ಸ್ವಾಸ್ಥ್ಯ ಜೀವನಕ್ಕೆ ಸತ್ವಯುತ ಸಿರಿಧಾನ್ಯಗಳನ್ನು ಬಳಸಿ ; ಸಚಿವ ಮಧು ಬಂಗಾರಪ್ಪ

0 162

ಶಿವಮೊಗ್ಗ : ಸ್ವಾಸ್ಥ್ಯ ಜೀವನಕ್ಕೆ ಸತ್ವಯುತ ಆಹಾರ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಬಳಸಿ ರೋಗಮುಕ್ತ ಹಾಗೂ ಆರೋಗ್ಯವಂತ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ (Madhu Bangarappa) ಅವರು ಹೇಳಿದರು.

ಅವರು ಇಂದು ಕೃಷಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಿರಿಧಾನ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದಿನ ಕಾಲದ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅನುಸರಿಸುತ್ತಿದ್ದ ಆಹಾರ ಪದ್ದತಿಯನ್ನು ಅನುಸರಿಸುವ ಅಗತ್ಯವಿದೆ. ರಾಗಿ, ಜೋಳ, ನವಣೆ ಮುಂತಾದ ಹೆಚ್ಚಿನ ನಾರಿನಾಂಶವಿರುವ ಆಹಾರಗಳು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ ಎಂದವರು ನುಡಿದರು.

ಬದಲಾದ ಜೀವನಶೈಲಿಯಿಂದಾಗಿ ಎಲ್ಲರೂ ತಮ್ಮ ಆಹಾರ ಪದ್ದತಿಯನ್ನು ಮರೆತಿರುವುದು ವಿಷಾದದ ಸಂಗತಿ. ಅನೇಕ ರೀತಿಯ ಕಾಯಿಲೆಗಳ ಹತೋಟಿಗೆ ಸಿರಿಧಾನ್ಯಗಳು ಸಹಕಾರಿಯಾಗಿವೆ. ನಾನೂ ಕೂಡ ಪ್ರತಿನಿತ್ಯ ರಾಗಿ ಗಂಜಿ, ರಾಗಿ ರೊಟ್ಟಿ ಮತ್ತು ಮುದ್ದೆ ಮುಂತಾದ ಆಹಾರವನ್ನು ಸೇವಿಸುವ ಅಭ್ಯಾಸ ಹೊಂದಿದ್ದೇನೆ.
– ಸಚಿವ ಮಧು ಎಸ್.ಬಂಗಾರಪ್ಪ

ಕೃಷಿಕರು ಕೂಡ ತಮ್ಮ ಹಿಂದಿನ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ವಿಮುಖರಾಗಿ ಆಧುನಿಕ ಕೃಷಿ ಪದ್ಧತಿಯತ್ತ ಮುಖ ಮಾಡಿದ್ದಾರೆ. ಇಲ್ಲಿಯೂ ಬದಲಾವಣೆ ಅಗತ್ಯವಾಗಿದೆ. ಸಿರಿಧಾನ್ಯಗಳ ಬಳಕೆ, ಅದರ ಮಹತ್ವದ ಕುರಿತು ಜನಸಾಮಾನ್ಯರಿಗೆ ಅರಿವಿನ ಕೊರತೆ ಇದೆ. ನಮ್ಮಲ್ಲಿಯೂ ಹಳೆಯ ಹಾಗೂ ಸಾಂಪ್ರದಾಯಿಕ ಆರೋಗ್ಯಕರ ಆಹಾರ ಪದ್ದತಿಗಳಿವೆ. ಅವುಗಳನ್ನು ಬಳಸುವ ಅಗತ್ಯವಿದೆ. ಅಲ್ಲಿಯೂ ವೈದ್ಯರಿಂದ ದೂರವಿರುವ ಆಹಾರ ಪದ್ದತಿಯನ್ನು ಅನುಸರಿಸುವ ಅಗತ್ಯವಿದೆ ಎಂದರು.


ಅತೀ ಹೆಚ್ಚಿನ ಪ್ರಮಾಣದ ಪೋಷಕಾಂಶಗಳ ಖಜಾನೆ ಎನಿಸಿರುವ ಸಿರಿಧಾನ್ಯಗಳು ದೇಹವನ್ನು ಸದೃಢಗೊಳಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ, ಸಿರಿಧಾನ್ಯಗಳು ಕಡಿಮೆ ಫಲವತ್ತತೆಯ ಭೂಮಿಯಲ್ಲಿಯೂ ಸಹ ಬೆಳೆಯಲು ಸಾಧ್ಯವಾಗಿದ್ದು, ರಾಸಾಯನಿಕ ಗೊಬ್ಬರಗಳಿಲ್ಲದೆ ಬರಡು ಭೂಮಿಯಲ್ಲಿಯೂ ಸಹಜವಾಗಿ ಬೆಳೆಯಬಹುದಾಗಿದೆ. ಆದ್ದರಿಂದ ಇವುಗಳನ್ನು ಬರಗಾಲದ ಮಿತ್ರ ಎಂದೇ ಕರೆಯಲಾಗುತ್ತದೆ ಎಂದರು.

2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿರುವುದರಿಂದ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ರೈತರಿಗೆ ಮತ್ತು ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಕಾರ್ಯಕ್ರಮವನ್ನು ಮತ್ತು ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನದ ಅಂಗವಾಗಿ ರೈತ ದಿನಾಚರಣೆಯನ್ನು ಇಂದೇ ಆಚರಿಸಲಾಗುತ್ತಿದೆ ಎಂದರು.

ಇಂದಿನ ಯುವಜನಾಂಗ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಾಡು ಕಟ್ಟುವ ಯುವಕರೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಸಿರಿಧಾನ್ಯಗಳನ್ನು ತಿನ್ನುವವರು ಆರೋಗ್ಯದಿಂದ ಸಿರಿವಂತರಾಗುವವರು ಎಂಬುವುದು ನಮ್ಮ ಗ್ರಾಮೀಣ ಜನತೆಯ ನಂಬಿಕೆ ಇದು ವೈಜ್ಞಾನಿಕವಾಗಿ ನಿಜವೂ ಹೌದು. ಈ ನಂಬಿಕೆಯೇ ಆಧುನಿಕತೆಯ ವ್ಯಸನಕ್ಕೆ ಸಿಕ್ಕ ನಗರದ ಜನತೆಯ ಜೀವನ ಶೈಲಿಗೆ ಹೊಸ ತಿರುವು ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ||ಜಗದೀಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ರೈತ ಮುಖಂಡ ಕೆ.ಟಿ.ಗಂಗಾಧರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಸಾಧಕರಾದ 10 ಮಂದಿಗೆ ಶ್ರೇಷ್ಟ ಕೃಷಿಕ ಪ್ರಶಸ್ತಿ ಹಾಗೂ ತಲಾ 25 ಸಾವಿ ರೂ.ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

Leave A Reply

Your email address will not be published.

error: Content is protected !!