ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯಿಂದ ಮುನ್ನಡೆದರೆ ಉಜ್ವಲ ಭವಿಷ್ಯವಿದೆ ; ಸಚಿವ ಈಶ್ವರ ಖಂಡ್ರೆ

0 211

ಚಿಕ್ಕಮಗಳೂರು : ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯಿಂದ ಮುನ್ನಡೆದರೆ ಉಜ್ವಲ ಭವಿಷ್ಯವಿದೆ ಎಂದು ಅರಣ್ಯ ಸಚಿವ ಹಾಗೂ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

ಅವರು ಭಾನುವಾರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಶಾಸಕ ಹೆಚ್.ಡಿ.ತಮ್ಮಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಸಮುದಾಯದ ಪೀಠ ಮಠಗಳು ಮತ್ತು ಸಮಾಜದ ಹಿರಿಯ ಧುರೀಣರು ಈ ದಿಶೆಯಲ್ಲಿ ಯೋಚಿಸುವ ಅಗತ್ಯವಿದೆ. ಚಿಕ್ಕಮಗಳೂರು ಜಿಲ್ಲಾ ಸಂಘಟನೆ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.

ಜೀವನದ ಶ್ರೇಯಸ್ಸಿಗೆ ನೀತಿ ಸಂಹಿತೆ ಮುಖ್ಯ : ರಂಭಾಪುರಿ ಶ್ರೀಗಳು
ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ವೀರಶೈವ ಧರ್ಮ ಆದರ್ಶ ತತ್ವ ಸಿದ್ಧಾಂತಗಳನ್ನು ಹೊಂದಿ ಸಕಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಮಾನವ ಜೀವನದ ಶ್ರೇಯಸ್ಸಿಗೆ ನೀತಿ ನಿಬಂಧನೆ ಮತ್ತು ಪರಿಪಾಲನೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಬದುಕಿಗೊಂದು ಮೌಲ್ಯ ಬರಬೇಕಾಗಿದ್ದರೆ ನೀತಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅವುಗಳನ್ನು ಮೀರಿ ನಡೆಯುತ್ತಿರುವ ಕಾರಣ ಅನೇಕ ಸಂಕಷ್ಟಗಳಿಗೆ ಬಲಿಯಾಗುತ್ತಿದ್ದಾನೆ. ಸಂಸ್ಕಾರ ಮತ್ತು ಸದ್ವಿಚಾರಗಳ ಕೊರತೆ ಇದಕ್ಕೆ ಕಾರಣವಾಗಿದೆ. ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅಪಾಯಗಳೇ ಹೆಚ್ಚು. ಮುಂದಿನ ಪುಟದಲ್ಲಿ ಏನಿದೆ ಎಂದು ಯಾರಿಗೂ ತಿಳಿಯದ ಪುಸ್ತಕ ನಮ್ಮ ಜೀವನವಾಗಿದೆ. ಅಧ್ಯಯನ ನಿರತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆದರ್ಶ ವಿಚಾರಗಳನ್ನು ಹೊಂದಿ ಸನ್ಮಾರ್ಗದಲ್ಲಿ ನಡೆದರೆ ಅವರು ದೇಶದ ಸಂಪನ್ಮೂಲ ವ್ಯಕ್ತಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿಕ್ಕಮಗಳೂರು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರತಿ ವರುಷ ಪ್ರತಿಭಾ ಪುರಸ್ಕಾರ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಸ್ಫೂರ್ತಿಯನ್ನು ತಂದು ಕೊಡುತ್ತಿರುವುದು ಸಂತೋಷದ ಸಂಗತಿ ಎಂದ ಅವರು, ರಾಜಕಾರಣಿಗಳು ಸಾಮಾನ್ಯರ ಹಿತ ಕಾಪಾಡುವ ಮತ್ತು ಜಾತಿ ಜಾತಿಗಳ ಸಂಘರ್ಷ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೂಹಾರ ಹಾಕಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು.
ಸಮಾರಂಭ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಿದ ಶಾಸಕ ಹೆಚ್.ಡಿ.ತಮ್ಮಯ್ಯ, ಈ ಸಮಾರಂಭ ತಮಗೆ ಇನ್ನೂ ಹೆಚ್ಚಿನ ಸೇವೆ ಒದಗಿಸಲು ಪ್ರೇರಣೆ ನೀಡಿದೆ. ಸಮಾಜಕ್ಕೆ ತಾವು ಸದಾ ಋಣಿ ಎಂದರು.

ಜಿಲ್ಲಾ ಅಧ್ಯಕ್ಷ ಹೆಚ್.ಎಂ.ಲೋಕೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉತ್ತಮ ಕಾರ್ಯಗಳನ್ನು ಮನವರಿಕೆ ಮಾಡಿಕೊಟ್ಟರು.

ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಬೇರುಗಂಡಿಮಠದ ರೇಣುಕ ಮಹಂತ ಶಿವಾಚಾರ್ಯರು ಉಪಸ್ಥಿತರಿದ್ದರು.

ಅ.ಭಾ.ವೀ.ಮ.ಸಭಾ ರಾಷ್ಟ್ರೀಯ ಕಾರ್ಯದರ್ಶಿ ಚಿದಾನಂದ ಎಸ್.ಮಠದ, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೇರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಾಲಾ ಮೃತ್ಯುಂಜಯ, ಪಂಕಜ ಮಲ್ಲಿಕಾರ್ಜುನ್, ಬಿ.ಎ.ಶಿವಶಂಕರ್, ಕೆ.ಜೆ.ಚಂದ್ರಪ್ಪ, ಬಿ.ಟಿ.ರುದ್ರೇಶ್, ಹೆಚ್.ಎಂ.ಸದಾಶಿವಯ್ಯ, ಎಸ್.ಮಲ್ಲಿಕಾರ್ಜುನ್, ಕೆ.ಆರ್.ಧೃವಕುಮಾರ್, ಸಿ.ಎಂ.ರವಿಶ್ಯಾನುಭೋಗ್, ಪಿ.ವಿ.ಉಮಾ, ಪಿ.ಚಂದ್ರಮೌಳಿ, ಹೆಚ್.ಸಿ.ರೇವಣಸಿದ್ಧಪ್ಪ, ಸಿ.ಎಸ್. ಸಿದ್ಧೇಗೌಡ, ಕಲಾ ರುದ್ರೇಶ್, ಹೆಚ್.ಎಂ.ಶಶಿರಾಜ್, ವೈ.ಎಂ.ಶ್ರೀಧರ್, ಹೆಚ್.ವಿ.ಗಿರೀಶ್, ಸೋಮಶೇಖರ ಬೆಲೇನಹಳ್ಳಿ, ಎಂ.ಆರ್.ಪ್ರರ್ಣೇಶಮೂರ್ತಿ, ಸಿ.ಎಸ್.ಶೇಖರಪ್ಪ, ಹೆಚ್.ಎಂ.ಸನತ್‌ಕುಮಾರ್, ಮುಂಡ್ರೆ ಗಿರಿರಾಜ್, ಟಿ.ಆರ್.ರೇಣುಕಪ್ಪ, ಬಿ.ಎಸ್.ಓಂಕಾರಪ್ಪ, ಚಂದ್ರಶೇಖರ್, ರಾಜಲಕ್ಷ್ಮಿ ಕಾಂತರಾಜ್, ಹೆಚ್.ಈ.ಸುಧಾ, ಕವಿತಾ ಗೋಪಾಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!