ಸಿನಿಮಾದಲ್ಲಿ ಕುಣಿದಂತೆ ರಾಜಕೀಯದಲ್ಲಿ ಕುಣಿಯುವುದು ಸುಲಭವಲ್ಲ ; ಬಿ.ವೈ.ಆರ್.

0 507

ಹೊಸನಗರ: ಸಿನಿಮಾದಲ್ಲಿ ಕುಣಿದಂತೆ ರಾಜಕೀಯದಲ್ಲಿ ಕುಣಿಯುವುದು ಸುಲಭವಲ್ಲ ಎಂದು ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಮಾರುತಿಪುರದ ಅಪ್ಪಟ ಬಿಜೆಪಿ ಕಾರ್ಯಕರ್ತ ಎಂ.ಪಿ. ಹೆಗಡೆಯವರ ಮನೆಯ ಆವರಣದಲ್ಲಿ ನಡೆದ ಹೊಸನಗರ ತಾಲೂಕು ಮಾರುತಿಪುರ ಬಿಜೆಪಿ ಮಹಿಳಾ ಮಹಾಶಕ್ತಿ ಕೇಂದ್ರದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರಿ ಹಾಗೂ ಡಾ. ರಾಜ್‍ಕುಮಾರ್ ಅವರ ಪುತ್ರ ಎಂಬ ಕಾರಣಕ್ಕಾಗಿ ಜನರು ಮತ ನೀಡುವುದಿಲ್ಲ. ಅದೊಂದೇ ಮಾನದಂಡ ಸಾಕಾಗುವುದಿಲ್ಲ. ಈಗ ಎಲ್ಲ ಮತದಾರರು ಪ್ರಭುದ್ಧರಾಗಿದ್ದಾರೆ ಅದಕ್ಕೆ ಈ ದಿನ ಇಲ್ಲಿ ಸೇರಿರುವ ಮಹಿಳಾ ಮಣಿಗಳೇ ಸಾಕ್ಷಿ. ಇವರೆಲ್ಲರೂ ಗ್ರಾಮೀಣ ಪ್ರದೇಶದವರು ಆದರೂ ಸಹ ಅವರಲ್ಲಿ ಪ್ರಭುದ್ಧತೆ ಎದ್ದು ಕಾಣುತ್ತದೆ ಎಂದು ರಾಘವೇಂದ್ರ ತಮ್ಮ ಅಭಿಮತ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಶಾಶ್ವತ ಪರಿಹಾರ ನೀಡುವುದಿಲ್ಲ. ಕೇವಲ ತಾತ್ಕಾಲಿಕವಾಗಿ ಕಣ್ಣೀರು ಒರೆಸುವ ತಂತ್ರದ ಭಾಗವಾಗಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ಎರಡು ಅವಧಿಯಲ್ಲಿ ಜಾರಿಗೆ ತಂದ ಮಹಿಳಾ ಪರ ಯೋಜನೆಗಳು ಶಾಶ್ವತ ಪರಿಹಾರ ನೀಡಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುನ್ನಲೆಗೆ ಬರಲು ಈಗಾಗಲೇ ಸಹಕಾರಿಯಾಗಿದೆ. ನಾರಿ ಶಕ್ತಿ ವಂದನಾ ನಿರ್ಣಯಕ್ಕೆ ಅನುಮೋದನೆ ನೀಡಿ ಹೆಣ್ಣು ಮಕ್ಕಳ ಸಶಕ್ತಿಕರಣಕ್ಕೆ ಬಲ ತುಂಬುತ್ತಿದೆ. ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಜೀವನ ಸಾಗಿಸಲು ಜೊತೆಗೆ ಸಮಾಜದಲ್ಲಿನ ತನ್ನ ಕುಟುಂಬದ ಸ್ಥಾನಮಾನ ಉತ್ತಮವಾಗುವುದಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಕ್ಷೇತ್ರದ ಮತದಾರರ ಗಮನಕ್ಕೆ ತಂದು ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡುವಂತೆ ಆಗ್ರಹಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸಿದ ಸಂದರ್ಭದಲ್ಲಿ “ಭಾಗ್ಯಲಕ್ಷ್ಮಿ” ಎಂಬ ಐತಿಹಾಸಿಕ ಯೋಜನೆ ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಜಾರಿಗೆ ತಂದ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ ಸೇರಿದಂತೆ ಇನ್ನೂ ಅನೇಕ ಮಾದರಿ ಯೋಜನೆಗಳು ನೀಡಿದ್ದನ್ನು ಸಭೆಯ ಮುಂದೆ ತೆರೆದಿಟ್ಟು, ಈ ಎಲ್ಲ ಅಂಶಗಳನ್ನು ಮತದಾರ ಪ್ರಭುಗಳ ಗಮನಕ್ಕೆ ತಲುಪಿಸಿ ಬರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಹೆಚ್ಚಿನ ಮತ ನೀಡುವಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.

ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಆಶಾ ರವೀಂದ್ರ ಅಧ್ಯಕ್ಷತೆ ವಹಿಸಿದ್ದ ಈ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಕೆ ವಿ ಸುಬ್ರಮಣ್ಯ, ನಿಕಟಪೂರ್ವ ಅಧ್ಯಕ್ಷ ಬಿಳಗೋಡು ಗಣಪತಿ, ಜಿಲ್ಲಾ ಮುಖಂಡರಾದ ಎನ್ ಆರ್ ದೇವಾನಂದ, ಸುರೇಶ್ ಸ್ವಾಮಿರಾವ್, ಮನೋಧರ, ಮಲ್ಲಿಕಾರ್ಜುನ್, ಆರ್ ಟಿ ಗೋಪಾಲ್, ಆಲವಳ್ಳಿ ವೀರೇಶ್, ಎನ್ ಸತೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಡಾ. ರಾಜನಂದಿನಿ ಖಜಾಂಚಿ ಪದ್ಮಾ ಸುರೇಶ್, ನಾಗರತ್ನ ದೇವರಾಜ್, ಕೆ.ಟಿ ನಾಗರತ್ನ, ನಿರ್ಮಲಾ ಗಣೇಶ್, ಲೀಲಾ ಮಹೇಶ್ವರಿ, ಶರಾವತಿ ಸಿ ರಾವ್, ಪದ್ಮಿನಿ, ಗುಲಾಬಿ ಮರಿಯಪ್ಪ, ಕೃಷ್ಣವೇಣಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸುಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನ ದೇವರಾಜ್ ವಂದಿಸಿದರು.

Leave A Reply

Your email address will not be published.

error: Content is protected !!