ಇಂದು ಯಾವ ರಾಜಕೀಯ ಪಕ್ಷಗಳಿಗೂ ಸಿದ್ಧಾಂತಗಳು ಉಳಿದುಕೊಂಡಿಲ್ಲ ; ವೈಎಸ್‌ವಿ ದತ್ತಾ

0 53

ಶಿವಮೊಗ್ಗ: ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮರ್ಜಿ, ಹಂಗು ಇರುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳಿಗೆ ಈ ಹಂಗು ಇರುವುದಿಲ್ಲ. ನಾಡು, ನುಡಿ, ಜಲದ  ವಿಷಯದಲ್ಲಿ  ಜೆಡಿಎಸ್ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಇಂದಿಲ್ಲಿ ಹೇಳಿದರು.


ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಷ್ಟ್ರೀಯ ವರಿಷ್ಠರಾದ ದೇವೇಗೌಡರು ಸೇರಿದಂತೆ ಕುಮಾರಸ್ವಮಿಯವರಾಗಲಿ, ಅಥವಾ ಜೆಡಿಎಸ್ ಪಕ್ಷವಾಗಲಿ ಕಾವೇರಿ ವಿಚಾರದಲ್ಲಿ ಎಂದೂ ರಾಜಿಯಾಗಿಲ್ಲ. ಬರಗಾಲದ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಅದೇನೋ ಮರ್ಜಿ ಇದ್ದಂತೆ ಕಾಣಿಸುತ್ತದೆ ತಮಿಳುನಾಡಿಗೆ ನೀರು ಬಿಡುವುದರಲ್ಲಿ ರಾಜ್ಯದ ರೈತರ ಹಿತವನ್ನು ನೋಡುತ್ತಿಲ್ಲ ಎಂದರು.


ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ಜನತಾ ಪರಿವಾರದ ಸರ್ಕಾರಗಳು ತಮಿಳುನಾಡಿಗೆ ನೀರು ಬಿಡಲು ಅಷ್ಟು ಸುಲಭವಾಗಿ ಎಂದೂ ಒಪ್ಪಿಲ್ಲ. ಅಷ್ಟೇಕೆ ಈಗಿನ ಮುಖ್ಯಮಂತ್ರಿ ಯಾಗಿರುವ ಸಿದ್ದರಾಮಯ್ಯ ಅವರು ಕೂಡ ಜನತಾ ಪರಿವಾರದಲ್ಲಿದ್ದಾಗ ಕಾವೇರಿಗೆ ನೀರು ಬಿಡುವ ವಿಷಯದಲ್ಲಿ ಅತ್ಯಂತ ಪ್ರಬಲವಾಗಿ ವಿರೋಧಿಸಿದವರು ಮತ್ತು ಹೋರಾಡಿದವರು. ಅದನ್ನು ಅವರು ನೆನಪಿಸಿಕೊಂಡರೆ ಸಾಕು ಎಂದರು.


ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇಂದು ಯಾವ ರಾಜಕೀಯ ಪಕ್ಷಗಳಿಗೂ ಸಿದ್ಧಾಂತಗಳು ಉಳಿದುಕೊಂಡಿಲ್ಲ. ಅವಕಾಶವಾದಿ ರಾಜಕಾರಣವೇ ಈ ಹೊತ್ತಿನ ವಿಜೃಂಭಣೆಯಾಗಿದೆ. ಇದು ಎಲ್ಲಾ ಪಕ್ಷಗಳಿಗೂ ಅನ್ವಯಿಸುತ್ತದೆ. ಆರ್‌ಎಸ್‌ಎಸ್, ಹಿಂದೂ ಮುಂತಾದ ಅಜೆಂಡಾಗಳನ್ನು ಇಟ್ಟುಕೊಂಡಿದ್ದ ಬಿಜೆಪಿಯವರು ಕಾಂಗ್ರೆಸ್ ಸೇರಿದಾಗ ಅವರ ಸಿದ್ದಾಂತಗಳು ಎಲ್ಲಿ ಹೋಗುತ್ತವೆ. ಹಾಗೆಯೇ ಕಾಂಗ್ರೆಸ್ ಪಕ್ಷದವರು ಬಿಜೆಪಿ ಸೇರಿದಾಗ ಅವರ ನಿಷ್ಠೆಗಳು, ತತ್ವಗಳು ಎಲ್ಲಿ ಮರೆಯಾಗುತ್ತವೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದರು.


ಹಾಗಾಗಿ ಮೈತ್ರಿ ಧರ್ಮ ಎನ್ನುವುದು ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿದೆ. ಅದರೆ ನಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿಯವರು ದೆಹಲಿಯ ಬಿಜೆಪಿ ನಾಯಕರ ಜೊತೆ ಮಾತನಾಡಿದ ನಂತರವೇ ಅದರ ತೀರ್ಮಾನ ಆಗಲಿದೆ. ಆದರೆ ಮಾತುಕತೆ ಆಗಿರುವುದಂತೂ ನಿಜ. ಸೀಟು ಹಂಚಿಕೆ ವಿಷಯದ ಬಗ್ಗೆ ನಮ್ಮ ಪಕ್ಷದ ಮುಖಂಡರು ಮಾತನಾಡುತ್ತಾರೆ ಎಂದರು.

Leave A Reply

Your email address will not be published.

error: Content is protected !!