ಸೆ.10 ರಂದು ಕಾಂಗ್ರೆಸ್ ಹೌಸ್ ಕಾದಂಬರಿ ಬಿಡುಗಡೆ

0 43

ಶಿವಮೊಗ್ಗ: ಬಿಡುಗಡೆಗೆ ಮುನ್ನವೇ ಸಂಚಲನ ಮೂಡಿಸಿದ ವಾಣಿ ಗೌಡರ `ಕಾಂಗ್ರೆಸ್ ಹೌಸ್’ ಕಾದಂಬರಿ ಸೆ.10ರಂದು ಸಂಜೆ 6 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಬಿಡುಗಡೆಯಾಗಲಿದೆ ಎಂದು ರಕ್ಷಣಾ ಫೌಂಡೇಷನ್ನಿನ ಪ್ರತಿಭಾ ಡಾಕಪ್ಪ ಗೌಡ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುಸ್ತಕ ಬಿಡುಗಡೆ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸುವರು. ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಹಿರಿಯ ಸಾಹಿತಿ ಸವಿತಾ ನಾಗಭೂಷಣ್, ಪ್ರಕಾಶಕ ಶರವಣ ಕುಮಾರ್ ಮುಂತಾದವರು ಉಪಸ್ಥಿತರಿರುವರು ಎಂದರು.


ಕಾದಂಬರಿ ಲೇಖಕಿ ವಾಣಿಗೌಡ ಮಾತನಾಡಿ, ಕಾಂಗ್ರೆಸ್ ಹೌಸ್ ಕಾದಂಬರಿ ನನ್ನ ಮೊದಲ ಕಾದಂಬರಿಯಾಗಿದೆ. ಈ ಕಾದಂಬರಿಯು ಒಂದು ಹೆಣ್ಣಿನ ಸಂಕಟಗಳ ಹೋರಾಟದ ನೈಜ ಕಥೆಯಾಗಿದೆ. ಆ ಹೆಣ್ಣಿನ ಅನುಭವಗಳನ್ನು ಆಕೆಯಿಂದಲೇ ಕೇಳಿ ಈ ಕೃತಿಯನ್ನು ರಚಿಸಲಾಗಿದೆ. ಇದಕ್ಕಾಗಿ 6 ತಿಂಗಳು ಅಧ್ಯಯನ ಮಾಡಿದ್ದೇನೆ. ಕಾದಂಬರಿ ಪೂರ್ಣಗೊಳಿಸಲು ಎರಡು ವರ್ಷ ಬೇಕಾಯಿತು ಎಂದರು.
ಕಾಂಗ್ರೆಸ್ ಹೌಸ್ ಎಂಬ ಹೆಸರೇ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದೆ. ಕಾದಂಬರಿ ಬಿಡುಗಡೆಗೂ ಮುನ್ನವೇ ಕಾದಂಬರಿಯ ವಸ್ತುವಿನ ಬಗ್ಗೆ ಚರ್ಚೆಯಾಯಿತು. ಇದು ಕಾಂಗ್ರೆಸ ಪಕ್ಷದ ಹಿನ್ನೆಲೆಯಲ್ಲಿ ಇರಬೇಕು ಎಂದುಕೊಂಡವರು ಬಹಳ ಜನ. ಈ ಬಗ್ಗೆ ಅನೇಕರು ನನ್ನ ಬಳಿ ಚರ್ಚಿಸಿದ್ದಾರೆ. ಆದರೆ ಈ ಕಾದಂಬರಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬAಧವೂ ಇಲ್ಲ ಎಂದರು.


ಈ ಕಾದಂಬರಿಯ ಪ್ರಮುಖ ಪಾತ್ರಗಳು ಮತ್ತು ಸನ್ನಿವೇಶ ಬಾಂಬೆಯದು. ಬಾಂಬೆಯಲ್ಲಿ ಕಾಂಗ್ರೆಸ್ ಹೌಸ್ ಎಂಬ ಬಡಾವಣೆಯೇ ಇದೆ. ಇದನ್ನು ರೆಡ್‌ಲೈಟ್ ಏರಿಯಾ ಎಂದು ಕೂಡ ಕರೆಯುತ್ತಿದ್ದರು. ಅಲ್ಲಿ ವಾಸಿಸುವ ಜನರು ಹೊರ ಜಗತ್ತಿನಿಂದ ವಿಮುಖವಾಗಿರುತ್ತಾರೆ. ಅಲ್ಲಿಯ ಬದುಕು, ಬವಣೆ, ಇವೆಲ್ಲವೂ ಮಾನವೀಯತೆಯೊಳಗಿನ ಮರ್ಮಗಳನ್ನು ಅಣಕಿಸುತ್ತವೆ. ಕೆಣಕಿಸುತ್ತವೆ. ಈ ಎಲ್ಲಾ ಘಟನೆಗಳನ್ನು ಇಟ್ಟುಕೊಂಡು ನನ್ನ ಅಭಿಪ್ರಾಯಗಳನ್ನು ಇದರ ಜೊತೆಗೆ ಹೆಣೆದು ಈ ಕಾದಂಬರಿಯನ್ನು ಬರೆದಿದ್ದೇನೆ. ಓದುಗರು ಸ್ವಾಗತಿಸುತ್ತಾರೆ ಎಂದುಕೊಂಡಿದ್ದೇನೆ ಎಂದರು.


ಈ ಪುಸ್ತಕವು 130 ಪುಟಗಳನ್ನು ಒಳಗೊಂಡಿದ್ದು, 199 ರೂ.ಗಳನ್ನು ಮುಖಬೆಲೆ ಇಡಲಾಗಿದೆ. ಬಿಡುಗಡೆಯ ದಿನದಂದು 150ರೂ.ಗಳಿಗೆ ನೀಡಲಾಗುವುದು ಎಂದರು.

Leave A Reply

Your email address will not be published.

error: Content is protected !!