮಳೆ ನೀರನ್ನು ಹಿಡಿದಿಂಗಿಸುವ ಸಲುವಾಗಿ ಜೆ.ಸಿ.ಬಿ. ಯಂತ್ರಗಳ ಮೂಲಕ ನೀರಿನ ಹರಿವನ್ನು ಗಮನಿಸಿ ಇಂಗು ಗುಂಡಿಗಳನ್ನು ನಿರ್ಮಿಸಲಾಯಿತು.

ಜಲಸಾಕ್ಷರತೆ:
ಸ್ಥಳಿಯ ವೈದ್ಯ ಡಾ. ಪತಂಜಲಿ ಯವರೊಂದಿಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ಮಳೆನೀರು ಕೊಯ್ದು, ಇಂಗುಗುಂಡಿಗಳ ಕುರಿತು ಜಲಸಾಕ್ಷರತೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕಜನರಿಗೆ ನೀರು ಹಾಗೂ ಮಳೆನೀರಿನ ಮಹತ್ವದ ಅರಿವನ್ನು ಮೂಡಿಸುವ ಕಾರ್ಯ ಮಾಡಲಾಯಿತು.

ಹಸರೀಕರಣ:
ಹೊಸನಗರ ತಾಲ್ಲೂಕಿನ ಮುತ್ತಲ ಗ್ರಾಮದಲ್ಲಿ ಸ್ವಗ್ರಾಮ ಯೋಜನೆ ಮುಖಾಂತರ 2ಎಕರೆ ಪ್ರದೇಶದಲ್ಲಿ ಗಿಡ ನೆಟ್ಟು ಸೋಲಾರ್ ಬೇಲಿ ವ್ಯವಸ್ಥೆ ಮಾಡಿ ಹಸರೀಕರಣಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.

ಇಂಗು ಗುಂಡಿಗಳು:
ಹೊಸನಗರ ತಾಲ್ಲೂಕಿನ ಮುತ್ತಲ ಗ್ರಾಮದಲ್ಲಿ ಸ್ವಗ್ರಾಮ ಯೋಜನೆ ಮುಖಾಂತರ ಗ್ರಾಮ ಪಂಚಾಯ್ತಿ ಸಹಭಾಗಿತ್ವದಲ್ಲಿ 1500 ಇಂಗು ಗುಂಡಿಗಳನ್ನು ನಿರ್ಮಿಸುವ ಕಾರ್ಯ ನೆರವೇರಿಸಲಾಗಿದೆ.

ಬೃಹತ್ ಇಂಗುಗುಂಡಿ:
ಮುತ್ತಲ ಗ್ರಾಮದ ಸ್ವಗ್ರಾಮ ಯೋಜನೆಯಡಿಯಲ್ಲಿ 1.5 ಕಿ.ಮೀ. ದೂರದಿಂದ ಹರಿದು ಹಳ್ಳ ಸೇರುತ್ತಿದ್ದ ಮಳೆ ನೀರನ್ನು ಸಂಗ್ರಹಿಸುವ ಉದ್ದೇಶದಿಂದ 60X80X10 ಅಡಿ ಅಳತೆಯ ಬೃಹತ್ ಇಂಗುಗುಂಡಿಯನ್ನು ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಲಾಯಿತು. ಅಲ್ಲದೆ, ಗ್ರಾಮದ ಇತರ ರಸ್ತೆಗಳ ಇಕ್ಕೆಲಗಳ ಚರಂಡಿಗಳಲ್ಲಿ ಹರಿದುಹೋಗುತ್ತಿದ್ದ ಮಳೆ ನೀರನ್ನು ಜೆ.ಸಿ.ಬಿ ಯಂತ್ರ ಬಳಸಿ ಇಂಗು ಗುಂಡಿಗಳನ್ನು ನಿರ್ಮಿಸುವ ಮುಖಾಂತರ ಮಳೆ ನೀರನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ.

ಕಿರು ಅರಣ್ಯ:
ಹೊಸನಗರ ತಾಲ್ಲೂಕು ಮುತ್ತಲ ಗ್ರಾಮದಲ್ಲಿ ಸ್ವಗ್ರಾಮ ಯೋಜನೆಯಡಿಯಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ 120X200 ವಿಸ್ತೀರ್ಣದಲ್ಲಿ 1300 ಗಿಡಗಳನ್ನು ಸ್ವಾಭಾವಿಕ ಕಿರು ಅರಣ್ಯವನ್ನು ಸೂಕ್ತ ತಡೆಗೋಡೆ ಹಾಗೂ ಅಗಳದ ರಕ್ಷಣೆ ಸಹಿತ ನಿರ್ಮಿಸಲಾಗಿದೆ.

ಕೆರೆಗಳ ಪುನಶ್ಚೇತನ:
ಜೀವಜಲ ಕಾರ್ಯಪಡೆ ಶಿರಸಿಯ ಮುಖ್ಯ ಪ್ರೇರಕರಾದ ಶಿವಾನಂದ ಕಳವೆ ಇವರು ಸಾಗರದಲ್ಲಿ ನಡೆಸಿಕೊಟ್ಟ ಮಾಹಿತಿ ಕಾರ್ಯಾಗಾರದಿಂದ ಪ್ರೇರಿತರಾಗಿ ಸ್ಥಳೀಯ ಜನಸಮುದಾಯ, ಪರಿಸರಾಸಕ್ತ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳ ನೆರವು ಹಾಗೂ ಸಹಭಾಗಿತ್ವವನ್ನು ಪಡೆದು ಕೆರೆಗಳ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಾಯಿತು.

ಕೆರೆಗಳು :

  • ಸಾಗರದ ಚಿಪ್ಪಿಯ ಬಂಗಾರಮ್ಮನ ಕೆರೆ
  • ಹೊಸನಗರ ತಾಲ್ಲೂಕು ದೊಂಬೆಕೊಪ್ಪದ ಭೂಕನ ಕೆರೆ
  • ಹೊಸನಗರ ತಾಲ್ಲೂಕು ಮುತ್ತಲ ಗ್ರಾಮದ ಮಾಕೋಡು ಕೆರೆ
  • ಹೊಸನಗರ ತಾಲ್ಲೂಕು ಮುತ್ತಲ ಗ್ರಾಮದ ವರತೆ ಕೆರೆ,
  • ಹೊಸನಗರ ತಾಲ್ಲೂಗು ಮಜ್ವಾನದ ಕೋಡಿಕೆ ಗದ್ದೆ ಕೆರೆ.
  • ಹೊಸನಗರ ಪಟ್ಟಣದ ಒಟ್ಟೂರ ಕೆರೆ
  • ಸೊರಬ ತಾಲ್ಲೂಕಿನ ಹೀರಳೆ ಕೆರೆ
  • ಹೊಸನಗರ ತಾಲ್ಲೂಕು ಮುತ್ತಲದ ಸಳ್ಳಿಕೆರೆ
  • ಹರತಾಳು ಗ್ರಾಮದ 8 ಎಕರೆ ವಿಸ್ತೀರ್ಣದ ಬೃಹತ್ ಕೆರೆಯ ಪುನಶ್ವೇತನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವನ್ನು ಒದಗಿಸಿ ಕೊಡಲಾಯಿತು.
  • ಶಿವಮೊಗ್ಗ ವಾಜಪೇಯಿ ಬಡಾವಣೆಯ ಕೇದಿಗೆ ಕಟ್ಟೆ ಕೆರೆ.
  • ಶಿವಮೊಗ್ಗ ಗಾಜನೂರಿನ ಶರಣ್ಯ ಕೆರೆ.
  • ಶಿವಮೊಗ್ಗ ಸಾಯಿ ಮಂದಿರದ ಕೆರೆ ಅಭಿವೃದ್ಧಿ ಶಿವಮೊಗ್ಗ ಸರ್ಜಿ ಫೌಂಡೇಶನ್ ಅಡಿಯಲ್ಲಿ
  • ಸಾಗರ ತಾಲೂಕಿನ ಹೊಸೂರು ಕೆರೆ ಅಭಿವೃದ್ಧಿ.
  • ಹೊಸನಗರ ತಾಲೂಕಿನ ಕಲ್ಲುಕೊಪ್ಪದ ಮಂಗನ ಕೆರೆ ಅಭಿವೃದ್ಧಿ.
  • ಹೊಸನಗರ ತಾಲೂಕಿನ ಏಳುಗದ್ದೆ ಕೆರೆ ಅಭಿವೃದ್ಧಿ.
  • ಹೊಸನಗರ ತಾಲೂಕಿನ ಹೀಬೈಲಿನ ಗೋಸಿನ ಕೆರೆ ಅಭಿವೃದ್ಧಿ.
  • ಸಾಗರ ತಾಲೂಕಿನ ಚಿಕ್ಕಹೊನ್ನೆಸರ ಮೇಲಿನ ಕೆರೆ ಅಭಿವೃದ್ಧಿ.

ಈ ಎಲ್ಲ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರದ ಅಂದಾಜು ವೆಚ್ಚದ ಶೇ.25 ಮೊತ್ತದಲ್ಲಿ ಮಾಡಲಾಗಿದೆ.

ಈ ಎಲ್ಲ ಕೆರೆಗಳ ಪುನಶ್ಚೇತನ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕು ಕೆರೆಗಳನ್ನು ಪುನಶ್ಚೇತನಗೊಳಿಸುವ ಗುರಿ ಹೊಂದಿದ್ದರು.

ಸ್ವಗ್ರಾಮ ಯೋಜನೆ:
ಗಾಂಧೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಅಡಿಯಲ್ಲಿ ‘ಸ್ವಗ್ರಾಮ’ ಯೋಜನೆಯನ್ನು ಸಾರ, ನಾಡಚಾವಡಿ, ಕೆ.ವಿ. ಸುಬ್ಬಣ್ಣ ರಂಗ ಸಮೂಹ ಹೆಗ್ಗೋಡು ಹಾಗೂ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಯೇಸುಪ್ರಕಾಶ ಅವರ ಸಂಚಾಲಕತ್ವದಲ್ಲಿ ಮುತ್ತಲ ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮದಲ್ಲಿ ‘ಸ್ವಗ್ರಾಮ’ ಯೋಜನೆ ಅನಿಷ್ಠಾನಗೊಳಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ನಡೆಸಿದ ಕಾರ್ಯ ಚಟುವಟಿಕೆ, ಗ್ರಾಮದ ಆಯ್ಕೆ, ಗ್ರಾಮದ ಸರ್ವೆ, ಕ್ರಿಯಾ ಯೋಜನೆ ತಯಾರಿ, ಗ್ರಾಮ ಸಮಿತಿ ಆಯ್ಕೆ, ಉಪಸಮಿತಿಗಳು, ಕೆರೆ ಸಮಿತಿ, ಅರಣ್ಯ ಸಮಿತಿ, ಸಾಂಸ್ಕೃತಿಕ ಸಮಿತಿ, ಶಿಕ್ಷಣ, ಆರೋಗ್ಯ ಸಮಿತಿ, ಮಹಿಳಾ ಸಮಿತಿ, ಯುವ ಕಾರ್ಯಪಡೆ ಎಂಬ ಉಪ ಸಮಿತಿಯನ್ನು ರಚಿಸಿ ಅವುಗಳ ಮೂಲಕ ಕಾರ್ಯಯೋಜನೆ ಅನುಷ್ಠಾನಕ್ಕೆ ತರಲು ಯತ್ನಿಸಲಾಯಿತು.

ಕೈಗೊಂಡ ಕಾರ್ಯಗಳು:
ಮುತ್ತಲ ಗ್ರಾಮದ ಮಾಕೋಡು ಕೆರೆ ಅಭಿವೃದ್ಧಿ, ವರತೆ ಕೆರೆ ಅಭಿವೃದ್ಧಿ, ಗ್ರಾಮದ ರಸ್ತೆಗಳಿಗೆ ಸಾಲು ಮರಗಳು, ಗ್ರಾಮ ಪಂಚಾಯತ್ ಸಹಯೋಗದಲ್ಲಿ 1500ಕ್ಕೂ ಹೆಚ್ಚು ಇಂಗುಗುಂಡಿಗಳು, ಮಳೆನೀರು ಹಿಡಿದಿಡುವುದು ರಸ್ತೆಯ ಚರಂಡಿಗಳ ಇಕ್ಕೆಲದಲ್ಲಿ ಯಂತ್ರ ಬಳಸಿ 25ಕ್ಕೂ ಹೆಚ್ಚು ಇಂಗು ಗುಂಡಿಗಳ, 1.5 ಕಿ.ಮೀ.ಯಲ್ಲಿ ಹರಿದು ಹಳ್ಳ ಸೇರುತ್ತಿದ್ದ ಬೃಹತ್ ಪ್ರಮಾಣದ ಮಳೆ ನೀರನ್ನು ಸಂಗ್ರಹಿಸಲು 80X60 ಸುತ್ತಳತೆಯ 10 ಅಡಿ ಆಳದ ಬೃಹತ್ ಇಂಗುಗುಂಡಿ ನಿರ್ಮಾಣ ಗ್ರಾಮದ ಎರಡು ಎಕರೆ ಪ್ರದೇಶಗಳಲ್ಲಿ ಅರಣೀಕರಣ – ಕೆರೆಗಳಲ್ಲಿ ಮೀನು ಸಾಕಾಣಿಕೆ, ರಕ್ತದಾನ ಶಿಬಿರ, ಶ್ರಮದಾನ, ರಾಷ್ಟ್ರೀಯ ಸೇವಾ ಯೋಜನೆ, ರೈತರ ಜಮೀನಿನ ಮಣ್ಣು ಪರೀಕ್ಷೆ, ತಾಲ್ಲೂಕು ಮಟ್ಟದ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ರೈತರಿಗೆ ಕೃಷಿ ಮಾಹಿತಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತು ಕಾರ್ಯಾಗಾರ, ಗ್ರಾಮೀಣ ಪಾರಂಪರಿಕೆ ಕಲೆ ಹಸೆಚಿತ್ತಾರ ಕುರಿತು ಗ್ರಾಮದ ಮಹಿಳೆಯರಿಗೆ ಎರಡು ದಿನಗಳ ಕಾರ್ಯಾಗಾರ, ಯುವಜನರಿಗೆ ಸ್ವಯಂ ಉದ್ಯೋಗದ ಕುರಿತು ಮಾಹಿತಿ ಕಾರ್ಯಾಗಾರ, ಗ್ರಾಮದ ಮೂರನೇ ಸಳ್ಳಿ ಕೆರೆಯ ಅಭಿವೃದ್ಧಿ, ಗ್ರಾಮಸ್ಥರ ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಸ್ವಗ್ರಾಮ ಸೇವಾಶ್ರಮ ಕುಟೀರ ನಿರ್ಮಾಣ, ಶಾಲೆಯ ಆವರಣದಲ್ಲಿ ಪೌಷ್ಠಿಕ ಹಾಗೂ ಔಷಧಿ ಸಸ್ಯ ವನ ನಿರ್ಮಾಣ, ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು ಗ್ರಾಮದ ಸಮಗ್ರ ಕಾಮಗಾರಿಗಳಿಗೆ ಕ್ರಿಯಾ ಯೋಜನೆಗೆ ಮತ್ತು ಅನುಮೋದನೆ ಪಡೆಯಲಾಗಿತ್ತು. ಗ್ರಾಮದ ಶಾಲೆಯ ಕಾಂಪೌಂಡ್ ಗೋಡೆಗಳಿಗೆ ರಾಜ್ಯ ಮಟ್ಟದ ಚಿತ್ರಕಾರರಿಂದ ವನ್ಯಜೀವಿ, ಪರಿಸರ ಜಾಗೃತಿ ಮೂಡಿಸುವ ಚಿತ್ರಗಳ ಅನಾವರಣಗೊಳಿಸಲಾಗಿದೆ.

Leave A Reply

Your email address will not be published.

error: Content is protected !!