ವಿದ್ಯುತ್ ಕ್ಷಾಮ ನೀಗಿಸಲು ಅಧಿಕಾರಿಗಳಿಗೆ ಸೂಚನೆ ; ಸಚಿವ ಮಧು ಬಂಗಾರಪ್ಪ

0 213


ಶಿವಮೊಗ್ಗ : ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡತಡೆಯಿಲ್ಲದೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.


ಅವರು ಇಂದು ಸೊರಬದ ತಾಲೂಕು ಕಚೇರಿ ಸಭಾಂಗಣದಲ್ಲಿ ಮೆಸ್ಕಾಂನ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಿರೀಕ್ಷಿತ ಪ್ರಮಾಣದ ಮಳೆ ಬಾರದೆ ಕಂಗಾಲಾಗಿರುವ ರೈತರು ಅನಿಯಮಿತ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದರಿಂದ ಇನ್ನಷ್ಟು ಸಂಕಷ್ಟಕ್ಕೀಡಾಗಿ ಅಸಂಖ್ಯಾತ ರೈತರು ನಮ್ಮಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ವಿದ್ಯುತ್ ದೊರೆಯದಿರುವುದರಿಂದ ರೈತರಿಗೆ ತೀವ್ರ ತರಹದ ತೊಂದರೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಕೃಷಿಕರು ಬೇಸರಗೊಳ್ಳುವ ಮೊದಲು ಸಂಬಂಧಿಸಿದ ಮೆಸ್ಕಾಂನ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಎದುರಾಗಬಹುದಾದ ಟ್ರಾನ್ಸ್‌ಫಾರ್ಮರ್ ಸಮಸ್ಯೆಗೆ ಸಕಾಲಿಕ ಪರಿಹಾರ ಕ್ರಮವಾಗಿ ಅಗತ್ಯಕ್ಕಿಂತ ಹೆಚ್ಚಿನ ಟ್ರಾನ್ಸ್‍ಫಾರ್ಮರ್‍ಗಳನ್ನು ಕಾಯ್ದಿರಿಸಿಕೊಳ್ಳುವಂತೆ ಹಾಗೂ ರೈತರಿಗೆ ಯಾವುದೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕೆಂದು ಸೂಚಿಸಿದ ಅವರು, ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ರೈತರೊಂದಿಗೆ ವ್ಯವಹರಿಸುವಂತೆ ಅವರು ಮನವಿ ಮಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಸರಬರಾಜಾಗುತ್ತಿರುವ ವಿದ್ಯುತ್ ನಿರಂತರವಾಗಿರದಿರುವುದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಅಲ್ಲದೇ ಮೆಸ್ಕಾಂ ನಿಗಧಿಪಡಿಸಿದ ಅವಧಿಯಷ್ಟು ಪ್ರಮಾಣದಲ್ಲಿಯೂ ವಿದ್ಯುತ್ ಸರಬರಾಜುಗೊಳ್ಳುತ್ತಿಲ್ಲ. ಆದ್ದರಿಂದ ಮೆಸ್ಕಾಂನ ಹಿರಿಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಲ್ಲದೆ ನಿಯೋಜಿತ ಅಧಿಕಾರಿ ಸಿಬ್ಬಂಧಿಗಳಿಗೂ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಿದ ಅವರು, ಸರ್ಕಾರ ನಿಗದಿಪಡಿಸಿರುವಂತೆ ವಾರಕ್ಕೊಮ್ಮೆಯ ಶಿಫ್ಟ್ ಆಧಾರದ ಮೇಲೆ ದಿನಕ್ಕೆ 5ಗಂಟೆಯ ಕಾಲ ನಿರಂತರವಾಗಿ ವಿದ್ಯುತ್ ಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಈ ಹಿಂದೆ ಮಂಜೂರಾಗಿರುವ ಹಾಗೂ ಪ್ರಸ್ತುತ ಹೊಸದಾಗಿ ಮಂಜೂರಾಗಿರುವ ಟ್ರಾನ್ಸ್‌ಫಾರ್ಮರ್ ಗಳ ನಿರ್ಮಾಣ ಕಾರ್ಯಕ್ಕೆ ಇರಬಹುದಾದ ಅಡತಡೆಗಳನ್ನು ನಿವಾರಿಸಿಕೊಂಡು ಕೂಡಲೇ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಲಹೆ ಪಡೆದು ಸಕಾಲಿಕವಾಗಿ ಕಾರ್ಯ ಪೂರ್ಣಗೊಳಿಸಬೇಕೆಂದರು.


ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯದಲ್ಲಿ ಅರಣ್ಯ ಭೂಮಿ ಇಂಡೀಕರಣ, ಖಾತೆಗಳ ಬದಲಾವಣೆ ಮುಂತಾದವುಗಳ ವಿಳಂಬ ರಹಿತ ಕಾರ್ಯಾನುಷ್ಠಾನಕ್ಕಾಗಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಜವಾಭ್ದಾರಿಯುತ ಅಧಿಕಾರಿಗಳನ್ನು ನಿಯೋಜಿಸುವಂತೆ ಸಚಿವರು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಅವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸೊರಬ ತಾಲೂಕು ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳ ವಿದ್ಯುತ್ ಸಂಬಂಧಿತ ಗಂಭೀರ ಸ್ವರೂಪದ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಪರ್ಯಾಯ ಕ್ರಮಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಲಾಗುವುದು ಎಂದವರು ನುಡಿದರು.


ಸಭೆಯಲ್ಲಿ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ಭಾರತಿ ಸಿ.ಎಸ್. ತಹಶೀಲ್ದಾರ್ ಹುಸೇನ್‍ಸಾಬ್, ಕಾರ್ಯನಿರ್ವಾಹಕ ಅಧಿಕಾರಿ ನಾಗೇಶ್ ಸೇರಿದಂತೆ ಸೊರಬ ತಾಲೂಕಿನ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ : ಮಧು ಎಸ್.ಬಂಗಾರಪ್ಪ
ಶಿವಮೊಗ್ಗ : ಸೊರಬ ತಾಲೂಕಿನಲ್ಲಿ ಬಹುದಿನಗಳಿಂದ ರಚನೆಯಾಗದೆ ಉಳಿದಿರುವ ಬಗರ್‍ಹುಕುಂ ಸಮಿತಿ, ಭೂನ್ಯಾಯಾಧೀಕರಣ ಹಾಗೂ ಆರಾಧನಾ ಸಮಿತಿಗಳಿಗೆ ಸದಸ್ಯರನ್ನು ನಿರ್ದೇಶನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ತಹಶೀಲ್ದಾರರಿಗೆ ಸೂಚಿಸಿದರು.


ಅವರು ಇಂದು ಸೊರಬರ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಗರ್‍ಹುಕುಂ ಸಾಗುವಳಿದಾರ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಬೇಕು. ಭೂಮಿ ಮಂಜೂರಾತಿಗಾಗಿ ಸಲ್ಲಿಸಲಾಗಿರುವ ಬಾಕಿ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿಗೊಳ್ಳಬೇಕು. ಗೆಂಡ್ಲಹೊಸೂರು ಸೇರಿದಂತೆ ಸೊರಬ ತಾಲೂಕಿನ ಇನಾಂ ಜಮೀನಿನ ಸರ್ವೇ ಕಾರ್ಯವನ್ನು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವಂತೆ ಹಾಗೂ ತಾಳಗುಪ್ಪ-ಹುಬ್ಬಳ್ಳಿ ರೈಲ್ವೇ ಮಾರ್ಗದ ಸರ್ವೇ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.


ಇದೇ ಸಂದರ್ಭದಲ್ಲಿ ಸೊರಬದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಬ್‍ರಿಜಿಸ್ಟ್ರಾರ್ ಕಚೇರಿ ಅತ್ಯಂತ ಸಂಕೀರ್ಣವಾಗಿದ್ದು, ಜನರ ನಿತ್ಯದ ಚಟುವಟಿಕೆಗಳಿಗೆ ಪೂರಕವಾಗಿಲ್ಲ. ಆದ್ದರಿಂದ ಸೂಕ್ತ ಸ್ಥಳವನ್ನು ಪರಿಶೀಲಿಸಿ, ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಂತೆಯೇ ಸೊರಬ ಮತ್ತು ಆನವಟ್ಟಿ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಬಿಸಲು ಸೂಕ್ತ ಸ್ಥಳಾವಕಾಶವಿರುವುದನ್ನು ತಿಳಿಸುವಂತೆ ಸಚಿವರು ತಹಶೀಲ್ದಾರರಿಗೆ ಸೂಚಿಸಿದರು.


ತಾಲೂಕಿನ ಅನೇಕ ಕಡೆಗಳಲ್ಲಿ ಅರಣ್ಯ ಭೂಮಿಯಲ್ಲಿ ಸರ್ಕಾರಿ ಕಟ್ಟಡಗಳಿವೆ. ಅವುಗಳ ದುರಸ್ತಿ, ನವೀಕರಣ, ನೂತನ ಕಟ್ಟಡ ನಿರ್ಮಾಣ ಮತ್ತಿತರ ವಿಷಯಗಳಲ್ಲಿ ತೀವ್ರ ತರಹದ ತೊಂದರೆ ಆಗುತ್ತಿದೆ. ಅಂತಹ ಸಮಸ್ಯಾತ್ಮಕ ಕಟ್ಟಡಗಳನ್ನು ಗುರುತಿಸಿ, ಮಾಹಿತಿ ನೀಡಿದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ನುಡಿದರು.


ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಮತಗಟ್ಟೆಗಳು ಅವೈಜ್ಞಾನಿಕವಾಗಿವೆ. ಕೆಲವು ಕಡೆ ಒಂದೇ ಗ್ರಾಮದ ನಿವಾಸಿಗಳು ಮತ್ತೊಂದು ಗ್ರಾಮಕ್ಕೆ ಹೋಗಿ ಮತ ಸಲ್ಲಿಸಿ ತೆರಳಬೇಕಾದ ಅಗತ್ಯವಿದೆ. ಇದರಿಂದಾಗಿ ಗ್ರಾಮದ ವಿಕಾಸ ಕಷ್ಟಸಾದ್ಯವಾಗಲಿದೆ. ಆದ್ದರಿಂದ ಇಂತಹ ಸಮಸ್ಯೆಗಳಿರುವಲ್ಲಿ ಒಂದೆ ಗ್ರಾಮದ ನಿವಾಸಿಗಳಿಗೆ ಒಂದೇ ಕಡೆ ಮತಗಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರು ತಹಶೀಲ್ದಾರರಿಗೆ ಸೂಚಿಸಿದರು.
ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದ್ದು, ಅದರ ನಿವಾರಣೆಗಾಗಿ ಪರ್ಯಾಯ ದಿನಗಳಲ್ಲಿ ನೀರು ಪೂರೈಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ವಿತರಿಸಲಾಗುತ್ತಿದೆ. ಇನ್ನೂ ಕೆಲವು ಕಡೆ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳನ್ನು ನಿರ್ಮಿಸಲಾಗಿದ್ದು, ನೀರನ್ನು ಒದಗಿಸಲು ವಿವಿಧ ಇಲಾಖೆಗಳ ಯೋಜನೆಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಹಾಗೂ ಅಗತ್ಯವಿರುವಲ್ಲಿ ತಮ್ಮ ಸಲಹೆಯನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.


ಇದೇ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಈ ಯೋಜನೆಯ ಅನುಷ್ಠಾನದಿಂದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ತಾಲೂಕಿನ ಅನೇಕ ಗ್ರಾಮೀಣ ರಸ್ತೆಗಳು, ಜಿಲ್ಲಾ ಸಂಪರ್ಕ ರಸ್ತೆಗಳು ಹಾಳಾಗಿದ್ದು, ನಿರ್ವಹಣೆ ಕಾಣದಾಗಿವೆ. ಇದರಿಂದಾಗಿ ಜನರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಈ ಹಿಂದೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಇದರ ನಿರ್ವಹಣೆ ಮಾಡುವಂತೆ ತಪ್ಪಿದಲ್ಲಿ ಅವರಿಗೆ ನೀಡಬೇಕಾದ ಬಾಕಿ ಮೊತ್ತವನ್ನು ಪಾವತಿಸದಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದರು.


ಸದ್ಯದಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಳು ಗ್ರಾಮೀಣ ರಸ್ತೆಗಳ ದುರಸ್ತಿಗೆ ಗಮನಹರಿಸಬೇಕು. ಕೆಲವು ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಶಿರಾಳಕೊಪ್ಪ ಮತ್ತು ಸೊರಬ ಮುಖ್ಯರಸ್ತೆ ಹಾಳಾಗಿದ್ದು, ಹೊಸ ರಸ್ತೆ ಕಾಮಗಾರಿಗೆ ಹೊಸ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚಿಸಿದರು.
ಗ್ರಾಮೀಣ ಮಕ್ಕಳು ದಿನನಿತ್ಯ ಶಾಲೆಗೆ ತೆರಳಲು ಹಾಗೂ ಜನರು ಆಸ್ಪತ್ರೆಗೆ ತೆರಳಲು ಸಾರಿಗೆ ಸಂಪರ್ಕದ ಅಗತ್ಯವಿದೆ. ಈ ಸಂಬಂಧ ಅನೇಕ ಗ್ರಾಮಗಳಲ್ಲಿ ದೂರುಗಳು ಬಂದಿವೆ. ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಕರು ಈ ಬಗ್ಗೆ ಕ್ರಮ ಕೈಗೊಂಡು ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಅವರು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ತಾಲೂಕಿನ ಕೆರೆ, ಕಟ್ಟೆ ಕಾಲುವೆಗಳಲ್ಲಿ ನೀರಿನ ಸಂಗ್ರಹದಲ್ಲಿ ಭಾರೀ ಪ್ರಮಾಣದ ಕೊರತೆ ಇದೆ. ಆದ್ದರಿಂದ ರೈತರು ಭತ್ತದ ಬೆಳೆಗೆ ಪರ್ಯಾಯವಾಗಿ ಕಡಿಮೆ ನೀರನ್ನು ಬಳಸಿ ಬೆಳೆಯುವ ಬೆಳೆಯನ್ನು ಬೆಳೆಯುವಂತೆ, ಹಾಗೂ ನೀರಿನ ಅಬಾವಕ್ಕೆ ಸಿಲುಕಿಕೊಳ್ಳದಂತೆ ಅವರು ಸಲಹೆ ನೀಡಿದರು.
ತಮ್ಮ ಅವಹಾಲುಗಳನ್ನು ಸಲ್ಲಿಸುವ ಅರ್ಜಿದಾರರಿಗೆ ಅರ್ಜಿಯ ಹಂತ, ಅದರ ವಿಲೇವಾರಿಗೆ ಇಲಾಖಾ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ತಿಳಿಯುವಂತೆ ಮಾಡಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಇದರಿಂದಾಗಿ ಜನಸಾಮಾನ್ಯರು ತಮ್ಮ ಸಮಸ್ಯೆಯ ವಿಸ್ತೃತ ಮಾಹಿತಿಯನ್ನು ತಾವಿರುವಲ್ಲಿಯೇ ಪಡೆದುಕೊಳ್ಳಬಹುದಾಗಿದೆ.
ಮಧು ಎಸ್.ಬಂಗಾರಪ್ಪ, ರಾಜ್ಯ ಶಿಕ್ಷಣ ಸಚಿವರು.


ಸೊರಬದ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಖಲಾತಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸೊರಬದ ಯುವ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಾಗರ ಪಟ್ಟಣಕ್ಕೆ ದಿನನಿತ್ಯ ಪ್ರಯಾಣಿಸುವಂತಾಗಿದೆ. ವಿಶೇಷವಾಗಿ ವಿಜ್ಞಾನ ಮತ್ತು ಕಾಮರ್ಸ್ ವಿಷಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅತ್ಯಂತ ಕಡಿಮೆಯಾಗಿದೆ. ಕಾಲೇಜಿನ ಪ್ರಗತಿಯ ನಿರ್ಲಕ್ಷ್ಯಕ್ಕೆ ಕಾರಣರಾಗಿರುವ ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರಥಮದರ್ಜೆ ಸಹಾಯಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಲ್ಲದೇ ಅವರನ್ನು ಅಮಾನತ್ತುಗೊಳಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಈ ಸಂಬಂಧ ಶೀಘ್ರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದ ಚರ್ಚಿಸಲಾಗುವುದು ಎಂದರು.


ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೆ.ಪಿ.ಎಸ್.ಮಾದರಿ ಶಾಲೆಗಳನ್ನು ಆರಂಭಿಸುವ ಪೂರ್ವದಲ್ಲಿ ಸ್ಥಳೀಯರ ಸಹಯೋಗದೊಂದಿಗೆ ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಶಿಕ್ಷಣ ಕ್ಷೇತ್ರದ ಸಾಧನೆ, ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಜಿಲ್ಲೆಯ ಎಲ್ಲಾ ಶಿಕ್ಷಕರು ಶ್ರಮಿಸುವಂತೆ ಸೂಚಿಸಿದರು.


ಕೆಲವು ಕಡೆಗಳಲ್ಲಿ ಶಿಕ್ಷಕರು ತಮ್ಮ ಬದಲಾಗಿ ಸಹಾಯಕರನ್ನು ನೇಮಿಸಿಕೊಂಡು, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಆರೋಪಗಳಿವೆ. ಅಂತಹ ಶಿಕ್ಷಕರ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಅಲ್ಲದೆ ಅಂತಹ ಶಿಕ್ಷಕರು ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ಸೂಚಿಸಿದರು.


ಜಿಲ್ಲೆಯಲ್ಲಿ 500 ಎಕರೆ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಅಂತೆಯೇ ಸೊರಬದಲ್ಲಿಯೂ ಕೈಗಾರಿಕಾ ಪ್ರದೇಶ ವಿಸ್ತರಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಶೀಘ್ರದಲ್ಲಿ ಕೈಗಾರಿಕಾ ಇಲಾಖಾ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.


ಸಭೆಯಲ್ಲಿ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಭಾರತಿ ಸಿ.ಎಸ್. ತಹಶೀಲ್ದಾರ್ ಹುಸೇನ್‍ಸಾಬ್, ಕಾರ್ಯನಿರ್ವಾಹಕ ಅಧಿಕಾರಿ ನಾಗೇಶ್ ಸೇರಿದಂತೆ ಸೊರಬ ತಾಲೂಕಿನ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!