ಶ್ರೀ ಮಹಾವೀರ ತೀರ್ಥಂಕರರ ಜನ್ಮ ಕಲ್ಯಾಣದ ಸುದಿನ | ‘ಮಾನವೀಯ ಜೀವನ ಮೌಲ್ಯಗಳು ವಿಶ್ವದೆಲ್ಲೆಡೆ ಅಹಿಂಸಾ ಧರ್ಮ ಪಸರಿಸಲಿ’ ; ಹೊಂಬುಜ ಶ್ರೀಗಳು

0 156

ರಿಪ್ಪನ್‌ಪೇಟೆ : ‘ಜೈನ ಧರ್ಮ ಶಾಸ್ತ್ರದ ಉಪದೇಶಗಳು ಕೇವಲ ಜೈನ ಧರ್ಮೀಯರಿಗೆ ಸೀಮಿತವಾಗಿಲ್ಲ. ಮನುಷ್ಯ, ಪಶು, ಪಕ್ಷಿ, ಸಸ್ಯ ಜೀವರಾಶಿ-ಜಲಜೀವಿಗಳ ಪೋಷಣೆ-ರಕ್ಷಣೆಗಾಗಿ ಅಹಿಂಸಾ ಧರ್ಮದ ನೆಲೆಗಟ್ಟಿನಲ್ಲಿ ವಿಶ್ವದ ವಿದ್ಯಮಾನಗಳು ಸಂಘರ್ಷ ತೊರೆದು ಸರಳ-ಸಾತ್ವಿಕ ಮನೋಧರ್ಮ ಪಥದಲ್ಲಿ ಮುಂದುವರಿಯಲು ಜೈನ ಧರ್ಮ ಗ್ರಂಥಗಳಲ್ಲಿ ತೀರ್ಥಂಕರರ ಬೋಧನೆಗಳು ಉಲ್ಲೇಖಿಸಲ್ಪಟ್ಟಿವೆ’ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ಮಹಾವೀರ ತೀರ್ಥಂಕರ ಜನ್ಮಕಲ್ಯಾಣ ಸುದಿನ ಪ್ರವಚನದಲ್ಲಿ ತಿಳಿಸಿದರು.

ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಲು ಪ್ರತಿಯೊರ್ವರೂ ಮಾನವೀಯ ಮೌಲ್ಯಗಳನ್ನು ನಿತ್ಯ ರೂಢಿಸಿಕೊಂಡು, ಪರಸ್ಪರ ವಾತ್ಸಲ್ಯಮಯಿ ಸಹೋದರ ಭಾವದ ಅನ್ಯೋನ್ಯತೆ ಮಾನಸಿಕ-ಶಾರೀರಿಕ ನೆಮ್ಮದಿ-ಶಾಂತಿ ನೀಡಬಲ್ಲವು ಎಂದು ಶ್ರೀಗಳವರು ಶ್ರೀ ಮಹಾವೀರ ತೀರ್ಥಂಕರರು “ಬದುಕು, ಬದುಕಲು ಬಿಡು, ಬದುಕಲು ಇನ್ನೋರ್ವರಿಗೆ ತ್ರಿಕರಣ ಪೂರ್ವಕ ಸಹಾಯ-ಸಹಕಾರ ಮಾಡು” ಎನ್ನುವ ಅಮೂಲ್ಯ ಧರ್ಮಪಥವನ್ನು ನೀಡಿದ್ದಾರೆಂದರು. ರಾಷ್ಟ್ರದ ಏಳಿಗೆಗೆ ಜೈನ ಧರ್ಮದ ಕೊಡುಗೆ ಅಪಾರವಾದುದೆನ್ನುತ್ತಾ ಕ್ಷೇಮಂ ಸರ್ವ ಪ್ರಜಾನಾಂ ಎಂದರು.

ಮಹಾಪುರುಷರ ನಡೆ-ನುಡಿಗಳು ಯಾವಾಗಲೂ ಆದರ್ಶವಾಗಿರುತ್ತವೆ. ಗುಡಿ-ಗೋಪುರಗಳನ್ನು ಕಟ್ಟಿ ಪೂಜಿಸುವುದು ಅವರ ಆದರ್ಶ ಗುಣಗಳನ್ನು ಹೊಂದಲೆಂದೇ ವಿನಾ ನಮ್ಮ ಶಕ್ತಿಯ ಅನಾವರಣಕ್ಕಾಗಿ ಅಲ್ಲ. ಮಹೋತ್ಸವ ಜಯಂತಿಗಳು ಸದಾ ನಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಲು ನೆರವಾಗಬೇಕು ಅಲ್ಲದೇ ಆಡಂಬರವಾಗಬಾರದು. ಅವರ ಆಚರಣೆಗಳಿಂದ ನಮ್ಮಗಳ ಚಲನೆ (ಆಚರಣೆ) ಸರಿದಾರಿಗೆ ಬರಲೆಂಬುದೇ ಉದ್ಧೇಶ ಎಂದು ಆಶೀರ್ವಚನ ನೀಡಿದರು.

ಶ್ರೀಕ್ಷೇತ್ರದಲ್ಲಿ ಪೂವಾಹ್ನ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಜಿನಾಲಯದಲ್ಲಿ ಪೂಜೆ ಸಲ್ಲಿಸಿ, ಶ್ರೀ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣಕ ನಾಮಕರಣ, ಉತ್ಸವ, ವಿಶೇಷ ಪೂಜೆಯನ್ನು ಪೂಜ್ಯ ಶ್ರೀಗಳವರು ನೆರವೇರಿಸಿದರು. ಊರ-ಪರವೂರ ಶ್ರಾವಕ-ಶ್ರಾವಿಕೆಯರು ಜಯ ಶ್ರೀ ಮಹಾವೀರ ಸ್ವಾಮಿ ಅಹಿಂಸಾ ಧರ್ಮ ಕೀ ಜೈ, ಜಯಘೋಷದೊಂದಿಗೆ ಪಲ್ಲಕ್ಕಿ ಸೇವೆಯಲ್ಲಿ ಪಾಲ್ಗೊಂಡರು.

Leave A Reply

Your email address will not be published.

error: Content is protected !!